×
Ad

Chikkamagaluru | ಇರಾನ್‌ನಲ್ಲಿ ನಾಪತ್ತೆಯಾಗಿದ್ದ ಕೊಪ್ಪ ಮೂಲದ ಯುವಕ ಪತ್ತೆ

Update: 2026-03-04 23:32 IST

ಚಿಕ್ಕಮಗಳೂರು, ಫೆ.4: ಇರಾನ್ ದೇಶದ ಮರ್ಚಂಟ್ ನೇವಿಯಲ್ಲಿ ತರಬೇತಿಗೆ ತೆರಳಿದ್ದ ಜಿಲ್ಲೆಯ ವಿದ್ಯಾರ್ಥಿ ನಿಶ್ಚಿತ್ ಸುರಕ್ಷಿತವಾಗಿದ್ದಾನೆ ಎಂದು ತಿಳಿದುಬಂದಿದೆ.

ಇರಾನ್ ಯುದ್ಧ ಆರಂಭಗೊಂಡ ಬಳಿಕ ಆತ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಆತನ ಪೋಷಕರು ಆತಂಕಕ್ಕೊಳಗಾಗಿ ಸರಕಾರದ ನೆರವು ಕೋರಿದ್ದರು. ಈ ವಿಚಾರವನ್ನು ಮಾಧ್ಯಮಗಳ ಮೂಲಕ ತಿಳಿದು ವಿದ್ಯಾರ್ಥಿಯ ಪತ್ತೆಗೆ ಕಾರ್ಯ ಪ್ರವೃತ್ತರಾದ ಅನಿವಾಸಿ ಭಾರತೀಯ ಸಮಿತಿಯ ಮಾಜಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಅವರು ಇರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಂಪರ್ಕಿಸಿದ್ದು, ವಿದ್ಯಾರ್ಥಿ ಸುರಕ್ಷಿತವಾಗಿರುವುದನ್ನು ಖಚಿತ ಪಡಿಸಿದ್ದಾರೆ.

ಜಿಲ್ಲೆಯ ಕೊಪ್ಪ ತಾಲೂಕಿನ ಗಡಿಕಲ್ಲು ಗ್ರಾಮದ ನಿವಾಸಿ ಮಹೇಶ್ ಎಂಬವರ ಮಗ ನಿಶ್ಚಿತ್ ಇರಾನ್‌ನಲ್ಲಿ ನಾಪತ್ತೆಯಾಗಿದ್ದ ಯುವಕನಾಗಿದ್ದು, ಈತ ಕಳೆದ 5 ತಿಂಗಳ ಹಿಂದೆ ಇರಾನ್‌ನ ಮರ್ಚಂಟ್ ನೇವಿಯಲ್ಲಿ 5 ತಿಂಗಳ ತರಬೇತಿಗೆ ತೆರಳಿದ್ದ. ಸದ್ಯ ಇಸ್ರೇಲ್, ಅಮೆರಿಕ ಹಾಗೂ ಇರಾನ್ ನಡುವೆ ಯುದ್ಧ ಆರಂಭಗೊಂಡಿದ್ದು, ಯುದ್ಧ ಆರಂಭಕ್ಕೂ ಮುನ್ನ ಪೋಷಕರ ಸಂಪರ್ಕದಲ್ಲಿದ್ದ ನಿಶ್ಚಿತ್ ಯುದ್ಧ ಆರಂಭವಾದ ಬಳಿಕ ಪೋಷಕರ ಸಂಪರ್ಕಕ್ಕೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಕೊಪ್ಪದಲ್ಲಿರುವ ಆತನ ಪೋಷಕರು ತೀವ್ರ ಆತಂಕಕ್ಕೊಳಗಾಗಿದ್ದರು. ಅಲ್ಲದೆ ಜಿಲ್ಲಾಡಳಿತ, ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರ ನಿಶ್ಚಿತ್‌ನನ್ನು ಶೀಘ್ರ ಪತ್ತೆ ಹಚ್ಚಿ ಸ್ವದೇಶಕ್ಕೆ ಕರೆ ತರಬೇಕು ಎಂದು ಮನವಿ ಮಾಡಿದ್ದರು. ಸದ್ಯ ನಿಶ್ಚಿತ್ ಇರಾನ್‌ನಲ್ಲಿ ಸುರಕ್ಷಿತವಾಗಿದ್ದಾನೆಂಬ ಖಚಿತ ಮಾಹಿತಿ ಲಭ್ಯವಾಗಿದ್ದು, ಈ ವಿಚಾರ ತಿಳಿದ ನಿಶ್ಷಿತ್ ಪೋಷಕರು ನಿಟ್ಟುಸಿರುವ ಬಿಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News