ಮೂಗಿಯ ಸೇಡು..!
ಚಿತ್ರ: ಬೇಬಿ ಡು ಡೈ ಡು
ನಿರ್ದೇಶನ: ನಚಿಕೇತ್ ಸಾಮಂತ್
ನಿರ್ಮಾಣ: ಸಲೀಂ ಸಿಬ್ಲಿಂಗ್ಸ್
ತಾರಾಗಣ: ಹುಮಾ ಖುರೇಷಿ, ರಚಿತ್ ಸಿಂಗ್, ಸಿಕಂದರ್ ಖೇರ್, ಚಂಕಿ ಪಾಂಡೆ ಮೊದಲಾದವರು.
ಸಣ್ಣದೊಂದು ಹಿನ್ನೋಟದ ಮೂಲಕ ಕಥೆ ಆರಂಭವಾಗುತ್ತದೆ. ಅವರು ಹದಿಹರೆಯದ ಅವಳಿ ಸಹೋದರಿಯರು. ಅವರಲ್ಲಿ ಒಬ್ಬಾಕೆಗೆ ಮಾತು ಬಾರದು. ಕಿವಿ ಕೇಳದು. ವ್ಯವಹಾರ ಸ್ಥಗಿತಗೊಂಡು ಮುಚ್ಚಲ್ಪಟ್ಟಿದ್ದ ಪಂಚತಾರಾ ಉಪಾಹಾರ ಗೃಹವೊಂದಕ್ಕೆ ಅವಳಿಗಳು ಕಾಲಿಡುತ್ತಾರೆ. ಅವರ ಕುತೂಹಲದ ಭೇಟಿ ಒಬ್ಬಳ ಕೊಲೆಯಲ್ಲಿ ಕೊನೆಯಾಗುತ್ತದೆ. ಕೊಲೆಗಾರ ಮುಖ ಮರೆಸಿಕೊಂಡಿರುತ್ತಾನೆ. ಆದರೆ ಆತನ ಒಂದು ಕಿವಿ ಪೂರ್ತಿ ಕತ್ತರಿಸಿಕೊಂಡು ರಕ್ತ ಸೋರುತ್ತಿರುತ್ತದೆ. ಬದುಕಿ ಉಳಿದಾಕೆ ಅದೊಂದು ಗುರುತನ್ನು ಮಾತ್ರ ಮನದೊಳಗೆ ಭದ್ರವಾಗಿರಿಸುತ್ತಾಳೆ. ಅದನ್ನೇ ನೆನಪಿಟ್ಟುಕೊಂಡು ಕೊಲೆಗಾರನನ್ನು ಅರಸುತ್ತಾಳೆ. ಅವಳ ಸೇಡು ಗೆಲುವುದೇ? ಬದುಕು ಉಳಿವುದೇ? ಚಿತ್ರ ನೋಡಬೇಕು.
ಸೇಡಿನ ಕಥೆಗಳು ಸಿನೆಮಾಗೆ ಹೊಸತೇನಲ್ಲ. ಆದರೆ ಯುವತಿಯ ಸೇಡು ಹೇಗೆ ಅಪರೂಪವೋ ಅದೇ ರೀತಿ ಪೂರ್ತಿ ಚಿತ್ರದ ನಿರೂಪಣೆಯಲ್ಲೂ ಹೊಸತನವಿದೆ. ಅದು ಚಿತ್ರದ ಹೆಸರಿನಿಂದಲೇ ಶುರುವಾಗುತ್ತದೆ. ‘ಬೇಬಿ ಡು ಡೈ ಡು’ ಎನ್ನುವುದರಲ್ಲಿ ಬೇಬಿ ಎನ್ನುವುದು ಕಥಾ ನಾಯಕಿಯ ಹೆಸರು. ಕರ್ಮರ್ಕರ್ ಎನ್ನುವುದು ಆಕೆಯ ಉಪನಾಮ. ಅದನ್ನು ಹಿಂದಿಯಿಂದ ಆಂಗ್ಲಕ್ಕೆ ತರ್ಜುಮೆ ಮಾಡಿದಾಗ ಸಿಗುವ ಉತ್ತರವೇ ಡು ಡೈ ಡು! ಸತ್ತ ಬಳಿಕವೂ ಸಾಧಿಸುತ್ತಾಳೆ ಎನ್ನುವ ಸೂಚನೆ. ಹಾಗಂತ ಇದು ಖಂಡಿತವಾಗಿ ದೆವ್ವದ ಕಥೆಯಲ್ಲ. ಆದರೆ ಹೆಸರು ಈ ಕಥೆಗೆ ಹೇಗೆ ಅನ್ವರ್ಥವಾಗುತ್ತದೆ ಎನ್ನುವುದು ಚಿತ್ರದ ಕೊನೆಯಲ್ಲಿದೆ.
ಬೇಬಿ ಕರ್ಮರ್ಕರ್ ಎನ್ನುವ ಪಾತ್ರಕ್ಕೆ ಹುಮಾ ಖುರೇಷಿ ಜೀವ ತುಂಬಿದ್ದಾರೆ. ಸಂಭಾಷಣೆಯಲ್ಲೇ ಸಿನೆಮಾ ಎನ್ನುವ ನಿರ್ದೇಶಕರ ನಡುವೆ ನಾಯಕಿಯನ್ನೇ ಮೌನವಾಗಿಸಿದ್ದಾರೆ ನಚಿಕೇತ್. ಆದರೆ ದೃಶ್ಯಗಳೇ ಮಾತನಾಡಿವೆ. ಆಕೆಯ ಕಣ್ಣುಗಳಿಂದಷ್ಟೇ ಅಲ್ಲ, ನಿರ್ಜೀವ ಕೊಡೆಯಿಂದಲೂ ಕೆಲಸ ತೆಗೆಸಿದ್ದಾರೆ. ಚಿತ್ರದಲ್ಲಿ ಹೆಚ್ಚು ಪಾತ್ರಗಳಿಲ್ಲ. ಆದರೆ ಪ್ರತಿಯೊಬ್ಬರನ್ನು ಕೂಡ ನೆನಪಿರಿಸುವಂಥ ಸ್ವಭಾವ ಗುಣ ವಿಶೇಷಗಳನ್ನು ನೀಡಲಾಗಿದೆ. ಉದಾಹರಣೆಗೆ ಹಾಸ್ಯ ಪಾತ್ರಗಳಿಂದಲೇ ಗುರುತಿಸಿಕೊಳ್ಳುತ್ತಿದ್ದ ಚಂಕಿಪಾಂಡೆಯನ್ನು ಕೊಲೆಗಳ ದಲ್ಲಾಳಿಯಾಗಿ ತೋರಿಸಲಾಗಿದೆ. ಪಾತಕಿ ಜಾಫರ್ ಆಗಿ ಸಿಕಂದರ್ ಖೇರ್, ಪೊಲೀಸ್ ಅಧಿಕಾರಿ ಅಂಜುಮ್ ಖಾನ್ ಪಾತ್ರದಲ್ಲಿ ಸೀಮಾ ಪಹ್ವಾ ನಟನೆ ಕೂಡ ಗಮನಾರ್ಹ. ಸಾಮಾನ್ಯವಾಗಿ ಸೇಡಿನಲ್ಲಿ ಮುನ್ನುಗ್ಗುವ ನಾಯಕನ ಹಿಂದೆ ಮುಗ್ಧ ಯುವತಿ ಬೀಳುತ್ತಾಳೆ. ಆದರೆ ಇಲ್ಲಿ ಮುಗ್ಧ ಗಾಯಕನೋರ್ವ ನಾಯಕಿಯನ್ನು ಪ್ರೀತಿಸುತ್ತಾನೆ. ನಿಷ್ಕಲ್ಮಶ ವರ್ತನೆಯ ಗಾಯಕ ಸಿದ್ದುವಾಗಿ ರಚಿತ್ ಸಿಂಗ್ ಆಕರ್ಷಕ ಅಭಿನಯ ನೀಡಿದ್ದಾರೆ.
ಮತ್ತೊಂದು ಕಡೆ ಅತಿ ಕುಳ್ಳ ವ್ಯಕ್ತಿಗೆ ಲಕ್ಕಿ ಎನ್ನುವ ಭಯಾನಕ ಖಳ ಪಾತ್ರ ನೀಡಲಾಗಿದೆ. ವೈರುಧ್ಯತೆಯ ಉಚ್ಚಘಟ್ಟ ಎನ್ನುವಂತೆ ಇಲ್ಲೊಬ್ಬ ಪುರುಷನ ‘ವಿಶೇಷ ನೃತ್ಯ’ ಕೂಡ ಇದೆ! ಬಹುಶಃ ರಕ್ತಪಾತ ಮತ್ತು ಈ ನೃತ್ಯದ ಕಾರಣದಿಂದಾಗಿಯೇ ಚಿತ್ರಕ್ಕೆ ವಯಸ್ಕರ ಪ್ರಮಾಣ ಪತ್ರ ಲಭಿಸಿದೆ.
ಚಿತ್ರದ ಪ್ರತೀ ದೃಶ್ಯಗಳಲ್ಲಿ ಹೊಸತನ ಸೃಷ್ಟಿಸುವಲ್ಲಿ ಟೊಜೊ ಕ್ಸೇವಿಯರ್ ಛಾಯಾಗ್ರಹಣ, ನಿಖಿಲ್ ಪರಿಹರ್, ಆಶಿಷ್ ತ್ರಿಪಾಠಿ ಸಂಕಲನ ಮತ್ತು ಅರ್ಜುನ್ ಅಯ್ಯರ್ ಹಿನ್ನೆಲೆ ಸಂಗೀತ ಪ್ರಧಾನ ಪಾತ್ರವಹಿಸಿದೆ.
ನಾಯಕಿ ಪಾತ್ರಕ್ಕೆ ಸಿನಿಮೀಯ ಪ್ರಾಮುಖ್ಯತೆ ನೀಡುವ ಯತ್ನದಲ್ಲಿ ಒಂದಷ್ಟು ಕಡೆ ತರ್ಕ ಶೂನ್ಯವೆನಿಸುವ ದೃಶ್ಯಗಳಿವೆ. ಆದರೆ ವಾಣಿಜ್ಯಾತ್ಮಕ ಚಲನಚಿತ್ರದಲ್ಲಿ ಇವೆಲ್ಲವೂ ದೊಡ್ಡ ಸಂಗತಿಗಳಾಗುವುದಿಲ್ಲ.
ನಾಯಕಿ ತನ್ನ ಸೇಡು ಪೂರ್ತಿಗೊಳಿಸುವ ಕೊನೆಯ ಹಂತದಲ್ಲಿರುವಾಗ ಹಿನ್ನೆಲೆಯಲ್ಲಿ ಮುಂದಿನ ನಿಲ್ದಾಣ ‘ಬದಲಾಪುರ್’ ಎನ್ನುವ ಹೆಸರು ಕಾಣಿಸುತ್ತದೆ. ಇಂಥ ಸಣ್ಣಪುಟ್ಟ ಸೆಳೆತಗಳು ಚಿತ್ರದ ಉದ್ದಕ್ಕೂ ಇವೆ.
ಒಂದು ಸಾಮಾನ್ಯವೆನಿಸಬಹುದಾದ ಸೇಡಿನ ಕಥೆಯನ್ನು ನಿರ್ದೇಶನ, ತಾಂತ್ರಿಕತೆ ಮೂಲಕ ಹೇಗೆ ಕುತೂಹಲಗೊಳಿಸುವಂತೆ ತೋರಿಸಬಹುದು ಎನ್ನುವುದಕ್ಕೆ ಈ ಚಿತ್ರ ಉತ್ತಮ ಉದಾಹರಣೆ.