ಸಾಂದರ್ಭಿಕ ಚಿತ್ರ | PC : Gemini AI

ಚಿಕ್ಕಮಗಳೂರು : ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ 243 ಅರ್ಹ ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲು ಕೊಪ್ಪ ತಾಲೂಕು ಬಿಜೆಪಿ ಮಂಡಲದ ಅಧ್ಯಕ್ಷ ಸೇರಿದಂತೆ ಐವರು ಆಕ್ಷೇಪಣಾ ಆರ್ಜಿಗಳನ್ನು ಸಲ್ಲಿಸಿರುವ ವಿಚಾರ ಸದ್ಯ ಜಿಲ್ಲಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ರಾಜಕೀಯ ಕಾರಣಕ್ಕೆ ಒಂದು ಪಕ್ಷದ ಮುಖಂಡರು ಉದ್ದೇಶಪೂರ್ವಕವಾಗಿ ಮತದಾರರ ಹೆಸರುಗಳನ್ನು ಡಿಲೀಟ್ ಮಾಡಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಕೊಪ್ಪ ತಾಲೂಕಿನ ವಿವಿಧ ಬೂತ್‍ಗಳ ಮತದಾರರಾಗಿರುವ 243 ಮತದಾರರು ಅರ್ಹ ಮತದಾರರಾಗಿದ್ದರೂ ರಾಜಕೀಯ ಲಾಭ ಪಡೆದುಕೊಳ್ಳುವ ಉದ್ದೇಶದಿಂದ ಈ ಆಕ್ಷೇಪಣೆಗಳನ್ನು ಸಲ್ಲಿಸಿರುವುದು ಬಿಜೆಪಿ ಮುಖಂಡರೊಬ್ಬರು ತಾವು ಸಲ್ಲಿಸಿದ್ದ ಫಾರಂ 7 ಅರ್ಜಿ ಹಿಂಪಡೆದಿರುವ ಘಟನೆಯಿಂದ ಸ್ಪಷ್ಟವಾಗುತ್ತಿದೆ. ಬಿಜೆಪಿ ಮುಖಂಡರು ಡಿಲೀಟ್‍ಗೆ ಪಾರಂ 7 ರಲ್ಲಿ 243 ಹೆಸರು ಸೂಚಿಸಿದ್ದು, 243 ಮತದಾರರಲ್ಲಿ 25 ಮಂದಿ ಕ್ರಿಶ್ಚಿಯನ್ ಸಮುದಾಯದವರಾಗಿದ್ದರೆ ಉಳಿದ ಮತದಾರರು ಅಲ್ಪಸಂಖ್ಯಾತ ಸಮುದಾಯದ ಮತದಾರರಾಗಿದ್ದಾರೆ. 243 ಮತದಾರರು ಹಾಲಿ ವಾಸಸ್ಥಳದಲ್ಲೇ ವಾಸವಾಗಿದ್ದು, ಬೇರೆಲ್ಲೂ ಮತದಾನಕ್ಕೆ ತಮ್ಮ ಹೆಸರನ್ನು ನಮೂದಿಸಿಕೊಂಡಿಲ್ಲ. ಇದನ್ನು ಕೊಪ್ಪ ಸಂಯುಕ್ತ ಮುಸ್ಲಿಂ ಜಮಾತ್‍ನ ಮುಖಂಡರು ಪರಿಶೀಲಿಸಿ ದೃಢಪಡಿಸಿಕೊಂಡಿದ್ದು, ಬಿಜೆಪಿ ಮುಖಂಡರು ಉದ್ದೇಶಪೂರ್ವಕವಾಗಿ ಹೆಸರು ಡಿಲೀಟ್ ಮಾಡಲು ಫಾರಂ 7 ಸಲ್ಲಿಸಿರುವುದು ಸ್ಪಷ್ಟವಾಗುತ್ತಿದೆ.

ಕೊಪ್ಪ ತಾಲೂಕು ಬಿಜೆಪಿ ಮಂಡಲದ ಅಧ್ಯಕ್ಷ ದಿನೇಶ್ ಎಂಬವರು 63 ಮಂದಿ ಮತದಾರರ ಹೆಸರು ಡಿಲೀಟ್‍ಗೆ ಅರ್ಜಿ ಸಲ್ಲಿಸಿದ್ದರೆ, ಶಾತನಿಕ ಎಂಬವರು 104 ಮತದಾರರ ಹೆಸರು ಡಿಲೀಟ್‍ಗೆ ಅರ್ಜಿ ಸಲ್ಲಿಸಿದ್ದಾರೆ. ಹಾಲಪ್ಪ ಎಂಬವರು 60, ಕಾರ್ತಿಕ್ ಎಂಬವರು 8, ಬಿಶೇಜ ಎಂಬವರು 5, ಅರ್ಜುನ್ ಎಂಬವರು 3 ಮಂದಿ ಮತದಾರರ ಹೆಸರು ಡಿಲೀಟ್‍ಗೆ ಅರ್ಜಿ ಸಲ್ಲಿಸಿದ್ದಾರೆ. ಪಾರಂ 7 ಅರ್ಜಿಯಲ್ಲಿ ಹೆಸರು ಡಿಲೀಟ್ ಮಾಡಲು ಈ ಮುಖಂಡರು ನೀಡಿರುವ ಕಾರಣ, ಈ ಮತದಾರರು ಬೇರೆಡೆ ಮತದಾನಕ್ಕೆ ನೋಂದಾಯಿಸಿಕೊಂಡಿದ್ದಾರೆ, ವಾಸ ಸ್ಥಳದಲ್ಲಿ ಇರುವುದಿಲ್ಲ ಎಂಬ ಕಾರಣವನ್ನು ನೀಡಿದ್ದಾರೆ. ಫಾರಂ 7 ಆಕ್ಷೇಪಣಾ ಅರ್ಜಿ ಸಲ್ಲಿಸಿರುವ ಈ ಎಲ್ಲ ಮುಖಂಡರು ಕೊಪ್ಪ ತಾಲೂಕು ಬಿಜೆಪಿ ಮುಖಂಡರಾಗಿದ್ದಾರೆ.

ಆಕ್ಷೇಪಣೆ ಅರ್ಜಿ ಹಿಂಪಡೆಯುವ ವೇಳೆ ಯಡವಟ್ಟು: ಕೊಪ್ಪ ತಾಲೂಕಿನ ವಿವಿಧ ಬೂತ್‍ಗಳ ಮತದಾರರಾಗಿರುವ 243 ಮತದಾರರ ಹೆಸರು ಡಿಲೀಟ್‍ಗೆ ಎಚ್.ಕೆ.ದಿನೇಶ್ ಸೇರಿದಂತೆ ಒಟ್ಟು 6 ಮಂದಿ ಅರ್ಜಿ ಸಲ್ಲಿಸಿದ್ದು, 243 ಮಂದಿ ಮತದಾರರೂ ಅರ್ಹ ಮತದಾರರು ಎಂಬುದು ದೃಢವಾಗುತ್ತಿದ್ದಂತೆ ಬಿಜೆಪಿ ಮುಖಂಡ ಎಚ್.ಕೆ.ದಿನೇಶ್ ಸೆ.29ರಂದು ಕೊಪ್ಪ ತಾಲೂಕು ಚುನಾವಣಾಧಿಕಾರಿಗೆ ಆಕ್ಷೇಪಣೆ ಅರ್ಜಿ ಹಿಂಪಡೆಯುತ್ತಿರುವುದಾಗಿ ಪತ್ರ ಸಲ್ಲಿಸಿದ್ದಾರೆ. ಹೀಗೆ ಅರ್ಜಿ ಸಲ್ಲಿಸುವ ಸಂದರ್ಭ ದಿನೇಶ್ ಸಲ್ಲಿಸಿದ್ದ 63 ಆಕ್ಷೇಪಣಾ ಅರ್ಜಿಗೆ ಬದಲಾಗಿ ಶಾತನಿಕ, ಹಾಲಪ್ಪ, ಕಾರ್ತಿಕ್, ಅರ್ಜುನ್, ಬಿಶೇಜ ಎಂಬವರು ಸಲ್ಲಿಸಿದ್ದ ಆಕ್ಷೇಪಣಾ ಆರ್ಜಿಗಳನ್ನೂ ಹಿಂಪಡೆಯುತ್ತಿರುವುದಾಗಿ ಚುನಾವಣಾಧಿಕಾರಿಗಳಿಗೆ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದ್ದಾರೆ.

ಶಾತನಿಕ, ಹಾಲಪ್ಪ, ಕಾರ್ತಿಕ್, ಅರ್ಜುನ್, ಬಿಶೇಜ ಅವರ ಆಕ್ಷೇಪಣಾ ಅರ್ಜಿಗಳಿಗೆ ಖುದ್ದು ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದವರೆ ಅರ್ಜಿ ಸಲ್ಲಿಸಬೇಕೆಂಬ ನಿಯಮವಿದ್ದರೂ 243 ಆಕ್ಷೇಪಣಾ ಅರ್ಜಿಗಳಿಗೂ ದಿನೇಶ್ ಒಬ್ಬರೇ ಅರ್ಜಿ ಹಿಂಪಡೆಯುತ್ತಿರುವುದಾಗಿ ಪತ್ರ ನೀಡಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.

ಎಸ್‍ಐಆರ್ ಸಂದರ್ಭ ಈ 243 ಮತದಾರರ ಮನೆಗಳಿಗೂ ಬಿಎಲ್‍ಒ, ಬಿಎಲ್‍ಎಗಳು ಭೇಟಿ ನೀಡಿದ್ದು, ಎಲ್ಲ ಮತದಾರರ ವಿವರಗಳನ್ನು ಅಧಿಕಾರಿಗಳು ಈ ಮತದಾರರಿಂದ ಪಡೆದಿದ್ದಾರೆ. ಈ ವೇಳೆ ಎಲ್ಲೂ ಈ ಮತದಾರರು ಬೇರೆಡೆ ಹೆಸರು ನೋಂದಾಯಿಸಿಕೊಂಡಿರುವುದು, ವಾಸ ಸ್ಥಳದಲ್ಲಿ ಇಲ್ಲದಿರುವ ವಿಚಾರ ಕಂಡು ಬಂದಿಲ್ಲ ಎಂಬುದನ್ನು ಬಿಎಲ್‍ಒ ಲಿಲ್ಲಿ ಜೋಯ್ ಎಂಬವರು ʼವಾರ್ತಾಭಾರತಿʼಗೆ ತಿಳಿಸಿದ್ದಾರೆ.

ಫಾರಂ 7ರಲ್ಲಿ ಆಕ್ಷೇಪಣೆ ಸಲ್ಲಿಸುವ ಸಂದರ್ಭ ಸುಳ್ಳು ಮಾಹಿತಿ, ದುರುದ್ದೇಶದಿಂದ ತಪ್ಪು ಮಾಹಿತಿ ನೀಡಿದ್ದಲ್ಲಿ ಅಂತಹ ಅರ್ಜಿದಾರರ ವಿರುದ್ಧ ಪ್ರಕರಣ ದಾಖಲಿಸಲು ಚುನಾವಣಾ ಆಯೋಗದ ಕಾನೂನಿನಲ್ಲಿ ಅವಕಾಶವಿದೆ.

ತಪ್ಪು ಮಾಹಿತಿಯೊಂದಿಗೆ ಫಾರಂ 7ಅರ್ಜಿ ಸಲ್ಲಿಸಿದ್ದ ಬಿಜೆಪಿ ಮುಖಂಡ ಎಚ್.ಕೆ.ದಿನೇಶ್ ಸೆ.29ರಂದು 243 ಆಕ್ಷೇಪಣಾ ಆರ್ಜಿಗಳ ವಿರುದ್ಧ ಯಾವುದೇ ಕ್ರಮ ಜರುಗಿಸಬಾರದೆಂದು ತಾನು ಸಲ್ಲಿಸಿದ್ದ ಅರ್ಜಿಗಳನ್ನು ಹಿಂಪಡೆಯುತ್ತಿರುವುದಾಗಿ ಕೊಪ್ಪ ತಹಶೀಲ್ದಾರ್‌ ಗೆ ಪತ್ರ ಸಲ್ಲಿಸಿದ್ದಾರೆ. ದಿನೇಶ್ ಅವರು 63 ಫಾರಂ 7 ಅರ್ಜಿ ಸಲ್ಲಿಸಿ, ಬೇರೆ ಬಿಜೆಪಿ ಮುಖಂಡರು ಸಲ್ಲಿಸಿದ್ದ ಅರ್ಜಿಗಳೂ ಸೇರಿ 243 ಅರ್ಜಿಗಳನ್ನೂ ಹಿಂಪಡೆಯುತ್ತಿರುವುದಾಗಿ ಪತ್ರ ನೀಡಿ ಯಡವಟ್ಟು ಮಾಡಿಕೊಂಡಿರುವುದರಿಂದ ಈ ಪತ್ರವನ್ನು ಚುನಾವಣಾಧಿಕಾರಿಗಳು ಸ್ವೀಕರಿಸಿಲ್ಲ ಎಂದು ತಿಳಿದು ಬಂದಿದೆ.

ಈ ಮಧ್ಯೆ ಕಾಂಗ್ರೆಸ್ ಮುಖಂಡ ಸುಧೀರ್‌ ಕುಮಾರ್ ಮುರೊಳ್ಳಿ ಅವರು, ತಪ್ಪು ಮಾಹಿತಿಯೊಂದಿಗೆ ಫಾರಂ 7 ಅರ್ಜಿ ಸಲ್ಲಿಸಿರುವ ದಿನೇಶ್ ಸೇರಿದಂತೆ 6 ಮಂದಿ ಬಿಜೆಪಿ ಮುಖಂಡರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.

ಫಾರಂ-7ರಲ್ಲಿ ನಾನು ಆಕ್ಷೇಪಣಾ ಅರ್ಜಿ ಸಲ್ಲಿಸಿರುವುದು ನಿಜ, ಸ್ಥಳೀಯ ಮುಖಂಡರು ನೀಡಿದ ಮಾಹಿತಿ ಆಧರಿಸಿ ಈ ಅರ್ಜಿ ಸಲ್ಲಿಸಿದ್ದೆ. 243 ಮತದಾರರು ಅರ್ಹ ಮತದಾರರು ಎಂಬುದು ತಿಳಿಯುತ್ತಿದ್ದಂತೆ ಆಕ್ಷೇಪಣಾ ಅರ್ಜಿಗಳನ್ನು ಹಿಂಪಡೆದುಕೊಂಡಿದ್ದೇನೆ. ಕೆಲವರು ರಾಜಕೀಯ ಕಾರಣಕ್ಕೆ ಈ ವಿಚಾರದಲ್ಲಿ ಗೊಂದಲ ಸೃಷ್ಟಿಸಿದ್ದೇನೆ. ಫಾರಂ 7ರಲ್ಲಿ ಅರ್ಜಿ ಸಲ್ಲಿಸಿದ ಮಾತ್ರಕ್ಕೆ ಮತದಾರ ಹೆಸರು ಡಿಲೀಟ್ ಆಗುವುದಿಲ್ಲ, ಕೆಲವರು ಗೊಂದಲ ಸೃಷ್ಟಿಸಲು ಮತದಾರರ ಹೆಸರನ್ನೇ ಡಿಲೀಟ್ ಮಾಡಿಸಿದ್ದಾರೆ ಎಂಬ ಸುಳ್ಳು ಹೇಳಿ ಗೊಂದಲ ಸೃಷ್ಟಿಸುತ್ತಿದ್ದಾರೆ.

- ಎಚ್.ಕೆ.ದಿನೇಶ್, ಕೊಪ್ಪ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ

ದೇಶಾದ್ಯಂತ ಮತಗಳ್ಳತನ ಆರೋಪ ಕೇಳಿ ಬರುತ್ತಿದೆ. ರಾಜಕೀಯ ಲಾಭಕ್ಕಾಗಿ ರಾಜಕೀಯ ಪಕ್ಷವೊಂದು ಮತಗಳ್ಳತನ ಮಾಡುತ್ತಿದೆ. ಇದಕ್ಕೆ ಕೊಪ್ಪ ತಾಲೂಕಿನಲ್ಲಿ 243 ಅರ್ಹ ಮತದಾರರ ಹೆಸರು ಡಿಲೀಟ್‍ಗೆ ಫಾರಂ 7 ಅರ್ಜಿ ಸಲ್ಲಿಸಿರುವ ಘಟನೆ ಸಾಕ್ಷಿಯಾಗಿದೆ. 243 ಮತದಾರರು ಅಲ್ಪಸಂಖ್ಯಾತರು ಮತ್ತು ಕ್ರಿಶ್ಚಿಯನ್ ಸಮುದಾಯದವರಾಗಿದ್ದಾರೆ. ಈ ಎಲ್ಲ ಮತದಾರರು ಹಾಲಿ ವಾಸ ಸ್ಥಳದ ನಿವಾಸಿಗಳಾಗಿದ್ದು, ಬೇರೆ ಎಲ್ಲೂ ಮತದಾನದ ಚೀಟಿ ಹೊಂದಿಲ್ಲ. ಇದನ್ನು ಖುದ್ದು ಪರಿಶೀಲಿಸಿ ಖಾತ್ರಿಪಡಿಸಿಕೊಂಡಿದ್ದೇವೆ. ರಾಜಕೀಯ ಲಾಭಕ್ಕಾಗಿ ರಾಜಕೀಯ ಪಕ್ಷವೊಂದರ ಮುಖಂಡರು ಹೀಗೆ ಅರ್ಹ ಮತದಾರರ ಹೆಸರು ಡಿಲೀಟ್ ಮಾಡಿಸಲು ಹುನ್ನಾರ ಮಾಡುತ್ತಿದ್ದಾರೆ.

- ಇಸ್ಮಾಯಿಲ್ ಸುಲ್ತಾನ್, ಪ್ರಧಾನ ಕಾರ್ಯದರ್ಶಿ ಸಂಯುಕ್ತ ಮುಸ್ಲಿಂ ಜಮಾತ್ ಕೊಪ್ಪ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - -ಕೆ.ಎಲ್.ಶಿವು

contributor