Chikkamagaluru | ಬಾಬಾ ಬುಡಾನ್ ದರ್ಗಾದಲ್ಲಿ ಉರೂಸ್ ವೇಳೆ ತಾರತಮ್ಯ: ಆರೋಪ
ಜಿಲ್ಲಾಡಳಿತದ ವಿರುದ್ಧ ‘ಎದ್ದೇಳು ಕರ್ನಾಟಕ’ ಪ್ರತಿಭಟನೆ
ಚಿಕ್ಕಮಗಳೂರು : ಗುರು ದತ್ತಾತ್ರೇಯ ಬಾಬಾ ಬುಡಾನ್ ದರ್ಗಾದಲ್ಲಿ ಜಾತ್ಯತೀತವಾಗಿ ಉರೂಸ್ ನಡೆಸಲು ಜಿಲ್ಲಾಡಳಿತ ಅವಕಾಶ ನೀಡಿಲ್ಲ ಎಂದು ಆರೋಪಿಸಿ ಎದ್ದೇಳು ಕರ್ನಾಟಕ ರಾಜ್ಯ ಸಮಿತಿ ಮುಖಂಡರು ಗುರುವಾರ ನಗರದಲ್ಲಿ ನಮ್ಮ ನಡೆ ಗಿರಿಯ ಕಡೆ ಘೋಷಣೆಯೊಂದಿಗೆ ಧರಣಿ ನಡೆಸಿ ರಾಜ್ಯ ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಹೋರಾಟಗಾರರನ್ನು ಬಂಧಿಸಿ ನಂತರ ಬಿಡುಗಡೆ ಮಾಡಿದರು.
ಎದ್ದೇಳು ಕರ್ನಾಟಕ ರಾಜ್ಯ ಸಮಿತಿ ಸಂಚಾಲಕರಾದ ಕೆ.ಎಲ್.ಅಶೋಕ್, ಗೌಸ್ ಮೊಹಿದ್ದೀನ್, ವೆಂಕಟೇಶ್ ಹಾಗಲಗಂಚಿ, ಗೌಸ್ ಮುನೀರ್ ಹಾಗೂ ವಿವಿಧ ಸಂಘಟನೆಗಳ ಮುಖಂಡರಾದ ಅಜ್ಮತ್ ಪಾಶ, ಜಂಶೀದ್‌ಖಾನ್, ಗಣೇಶ್ ಮತ್ತಿತರರು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಸಮಾವೇಶಗೊಂಡು ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಮುಖಂಡರು, ಐಡಿ ಪೀಠ ಗ್ರಾಮದ ಬಾಬಾ ಬುಡಾನ್ ದರ್ಗಾದಲ್ಲಿ ಬುಧವಾರ ಜಿಲ್ಲಾಡಳಿತ ಉರೂಸ್‌ಗೆ ಚಾಲನೆ ನೀಡಿದ್ದು, ಈ ವೇಳೆ ಜಿಲ್ಲಾಡಳಿತ ನ್ಯಾಯಾಲಯದ ಆದೇಶಗಳನ್ನು ಗಾಳಿಗೆ ತೂರಿದೆ, ಅಲ್ಲದೇ ಸಾಂವಿಧಾನಿಕ ಜಾತ್ಯತೀತ ತತ್ವಗಳಿಗೆ ತಿಲಾಂಜನ ಹಾಡಿದೆ. ಬಾಬಾ ಬುಡಾನ್ ದರ್ಗಾದಲ್ಲಿ ಸಂಘಪರಿವಾರ ನಡೆಸುವ ದತ್ತಜಯಂತಿಯಂತಹ ಧಾರ್ಮಿಕ ಆಚರಣೆಗಳ ವೇಳೆ ಮನುವಾದಿಗಳ ತಾಳಕ್ಕೆ ತಕ್ಕಂತೆ ಕುಣಿಯುವ ಜಿಲ್ಲಾಡಳಿತ ತಲೆತಲಾಂತರಗಳಿಂದ ರೂಢಿಯಲ್ಲಿರುವ ಉರೂಸ್ ಆಚರಣೆ ವೇಳೆ ತಾರತಮ್ಯ ಮಾಡುತ್ತಿದೆ. ಈ ಮೂಲಕ ಒಂದು ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುತ್ತಿದೆ ಎಂದು ಆರೋಪಿಸಿದರು.
ಹಿಂದಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ನ್ಯಾಯಮೂರ್ತಿ ನಾಗಮೋಹನ್‌ದಾಸ್ ನೇತೃತ್ವದ ಸಮಿತಿ ನೀಡಿದ ವರದಿಯಂತೆ ಉರೂಸ್ ನಡೆಸಲು ಜಿಲ್ಲಾಡಳಿತ ಅವಕಾಶ ನೀಡಬೇಕಾಗಿತ್ತು, ಆದರೆ ಜಿಲ್ಲಾಡಳಿತ ಉರೂಸ್ ಸಂದರ್ಭದಲ್ಲಿ ದರ್ಗಾದ ಆವರಣದಲ್ಲಿರುವ ಗೋರಿಗಳಿಗೆ ಹಸಿರು ಬಟ್ಟೆ ಹಾಕಲು ಅವಕಾಶ ನೀಡಿಲ್ಲ. ಶಾಖಾದ್ರಿ, ಸಜ್ಜಾದ್ ಎ ನಿಶಾನ್ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗೂ ಜಿಲ್ಲಾಡಳಿತ ಅವಕಾಶ ನೀಡದೇ ಸಂವಿಧಾನದ ಜಾತ್ಯತೀತ ತತ್ವಗಳನ್ನು ಗಾಳಿಗೆ ತೂರಲಾಗಿದೆ ಎಂದು ದೂರಿದರು.
ಬಿಜೆಪಿ ಸರಕಾರದ ಅವಧಿಯಲ್ಲಿ ಸಚಿವರಾದ ಮಾಧುಸ್ವಾಮಿ, ಅಂಗಾರ ಹಾಗೂ ಶಶಿಕಲಾ ಜೊಲ್ಲೆ ನೇತೃತ್ವದ ಉಪ ಸಮಿತಿ ಎರಡು ಸಮುದಾಯದ ಮಹಿಳೆಯರನ್ನೊಳಗೊಂಡಂತೆ 8 ಜನ ಸದಸ್ಯರ ವ್ಯವಸ್ಥಾಪನಾ ಸಮಿತಿ ರಚನೆ ಮಾಡಿತ್ತು. ಅಲ್ಲದೇ ದರ್ಗಾದಲ್ಲಿ ಯಾವ ಯಾವ ಆಚರಣೆಗಳನ್ನು ನಡೆಸಬೇಕೆಂದೂ ಹೇಳಿತ್ತು. ಆದರೆ ಅಂದಿನ ಜಿಲ್ಲಾಡಳಿತ ಒಂದೇ ಸಮುದಾಯದ 7 ಜನ ಸದಸ್ಯರು ಹಾಗೂ ಮತ್ತೊಂದು ಸಮುದಾಯದ ಓರ್ವ ಸದಸ್ಯರನ್ನು ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಿತ್ತು. ಈ ಎಲ್ಲ ಸದಸ್ಯರು ಬಿಜೆಪಿಯ ಕಾರ್ಯಕರ್ತರಾಗಿದ್ದರು. ಈ ಸಮಿತಿ ಸದಸ್ಯರು ದರ್ಗಾದ ಮೂಲ ಆಚರಣೆಗೆ ವಿರುದ್ಧವಾದ ಎಲ್ಲ ಆಚರಣೆಗಳಿಗೂ ಅವಕಾಶ ನೀಡಿತ್ತು. ದತ್ತ ಜಯಂತಿಯಲ್ಲದೇ ಹುಣ್ಣಿಮೆ ಪೂಜೆ ಮುಂತಾದ ಹೊಸ ಹೊಸ ಆಚರಣೆಗೆ ಆ ಕಮಿಟಿ ಅವಕಾಶ ಮಾಡಿಕೊಟ್ಟಿತ್ತು. ಸದ್ಯ ಈ ಸಮಿತಿಯ ಅವಧಿ ಕೂಡ ಮುಗಿದಿದ್ದರೂ ರಾಜ್ಯದ ಕಾಂಗ್ರೆಸ್ ಸರಕಾರ ಹೊಸ ಸಮಿತಿಯನ್ನು ರಚನೆ ಮಾಡದೇ ಮುಸ್ಲಿಮ್ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ದೂರಿದರು.
ರಾಜ್ಯ ಸರಕಾರ ಈ ಸಂಬಂಧ ಕೂಡಲೇ ನ್ಯಾಯಬದ್ಧ ತೀರ್ಪು ತೆಗೆದುಕೊಳ್ಳಬೇಕು, ಹಾಗೆಯೇ ನಾಗಮೋಹನ್ ದಾಸ್ ವರದಿಯನ್ನು ಸಂಪೂರ್ಣವಾಗಿ ಜಾರಿ ಮಾಡಬೇಕು, ತಪ್ಪಿದಲ್ಲಿ ಎದ್ದೇಳು ಕರ್ನಾಟಕ ರಾಜ್ಯಾದ್ಯಂತ ಉಗ್ರ ಹೋರಾಟಕ್ಕೆ ಅಣಿಯಾಗಲಿದೆ ಎಂದು ಎಚ್ಚರಿಸಿದರು.
ಈ ವೇಳೆ ನಮ್ಮ ನಡೆ ಗಿರಿ ಕಡೆ ಎಂಬ ಘೋಷಣೆಯೊಂದಿಗೆ ಮುಖಂಡರು ಜಿಲ್ಲಾಧಿಕಾರಿ ಕಚೇರಿಯತ್ತ ಹೊರಟರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಮುಖಂಡರನ್ನು ತಡೆದರು. ಈ ಸಂದರ್ಭ ಪೊಲೀಸರು ಮತ್ತು ಹೋರಾಟಗಾರರ ನಡುವೆ ಕೆಲ ಹೊತ್ತು ಮಾತಿನ ಚಕಮಕಿ ನಡೆಯಿತು. ಈ ವೇಳೆ ಮುಖಂಡರನ್ನು ಪೊಲೀಸರು ಬಂಧಿಸಿದರು.