71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ | ಅತ್ಯುತ್ತಮ ನಟ ಪ್ರಶಸ್ತಿ ಹಂಚಿಕೊಂಡ ಶಾರೂಖ್ ಖಾನ್ ಮತ್ತು ವಿಕ್ರಾಂತ್ ಮೈಸಿ
PC | PTI
ಹೊಸದಿಲ್ಲಿ: ಶುಕ್ರವಾರ ಸಂಜೆ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟವಾಗಿದ್ದು, ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ಹಾಗೂ ವಿಕ್ರಾಂತ್ ಮೈಸಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ಅಚ್ಚರಿಯ ಆಯ್ಕೆಯಲ್ಲಿ ಹಿಂದಿಯ ‘ದಿ ಕೇರಳ ಸ್ಟೋರಿ’ ಅತ್ಯುತ್ತಮ ನಿರ್ದೇಶನದ ಚಿತ್ರ ಪ್ರಶಸ್ತಿಗೆ ಪಾತ್ರವಾಗಿದೆ.
ಇದಕ್ಕೂ ಮುನ್ನ, ತೀರ್ಪುಗಾರರು ತಮ್ಮ ವರದಿಯನ್ನು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರಾಜ್ಯ ಸಚಿವ ಎಲ್.ಮುರುಗನ್ ಅವರಿಗೆ ಸಂಜೆ ನಾಲ್ಕು ಗಂಟೆಗೆ ಸಲ್ಲಿಸಿದರು. ನಂತರ, ಪ್ರಶಸ್ತಿ ವಿಜೇತರ ಪಟ್ಟಿಯನ್ನು ಪ್ರಕಟಿಸಲಾಯಿತು.
ನಟ ಶಾರೂಖ್ ಖಾನ್ ಹಾಗೂ ವಿಕ್ರಾಂತ್ ಮೈಸಿ ಕ್ರಮವಾಗಿ ʼಜವಾನ್ʼ ಮತ್ತು ʼ12th ಫೇಲ್ʼ ಚಿತ್ರಗಳಲ್ಲಿನ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿಗೆ ಜಂಟಿಯಾಗಿ ಭಾಜನರಾಗಿದ್ದಾರೆ. ಮಿಸಸ್ ಚಟರ್ಜಿ ವರ್ಸಸ್ ನಾರ್ವೆ ಚಿತ್ರದಲ್ಲಿನ ಅಭಿನಯಕ್ಕಾಗಿ ರಾಣಿ ಮುಖರ್ಜಿ ಅವರು ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
2023ನೇ ಸಾಲಿನ ಚಲನಚಿತ್ರೇತರ ವಿಭಾಗದಲ್ಲಿ ಕನ್ನಡದ ʼಸನ್ ಫ್ಲವರ್ಸ್ ವರ್ ದ ಫಸ್ಟ್ ಒನ್ ಟು ನೋʼ ಚಿತ್ರದ ಅತ್ಯುತ್ತಮ ಚಿತ್ರಕತೆಗಾಗಿ ಚಿದಾನಂದ್ ನಾಯಕ್ ಪ್ರಶಸ್ತಿಗೆ ಭಾಜನರಾಗಿದ್ದರೆ, ಅತ್ಯುತ್ತಮ ನಿರ್ದೇಶನಕ್ಕಾಗಿ ಹಿಂದಿಯ ‘ಫ್ಲವರಿಂಗ್ ಮ್ಯಾನ್’ ಚಿತ್ರವನ್ನು ನಿರ್ದೇಶಿಸಿದ್ದ ಸೌಮ್ಯಜಿತ್ ಘೋಷ್ ದಸ್ತಿದಾರ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಅತ್ಯುತ್ತಮ ಚಲನಚಿತ್ರ ವಿಭಾಗದಲ್ಲಿ ಕನ್ನಡದ ʼಕಂದೀಲುʼ, ಹಿಂದಿಯ ʼಕಥಲ್: ಎ ಜಾಕ್ ಫ್ರೂಟ್ ಮಿಸ್ಟರಿʼ, ಮಲಯಾಳಂನ ʼಉಲ್ಲೊಳುಕ್ಕುʼ, ಮರಾಠಿಯ ʼಶ್ಯಾಮ್ಚಿ ಆಯಿʼ ಚಿತ್ರಗಳು ಪ್ರಶಸ್ತಿಗೆ ಆಯ್ಕೆಯಾಗಿವೆ.
ಅತ್ಯುತ್ತಮ ನೃತ್ಯ ನಿರ್ದೇಶನಕ್ಕಾಗಿ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯ ಧಿಂಧೋರ ಬಜೆ ರೇ ಗೀತೆ ಪ್ರಶಸ್ತಿಗೆ ಭಾಜನವಾಗಿದೆ.
ಅತ್ಯುತ್ತಮ ಗೀತೆ ಪ್ರಶಸ್ತಿಗೆ ಬಳಗಂನ ಊರು ಪಲ್ಲೆತುರು ಗೀತೆ ಆಯ್ಕೆಯಾಗಿದ್ದರೆ, ಅತ್ಯುತ್ತಮ ಧ್ವನಿ ವಿನ್ಯಾಸ ಪ್ರಶಸ್ತಿಗೆ ಅನಿಮಲ್ ಚಿತ್ರ ಭಾಜನವಾಗಿದೆ.
ಮಲಯಾಳಂನ ಉಲ್ಲೋಳುಕ್ಕು ಚಿತ್ರದಲ್ಲಿ ಅತ್ಯುತ್ತಮ ನಟನೆಗಾಗಿ ಊರ್ವಶಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೆ ಪಾತ್ರರಾಗಿದ್ದರೆ, ವಶಿ ಚಿತ್ರಕ್ಕಾಗಿ ಜಾನಕಿ ಬೊದಿಡಾಲಾ ಆಯ್ಕೆಯಾಗಿದ್ದಾರೆ.
ಮಲಯಾಳಂನ ಪೂಕ್ಕಳಂ ಚಿತ್ರದಲ್ಲಿನ ನಟನೆಗಾಗಿ ವಿಜಯರಾಘವನ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಅತ್ಯುತ್ತಮ ಮನರಂಜನಾ ಚಿತ್ರವಾಗಿ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರ ಆಯ್ಕೆಯಾಗಿದೆ.
ಅತ್ಯುತ್ತಮ ಚಲನಚಿತ್ರವಾಗಿ 12th ಫೇಲ್ ಚಲನಚಿತ್ರ ಆಯ್ಕೆಯಾಗಿದ್ದರೆ, ಪದಾರ್ಪಣೆ ನಿರ್ದೇಶಕರ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಮರಾಠಿಯ ಆತ್ಮಪಾಂಪ್ಲೆಟ್ ಚಿತ್ರ ಭಾಜನವಾಗಿದೆ.
ರಾಷ್ಟ್ರೀಯ, ಸಾಮಾಜಿಕ ಹಾಗೂ ಪರಿಸರ ಮೌಲ್ಯಗಳನ್ನು ಪ್ರಸಾರ ಮಾಡುವ ಅತ್ಯುತ್ತಮ ಚಿತ್ರವಾಗಿ ಸ್ಯಾಮ್ ಬಹದ್ದೂರ್ ಆಯ್ಕೆಯಾಗಿದೆ.