'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರ ತಂಡಕ್ಕೆ ಕಾನೂನು ನೋಟಿಸ್ ಕಳಿಸಿದ ನಟಿ ರಮ್ಯ
ನಟಿ ರಮ್ಯ
ಬೆಂಗಳೂರು: ನನ್ನ ಭಾವಚಿತ್ರಗಳು ಹಾಗೂ ವಿಡಿಯೊಗಳನ್ನು ನನ್ನ ಅನುಮತಿ ಇಲ್ಲದೆ ಚಿತ್ರದ ಪ್ರಚಾರಕ್ಕೆ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿ, 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರ ತಂಡಕ್ಕೆ ಮಾಜಿ ಸಂಸದೆ ಹಾಗೂ ಕನ್ನಡ ಚಿತ್ರ ನಟಿ ರಮ್ಯ ಅಲಿಯಾಸ್ ದಿವ್ಯಾ ಸ್ಪಂದನ ಕಾನೂನು ನೋಟಿಸ್ ಕಳಿಸಿದ್ದಾರೆ. ಈ ತಪ್ಪಿಗಾಗಿ ರೂ. ಒಂದು ಕೋಟಿ ಪರಿಹಾರ ನೀಡಬೇಕು ಎಂದು ಚಿತ್ರ ತಂಡದೆದುರು ಮಂಡ್ಯದ ಮಾಜಿ ಸಂಸದೆಯೂ ಆಗಿರುವ ರಮ್ಯ ಬೇಡಿಕೆ ಇಟ್ಟಿದ್ದಾರೆ ಎಂದು indianexpress.com ವರದಿ ಮಾಡಿದೆ.
ಈ ಸಂಬಂಧ ಮಂಗಳವಾರ ನ್ಯಾಯಾಲಯವು ಮಧ್ಯಂತರ ತಡೆಯಾಜ್ಞೆ ನೀಡಿದ್ದು, ಮಾಹಿತಿಗಳ ಪ್ರಕಾರ, ಗುಲ್‌ಮೊಹರ್ ಫಿಲ್ಮ್ಸ್ ಪ್ರೈ. ಲಿ., ಝೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಪ್ರೈ. ಲಿ., ಗುಲ್‌ಮೊಹರ್ ಫಿಲ್ಮ್ಸ್ ಪ್ರೈ. ಲಿ.ನ ವರುಣ್ ಕುಮಾರ್ ಗೌಡ, ಚಿತ್ರದ ನಿರ್ದೇಶಕ ನಿತಿನ್ ಕೃಷ್ಣಮೂರ್ತಿ, ಛಾಯಾಗ್ರಾಹಕ ಅರವಿಂದ್ ಕಶ್ಯಪ್, ನಾಯಕ ನಟ ಪ್ರಜ್ವಲ್ ಬಿ.ಪಿ., ಎ2 ಮ್ಯೂಸಿಕ್ ಹಾಗೂ ಪರಂವಹ ಸ್ಟುಡಿಯೊಗೆ ನೋಟಿಸ್ ಜಾರಿಯಾಗಿದೆ.
ಈ ಕುರಿತು Indian Express ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ನಿರ್ದೇಶಕ ನಿತಿನ್, "ನನಗೀಗ ತಾನೆ ಈ ವಿಷಯ ತಿಳಿಯಿತು. ಚಿತ್ರ ಬಿಡುಗಡೆಗೆ ಇನ್ನೆರಡು ದಿನ ಮಾತ್ರ ಬಾಕಿಯಿರುವಾಗ ಈ ಸುದ್ದಿ ತಿಳಿದು ನನಗೆ ಆಘಾತವಾಗಿದೆ. ನಾನು ಯಾವುದೇ ಪ್ರತಿಕ್ರಿಯೆ ನೀಡುವ ಮುನ್ನ ನನ್ನ ತಂಡದೊಂದಿಗೆ ಮಾತನಾಡುತ್ತೇನೆ" ಎಂದು ತಿಳಿಸಿದ್ದಾರೆ.
"ನಿಮ್ಮೆಲ್ಲರ ವಿರುದ್ಧ ದಿನಾಂಕ 17/07/2023ರಂದು ಬೆಂಗಳೂರಿನ CCH-84 ವಾಣಿಜ್ಯ ನ್ಯಾಯಾಲಯದ 83ನೇ ಅಧಿಕ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರೆದುರು ದಾಖಲಾಗಿರುವ ಮಧ್ಯಂತರ ವಾಣಿಜ್ಯ ದಾವೆ ಸಂಖ್ಯೆ Com OS 812/2023 ಅನ್ವಯ ನಿಮ್ಮ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಲನಚಿತ್ರದ ಟ್ರೇಲರ್‌ನಲ್ಲಿ ಚಿತ್ರದ ಮುಖ್ಯ ಪಾತ್ರಧಾರಿಯೂ ಆಗಿರುವ ನಮ್ಮ ಕಕ್ಷಿದಾರರ ವಿಡಿಯೊ ತುಣುಕುಗಳನ್ನು ಅನಧಿಕೃತವಾಗಿ ಬಳಸಿಕೊಂಡಿರುವ ನಿಮ್ಮ ಕ್ರಮದಿಂದ ನಮ್ಮ ಕಕ್ಷಿದಾರರು ಸಂತ್ರಸ್ತರಾಗಿದ್ದಾರೆ. ನಮ್ಮ ಕಕ್ಷಿದಾರರು ತಮ್ಮ ವಿಡಿಯೊ ತುಣುಕುಗಳ ಬಳಕೆಯನ್ನು ಸ್ಪಷ್ವವಾಗಿ ಮತ್ತು ನಿಸ್ಸಂದಿಗ್ಧವಾಗಿ ನಿರಾಕರಿಸಿದ್ದರೂ ಈ ಕೃತ್ಯವನ್ನು ಎಸಗಲಾಗಿದೆ. ಈ ಮಧ್ಯಂತರ ದಾವೆಯು ಎಪ್ರಿಲ್ 2022ರಲ್ಲಿ ಮಾಡಿಕೊಳ್ಳಲಾಗಿರುವ ನಟನೆಯ ಒಪ್ಪಂದದೊಂದಿಗೆ ಹಕ್ಕು ಸ್ವಾಮ್ಯ ಕಾಯ್ದೆ, 1957ರ ಅನ್ವಯ ಆಕೆಯ ತಾರಾಮೌಲ್ಯ/ಪ್ರಚಾರದ ಹಕ್ಕನ್ನು ಉಲ್ಲಘಿಸಿದೆ ಎಂದು ಆರೋಪಿಸುತ್ತದೆ" ಎಂದು ಕಾನೂನು ನೋಟಿಸ್‌ನಲ್ಲಿ ಹೇಳಲಾಗಿದೆ.
ಚಿತ್ರದಲ್ಲಿ ರಿಷಭ್ ಶೆಟ್ಟಿ ಹಾಗೂ ರಮ್ಯ ಜೋಡಿಗಳಾಗಿ ನಟಿಸಿದ್ದು, ಚಿತ್ರವು ಜುಲೈ 21ರಂದು ಬಿಡುಗಡೆಗೆ ಸಜ್ಜಾಗಿದೆ. ಚಿತ್ರದ ಪ್ರಚಾರ ಚಿತ್ರೀಕರಣದಲ್ಲಿ ರಮ್ಯ ಮುಂಚಿತವಾಗಿಯೇ ಭಾಗವಹಿಸಿದ್ದರೂ, ಆಕೆಯೀಗ ನೀಡಿರುವ ಕಾನೂನು ನೋಟಿಸ್‌ನಿಂದ ಚಿತ್ರ ಬಿಡುಗಡೆ ಕುರಿತು ಅನಿಶ್ಚಿತತೆಯುಂಟಾಗಿದೆ.
ಚಿತ್ರೋದ್ಯಮ ಮೂಲಗಳ ಪ್ರಕಾರ, ಪ್ರಚಾರ ವಿಡಿಯೊ ಚಿತ್ರೀಕರಣದಲ್ಲಿ ಭಾಗವಹಿಸಿದ್ದ ರಮ್ಯ, ಆ ವಿಡಿಯೊವನ್ನು ಚಿತ್ರದಲ್ಲಿ ಮಾತ್ರ ಬಳಸಿಕೊಳ್ಳಬೇಕು ಎಂದು ಒತ್ತಿ ಹೇಳಿದ್ದರು. ಇದಾದ ನಂತರ, ಕನ್ನಡ ನಟ ದಿ. ಪುನೀತ್ ರಾಜಕುಮಾರ್ ಕೂಡಾ ಪ್ರಚಾರ ವಿಡಿಯೊ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಆದರೆ, ಚಿತ್ರದ ಟ್ರೇಲರ್ ಬಿಡುಗಡೆಯಾದಾಗ, ಅದರಲ್ಲಿ ರಮ್ಯ ಕಂಡು ಬಂದಿರುವುದರಿಂದ ಅವರು ಕಾನೂನು ನೋಟಿಸ್ ಜಾರಿಗೊಳಿಸಿದ್ದಾರೆ ಎಂದು ತಿಳಿಸಿವೆ.