ನಟ, ನಿರ್ದೇಶಕ ರವೀಂದ್ರ ಮಹಾಜನಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ
ಮರಾಠಿ ನಟ, ನಿರ್ದೇಶಕ ರವೀಂದ್ರ ಮಹಾಜನಿ ಶುಕ್ರವಾರ ಪುಣೆಯ ತಾಲೆಗಾಂವ್ ದಭಾಡೆಯಲ್ಲಿರುವ ಕ್ಸೈರ್ಬಿಯಾ ಸೊಸೈಟಿಯಲ್ಲಿನ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ
ರವೀಂದ್ರ ಮಹಾಜನಿ (Twitter / @news24tvchannel)
ಮುಂಬೈ: ಮರಾಠಿ ನಟ, ನಿರ್ದೇಶಕ ರವೀಂದ್ರ ಮಹಾಜನಿ ಶುಕ್ರವಾರ ಪುಣೆಯ ತಾಲೆಗಾಂವ್ ದಭಾಡೆಯಲ್ಲಿರುವ ಕ್ಸೈರ್ಬಿಯಾ ಸೊಸೈಟಿಯಲ್ಲಿನ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು indianexpress.com ವರದಿ ಮಾಡಿದೆ.
ಮುಂಬೈ ನಿವಾಸಿಯಾದ ಮಹಾಜನಿ ಆ ಅಪಾರ್ಟ್‌ಮೆಂಟ್‌ನಲ್ಲಿ ಸುಮಾರು ಎಂಟು ತಿಂಗಳಿಂದ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಅಪಾರ್ಟ್‌ಮೆಂಟ್‌ನಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ಶುಕ್ರವಾರ ಸಂಜೆ ಸುಮಾರು 4.30 ಗಂಟೆಗೆ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆಯೇ ತಾಲೇಗಾಂವ್ ಎಂಐಡಿಸಿ ಪೊಲೀಸ್ ಠಾಣೆಯ ತಂಡವೊಂದು ಸ್ಥಳಕ್ಕೆ ಧಾವಿಸಿದಾಗ ಅಪಾರ್ಟ್‌ಮೆಂಟ್‌ನ ಬಾಗಿಲಿನ ಬೀಗವನ್ನು ಒಳಗಿನಿಂದ ಹಾಕಿರುವುದು ಕಂಡು ಬಂದಿದೆ. ಸ್ಥಳೀಯ ನಿವಾಸಿಗಳೆದುರು ಬಾಗಿಲು ಮುರಿದಿರುವ ಪೊಲೀಸರು, ಮನೆಯ ಒಳಗೆ ಪ್ರವೇಶಿಸಿದಾಗ ಮಹಾಜನಿಯ ಮೃತದೇಹ ಕಂಡು ಬಂದಿದೆ.
ಅಪಾರ್ಟ್‌ಮೆಂಟ್‌ನ ಮಾಲಕ ಮೃತ ವ್ಯಕ್ತಿಯನ್ನು ಮಹಾಜನಿ ಎಂದು ಗುರುತಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಮೃತದೇಹ ಪತ್ತೆಯಾಗುವುದಕ್ಕೂ ಎರಡು ಮೂರು ದಿನದ ಹಿಂದೆಯೇ ನಟ ಮಹಾಜನಿ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಈ ಕುರಿತು ಮೃತ ನಟನ ಕುಟುಂಬದ ಸದಸ್ಯರಿಗೆ ಮಾಹಿತಿ ರವಾನಿಸಿರುವ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ.
'ಮುಂಬೈಚಾ ಫೌಝ್‌ದಾರ್'(1984) ಹಾಗೂ 'ಕಲತ್ ನಾಕಲತ್'(1990)ನಂತಹ ಚಲನಚಿತ್ರಗಳಿಂದ ಮಹಾಜನಿ ಹೆಸರುವಾಸಿಯಾಗಿದ್ದರು. 1970ರ ಮಧ್ಯಭಾಗದಿಂದ ಹಲವು ದಶಕಗಳ ಕಾಲ ಅವರು ಮರಾಠಿ ಚಲನಚಿತ್ರ ರಂಗದಲ್ಲಿ ಮಹತ್ವದ ಭೂಮಿಕೆ ನಿರ್ವಹಿಸಿದ್ದರು.
ಅವರು ಇತ್ತೀಚೆಗೆ ಹಿಂದಿ ಸರಣಿ ಧಾರಾವಾಹಿ ಹಾಗೂ ಪಾಣಿಪತ್(2019)ನಂತಹ ಕೆಲವು ಚಲನಚಿತ್ರಗಳಲ್ಲೂ ಅಭಿನಯಿಸಿದ್ದರು. ಅವರ ಪುತ್ರ ಗಾಶ್ಮೀರ್ ಮಹಾಜನಿ ಕೂಡಾ ನಟರಾಗಿದ್ದಾರೆ.