×
Ad

Chikkamagaluru | ಕಾಡುಕೋಣ ದಾಳಿ; ರೈತನಿಗೆ ಗಂಭೀರ ಗಾಯ

Update: 2026-02-26 00:08 IST

ಚಿಕ್ಕಮಗಳೂರು: ಕಾಡಾನೆಗಳ ಹಾವಳಿಯಿಂದ ತತ್ತರಿಸಿರುವ ಕಾಫಿನಾಡಿನ ಜನತೆಗೆ ಈಗ ಕಾಡುಕೋಣಗಳ ಉಪಟಳ ಹೊಸ ಆತಂಕ ತಂದೊಡ್ಡಿದೆ. ಕೊಪ್ಪ ತಾಲೂಕಿನ ಮೇಗುಂದ ಹೋಬಳಿಯ ಮುಂಡೋಳು ಗ್ರಾಮದಲ್ಲಿ ಬುಧವಾರ ಮುಂಜಾನೆ ಕೃಷಿಕರೊಬ್ಬರ ಮೇಲೆ ಕಾಡುಕೋಣ ದಾಳಿ ನಡೆಸಿದ್ದು, ದಾಳಿಯಿಂದಾಗಿ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಶಿವಪ್ಪಗೌಡ (65) ಎಂಬವರು ಗಾಯಗೊಂಡ ಕೃಷಿಕ. ಬುಧವಾರ ಮುಂಜಾನೆ ಎಂದಿನಂತೆ ತಮ್ಮ ತೋಟಕ್ಕೆ ನೀರು ಹಾಯಿಸಲು ತೆರಳಿದ್ದ ಇವರು, ಮೋಟಾರ್ ಸ್ಟಾರ್ಟ್ ಮಾಡಲು ಮುಂದಾಗಿದ್ದರು. ಈ ವೇಳೆ ಅನಿರೀಕ್ಷಿತವಾಗಿ ಹಿಂಬದಿಯಿಂದ ನುಗ್ಗಿ ಬಂದ ಕಾಡುಕೋಣ, ಕೊಂಬಿನಿಂದ ಶಿವಪ್ಪಗೌಡರ ಮೇಲೆ ಎಗರಿ ದಾಳಿ ಮಾಡಿದೆ. ದಾಳಿಯ ತೀವ್ರತೆಗೆ ಶಿವಪ್ಪಗೌಡರ ತೊಡೆ ಹಾಗೂ ಬೆನ್ನಿನ ಭಾಗಕ್ಕೆ ಆಳವಾದ ಗಾಯಗಳಾಗಿದ್ದು, ಸ್ಥಳದಲ್ಲೇ ಕುಸಿದು ಬಿದ್ದಿದ್ದರು. ತಕ್ಷಣವೇ ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಗಾಯಗಳ ಸ್ವರೂಪ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ.

ಕಾಫಿನಾಡಿನ ಮಲೆನಾಡು ಭಾಗದಲ್ಲಿ ಕಾಡುಪ್ರಾಣಿಗಳ ಹಾವಳಿ ದಿನದಿಂದ ದಿನಕ್ಕೆ ಮಿತಿಮೀರುತ್ತಿದೆ. ಅತ್ತ ಆನೆಗಳ ಹಿಂಡು, ಇತ್ತ ಕಾಡುಕೋಣಗಳ ದಾಳಿಯಿಂದ ಕೃಷಿಕರು ತೋಟದ ಕೆಲಸಕ್ಕೇ ಹೋಗದಂತಹ ವಾತಾವರಣ ನಿರ್ಮಾಣವಾಗಿದೆ. ಅರಣ್ಯ ಇಲಾಖೆ ತಕ್ಷಣವೇ ಕಾರ್ಯಪ್ರವೃತ್ತರಾಗಿ ಕಾಡುಕೋಣಗಳ ಹಾವಳಿ ತಡೆಗಟ್ಟಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News