×
Ad

Chikkamagaluru | ಬಾಬಾ ಬುಡಾನ್ ದರ್ಗಾದಲ್ಲಿ ಉರೂಸ್‌ಗೆ ಚಾಲನೆ

ಶಾಖಾದ್ರಿ ನೇತೃತ್ವದಲ್ಲಿ ಆಚರಣೆಗೆ ಅವಕಾಶ ನೀಡದಿದ್ದಕ್ಕೆ ಅಸಮಾಧಾನ

Update: 2026-03-04 23:43 IST

ಚಿಕ್ಕಮಗಳೂರು : ಶ್ರೀ ಗುರು ದತ್ತಾತ್ರೇಯ ಬಾಬಾ ಬುಡಾನ್ ದರ್ಗಾದಲ್ಲಿ ಮೂರು ದಿನಗಳ ಕಾಲ ಜಿಲ್ಲಾಡಳಿತದ ವತಿಯಿಂದ ನಡೆಯುವ ಸಂದಲ್ ಉರೂಸ್ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಲಾಗಿದ್ದು, ಶ್ರೀ ಗುರು ಬಾಬಾ ಬುಡಾನ್ ದರ್ಗಾದ ಆಡಳಿತಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿಯಾಗಿರುವ ನಾರಾಯಣ ರಡ್ಡಿ ಕನಕರಡ್ಡಿ ನೇತೃತ್ವದಲ್ಲಿ ನಡೆದ ಉರೂಸ್ ಬಹುತೇಕ ಶಾಂತಿಯುತವಾಗಿ ನಡೆಯಿತು.

ಅತ್ತಿಗುಂಡಿಯಿಂದ ಬಾಬಾ ಬುಡಾನ್‌ಗಿರಿ ದರ್ಗಾದವರೆಗೆ ಸಾವಿರಾರು ಫಕೀರರು ಹಾಗೂ ಸಮುದಾಯದ ಮುಖಂಡರು ಸಂದಲ್‌ಅನ್ನು ಮೆರವಣಿಗೆಯಲ್ಲಿ ಕೊಂಡೊಯ್ದರು. ನಂತರ ದರ್ಗಾದ ಆವರಣದಲ್ಲಿ ಪ್ರಾರ್ಥನೆ ಸಲ್ಲಿಸುವುದರೊಂದಿಗೆ ಉರೂಸ್ ಆಚರಿಸಲಾಯಿತು. ಉರೂಸ್ ಹಿನ್ನೆಲೆಯಲ್ಲಿ ಅತ್ತಿಗುಂಡಿಯಿಂದ ಮೆರವಣಿಗೆಯಲ್ಲಿ ತರಲಾದ ಸಂದಲ್(ಗಂಧ)ಅನ್ನು ಫಕೀರರು ಹಾಗೂ ಸಮುದಾಯದ ಮುಖಂಡರು ಶಾಖಾದ್ರಿ ಅವರಿಗೆ ಒಪ್ಪಿಸಿದರು.

ನಂತರ ಶಾಖಾದ್ರಿ ಅವರು ಪಾರಂಪರಿಕ ಧಾರ್ಮಿಕ ವಿಧಿಯಂತೆ ಹಸಿರು ಬಟ್ಟೆ ಹಾಗೂ ಸಂದಲ್ ಅನ್ನು ಬಾಬಾ ಬುಡಾನ್‌ಗಿರಿಯ ಗುಹೆಯೊಳಗೆ ಇರುವ ಗೋರಿ, ಪೀಠಕ್ಕೆ ಲೇಪಿಸಲು ಮುಂದಾದರು. ಆದರೆ ಸ್ಥಳದಲ್ಲಿದ್ದ ಅಧಿಕಾರಿಗಳು ನ್ಯಾಯಾಲಯದ ಆದೇಶದ ಕಾರಣ ನೀಡಿ ಸಂದಲ್ ಹಾಗೂ ಹಸಿರು ಬಟ್ಟೆಯನ್ನು ಗುಹೆಯೊಳಗೆ ಕೊಂಡೊಯ್ಯಲು ಶಾಖಾದ್ರಿಗೆ ಅವಕಾಶ ನೀಡಲಿಲ್ಲ. ನಂತರ ಸಂದಲ್ ಹಾಗೂ ಹಸಿರು ಬಟ್ಟೆಯನ್ನು ಮುಜಾವರ್‌ಗೆ ಹಸ್ತಾಂತರಿಸಿ, ಜಿಲ್ಲಾಡಳಿತದ ಸೂಚನೆಯಂತೆ ಮುಜಾವರ್ ಧಾರ್ಮಿಕ ವಿಧಿ ನೆರವೇರಿಸಿದರು.

ಶಾಖಾದ್ರಿ ಅವರಿಗೆ ಸಂದಲ್ ಹಾಗೂ ಹಸಿರುಬಟ್ಟೆಯೊಂದಿಗೆ ಗುಹೆಯೊಳಗೆ ಪ್ರವೇಶ ನಿರಾಕರಣೆಯಿಂದಾಗಿ ಸ್ಥಳದಲ್ಲಿ ಸಣ್ಣ ಗೊಂದಲ ಉಂಟಾಯಿತು. ಸ್ಥಳದಲ್ಲಿ ಮುಖಂಡರು ಶಾಖಾದ್ರಿ ನೇತೃತ್ವದಲ್ಲಿ ಕೆಲ ಹೊತ್ತು ಧರಣಿ ನಡೆಸಿದರು. ಉರೂಸ್ ಆಚರಣೆ ಸಂಬಂಧ ಈ ಹಿಂದೆ ನ್ಯಾಯಾಲಯಗಳು ನೀಡಿರುವ ಆದೇಶದಂತೆ ಉರೂಸ್ ಆಚರಿಸಬೇಕು, ಶಾಖಾದ್ರಿ ಮತ್ತು ಸಜ್ಜಾದ್ ಎ ನಿಶಾನ್ ನೇತೃತ್ವದಲ್ಲಿ ಉರೂಸ್ ನಡೆಯಬೇಕೆಂದು ಒತ್ತಾಯಿಸಿದರು. ಇದಕ್ಕೆ ಜಿಲ್ಲಾಡಳಿತ ಒಪ್ಪದಿದ್ದಾಗ ಸ್ಥಳದಲ್ಲಿದ್ದವರು ಜಿಲ್ಲಾಡಳಿತದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.

ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು, ಅಧಿಕಾರಿಗಳು, ಸಮುದಾಯದ ಮುಖಂಡರು ಯಾವುದೇ ಗೊಂದಲ, ವಾಗ್ವಾದಕ್ಕೆ ಆಸ್ಪದ ನೀಡಲಿಲ್ಲ. ನಂತರ ಗುಹೆಯ ಮುಂಭಾಗದ ಆವರಣದಲ್ಲಿ ಫಕೀರರು ಹಾಗೂ ಸಮುದಾಯದ ಜನರು ಪ್ರಾರ್ಥನೆ ಸಲ್ಲಿಸುವ ಮೂಲಕ ಉರೂಸ್‌ನ ಮೊದಲ ದಿನದ ಧಾರ್ಮಿಕ ವಿಧಿ ನೆರವೇರಿಸಿದರು.

ಮೂರು ದಿನಗಳ ಕಾಲ ಉರೂಸ್ ನಡೆಯಲಿದ್ದು, ಗುರುವಾರ ದರ್ಗಾದ ಆವರಣದಲ್ಲಿ ಫಕೀರರಿಂದ ಪ್ರಾರ್ಥನೆ ಹಾಗೂ ವಿವಿಧ ಧಾರ್ಮಿಕ ಆಚರಣೆಗಳು ನಡೆಯಲಿವೆ. ಶುಕ್ರವಾರ ನಾಗೇನಹಳ್ಳಿಯ ಜನ್ನತ್ ನಗರದಲ್ಲಿ ಧಾರ್ಮಿಕ ಉರೂಸ್ ಅಂಗವಾಗಿ ವಿಧಿ ವಿಧಾನಗಳು ನಡೆಯುವುದರೊಂದಿಗೆ ಉರೂಸ್‌ಗೆ ತೆರೆ ಬೀಳಲಿದೆ.

ಉರೂಸ್ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ದರ್ಗಾದ ಆವರಣದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಿತ್ತು. ಉರೂಸ್‌ನಲ್ಲಿ ಜಿಲ್ಲೆ, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳ ಸುಮಾರು 5-6ಸಾವಿರ ಜನರು ಹಾಗೂ ಫಕೀರರು ಭಾಗವಹಿಸಿದ್ದರು. ಉರೂಸ್ ಹಿನ್ನೆಲೆಯಲ್ಲಿ ವಾಹನ, ಜನದಟ್ಟಣೆ ನಿಯಂತ್ರಣದ ಉದ್ದೇಶದಿಂದ ಬಾಬಾ ಬುಡಾನ್‌ಗಿರಿ ಹಾಗೂ ಮುಳ್ಳಯ್ಯನಗಿರಿಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿತ್ತು.

ಉರೂಸ್‌ನಲ್ಲಿ ಸೈಯದ್ ಗೌಸ್ ಮೊಹಿದ್ದೀನ್ ಶಾಖಾದ್ರಿ, ಸೈಯದ್ ಫಕ್ರುದ್ದೀನ್ ಶಾಖಾದ್ರಿ, ಸಮುದಾಯದ ಮುಖಂಡರಾದ ಜಂಶೀದ್, ಮುನೀರ್, ಸಿರಾಜ್, ನಸೀರ್ ಅಹ್ಮದ್, ಕಲಂದರ್ ಮತ್ತಿತರರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News