×
Ad

ಚಿತ್ರಮಂದಿರದ ಕಳಪೆ ಹವಾನಿಯಂತ್ರಣ ವ್ಯವಸ್ಥೆಯನ್ನು ದೂರಿದ ಪ್ರೇಕ್ಷಕರ ಮೇಲೆ ಹಲ್ಲೆ ನಡೆಸಿದ ಬೌನ್ಸರ್ ಗಳು: ವಿಡಿಯೊ ವೈರಲ್

ಸನ್ನಿ ಡಿಯೋಲ್ ನಾಯಕತ್ವದ ಗದ್ದರ್-2 ಚಲನಚಿತ್ರ ಗಲ್ಲಾಪೆಟ್ಟಿಗೆಯನ್ನು ಕೊಳ್ಳೆ ಹೊಡೆಯುವುದನ್ನು ಮುಂದುವರಿಸಿದೆ. ಈ ನಡುವೆ ಕಳಪೆ ಹವಾನಿಯಂತ್ರಣ ವ್ಯವಸ್ಥೆಯ ಬಗ್ಗೆ ದೂರಿದ ಕಾನ್ಪುರದ ಸೌತ್ ಎಕ್ಸ್ ಚಿತ್ರಮಂದಿರದ ಪ್ರೇಕ್ಷಕರ ಮೇಲೆ ಬುಧವಾರ ಬೌನ್ಸರ್ ಗಳು ಹಲ್ಲೆ ನಡೆಸಿದ ಘಟನೆ ನಡೆದಿದೆ.

Update: 2023-08-17 14:44 IST

Screengrab:Twitter/@Gagan4344

ಕಾನ್ಪುರ: ಸನ್ನಿ ಡಿಯೋಲ್ ನಾಯಕತ್ವದ ಗದ್ದರ್-2 ಚಲನಚಿತ್ರ ಗಲ್ಲಾಪೆಟ್ಟಿಗೆಯನ್ನು ಕೊಳ್ಳೆ ಹೊಡೆಯುವುದನ್ನು ಮುಂದುವರಿಸಿದೆ. ಈ ನಡುವೆ ಕಳಪೆ ಹವಾನಿಯಂತ್ರಣ ವ್ಯವಸ್ಥೆಯ ಬಗ್ಗೆ ದೂರಿದ ಕಾನ್ಪುರದ ಸೌತ್ ಎಕ್ಸ್ ಚಿತ್ರಮಂದಿರದ ಪ್ರೇಕ್ಷಕರ ಮೇಲೆ ಬುಧವಾರ ಬೌನ್ಸರ್ ಗಳು ಹಲ್ಲೆ ನಡೆಸಿದ ಘಟನೆ ನಡೆದಿದೆ ಎಂದು freepressjournal.in ವರದಿ ಮಾಡಿದೆ.

ಚಿತ್ರಮಂದಿರದ ಕಳಪೆ ಹವಾನಿಯಂತ್ರಣ ವ್ಯವಸ್ಥೆಯ ಕುರಿತು ಹಲವಾರು ಪ್ರೇಕ್ಷಕರು ಚಿತ್ರಮಂದಿರದ ವ್ಯವಸ್ಥಾಪಕರಿಗೆ ದೂರು ನೀಡಿದ ನಂತರ ಈ ಘಟನೆ ನಡೆದಿದೆ. ಆ ಕೂಡಲೇ ಬೌನ್ಸರ್ ಗಳನ್ನು ಅಲ್ಲಿಗೆ ನಿಯೋಜಿಸಿ, ದೂರಿದ ಪ್ರೇಕ್ಷಕರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಘಟನೆಯ ವಿಡಿಯೊ ವೈರಲ್ ಆಗಿದೆ.

‘ಜಾಗರಣ್’ ವರದಿಯ ಪ್ರಕಾರ, ಕಳಪೆ ಹವಾನಿಯಂತ್ರಣ ವ್ಯವಸ್ಥೆಯನ್ನು ಸರಿಪಡಿಸಿದ ನಂತರ ವ್ಯವಸ್ಥಾಪಕರೊಂದಿಗೆ ಬಂದಿದ್ದ ಬೌನ್ಸರ್ ಗಳು ತನ್ನ ಪುತ್ರರನ್ನು ಚಿತ್ರಮಂದಿರದಿಂದ ಹೊರಗೆ ಕರೆದು, ಅವರನ್ನು ಥಳಿಸಿದ್ದಾರೆ ಎಂದು ಚಿತ್ರಮಂದಿರದಲ್ಲಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಉಪಸ್ಥಿತರಿದ್ದ ಮಿಥಿಲೇಶ್ ಗುಪ್ತಾ ಎಂಬವರು ಆರೋಪಿಸಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು, ಘಟನೆಯ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡುವ ಮೂಲಕ ಆಕ್ರೋಶಗೊಂಡಿದ್ದ ಗುಂಪನ್ನು ಸಮಾಧಾನಿಸಲು ಯತ್ನಿಸಿದ್ದಾರೆ. ಈ ಸಂಬಂಧ ಸೂಕ್ತ ಸೆಕ್ಷನ್‍ ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಕಾನ್ಪುರ ಪೊಲೀಸ್ ಕಮಿಷನರೇಟ್ ಕೂಡಾ ಟ್ವೀಟ್ ಮಾಡಿದೆ.

ಇಂತಹುದೇ ಮತ್ತೊಂದು ಘಟನೆಯಲ್ಲಿ, ನೋಯ್ಡಾದ ಲಾಗಿಕ್ಸ್ ಮಾಲ್‍ ಚಿತ್ರಮಂದಿರದ ಪ್ರೊಜೆಕ್ಟರ್ ಸಮರ್ಪಕವಾಗಿ ಕಾರ್ಯನಿರ್ವಹಿಸದ ಕಾರಣ ಗದ್ದರ್-2 ವೀಕ್ಷಿಸಲು ತೆರಳಿದ್ದ ಸಿನಿಮಾ ಪ್ರೇಮಿಗಳಿಗೆ ಅಹಿತಕರ ಅನುಭವವಾಗಿದ್ದು, ಚಿತ್ರಮಂದಿರದಲ್ಲಿ ಗದ್ದಲ ಸೃಷ್ಟಿಯಾಗಿದೆ. ಪರಿಸ್ಥಿತಿಯು ಕೈ ಮೀರಿದಾಗ, ಪ್ರೊಜೆಕ್ಟರ್ ಕೆಲಸ ಮಾಡಲು ಪ್ರಾರಂಭಿಸುವುದಕ್ಕೂ ಮುನ್ನ ಸ್ಥಳಕ್ಕೆ ಪೊಲೀಸರನ್ನು ಕರೆಸಿಕೊಳ್ಳಲಾಗಿದೆ. ಈ ಘಟನೆಯಿಂದ ಪ್ರೇಕ್ಷಕರಿಗಾದ ಅನನುಕೂಲತೆಗೆ ಪಿವಿಆರ್ ತಂಡ ಕ್ಷಮೆ ಯಾಚಿಸಿದ್ದು, ಪ್ರತಿಯೊಬ್ಬ ಪ್ರೇಕ್ಷಕನಿಗೂ ಸಂಪೂರ್ಣ ಮರುಪಾವತಿ ಮಾಡಲಾಗುವುದು ಎಂದು ಭರವಸೆ ನೀಡಿದೆ.

ಅನಿಲ್ ಶರ್ಮ ನಿರ್ದೇಶಿಸಿರುವ ಗದ್ದರ್-2 ಚಲನಚಿತ್ರವು 2001ರಲ್ಲಿ ಬಿಡುಗಡೆಯಾಗಿದ್ದ ‘ಗದ್ದರ್: ಏಕ್ ಪ್ರೇಮ್ ಕಥಾ’ ಚಿತ್ರದ ಮುಂದುವರಿದ ಭಾಗವಾಗಿದೆ. ಈ ಚಿತ್ರದಲ್ಲಿ ಸನ್ನಿ ಡಿಯೋಲ್, ಅಮೀಷಾ ಪಟೇಲ್ ಅಭಿನಯಿಸಿದ್ದಾರೆ. ಈ ಚಿತ್ರವನ್ನು 1947ರಲ್ಲಿನ ದೇಶ ವಿಭಜನೆಯ ಹಿನ್ನೆಲೆಯಲ್ಲಿ ನಿರೂಪಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News