“ಇದರಲ್ಲಿ ಬಹಳ ಹಿಂದೂ-ಮುಸ್ಲಿಂ ಇದೆ”: ‘ಗದರ್’ ಕಥೆ ಕೇಳಿ ನಟ ಗೋವಿಂದ ನೀಡಿದ್ದ ಪ್ರತಿಕ್ರಿಯೆಯನ್ನು ಮೆಲುಕು ಹಾಕಿದ ನಿರ್ದೇಶಕ
Gadar 2 Director Recalls Govinda Turning Down Sunny Deol's Gadar Script
ಮುಂಬೈ: ಸನ್ನಿ ಡಿಯೋಲ್ ಅಭಿನಯದ ‘ಗದರ್-2’ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಈ ಚಿತ್ರ 2001 ರಲ್ಲಿ ತೆರೆ ಕಂಡ ಸನ್ನಿ ಡಿಯೋಲ್ ಅವರದ್ದೇ ಆದ ʼಗದರ್: ಏಕ್ ಪ್ರೇಮ್ ಕಥಾʼದ ಎರಡನೇ ಅವತರಣಿಕೆಯಾಗಿದ್ದು, ಈ ಚಿತ್ರಕ್ಕೆ ಸಂಬಂಧಿಸಿದ ಕುತೂಹಲಕಾರಿ ಅಂಶವನ್ನು ನಿರ್ದೇಶಕ ಅನಿಲ್ ಶರ್ಮಾ ಬಹಿರಂಗಪಡಿಸಿದ್ದಾರೆ.
‘ಗದರ್: ಏಕ್ ಪ್ರೇಮ್ ಕಥಾ’ ಚಿತ್ರಕ್ಕೆ ನಟ ಗೋವಿಂದ ಅವರು ಮೊದಲ ಆಯ್ಕೆಯಾಗಿದ್ದರು ಎಂಬ ವದಂತಿಯನ್ನು ಅನಿಲ್ ಶರ್ಮಾ ನಿರಾಕರಿಸಿದ್ದಾರೆ. ಈ ಹೇಳಿಕೆಯಲ್ಲಿ ಅರ್ಧ ಸತ್ಯವಿದೆ ಎಂದು ಅವರು ಹೇಳಿದ್ದಾರೆ.
‘ಬಾಲಿವುಡ್ ಹಂಗಾಮಾ’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಆಗಿನ ಮುಂಚೂಣಿ ನಟರಾಗಿದ್ದ ಗೋವಿಂದ ಬಳಿ ಗದರ್ ಚಿತ್ರದ ಕತೆಯನ್ನು ಹೇಳಿದ್ದೆ ಎಂದು ಅನಿಲ್ ಶರ್ಮಾ ಹೇಳಿದ್ದಾರೆ.
“ಮಹಾರಾಜ ಚಿತ್ರದ ಚಿತ್ರೀಕರಣದ ಸಮಯದಲ್ಲಿ ನಾನು ಗದರ್ ಚಿತ್ರಕಥೆಯನ್ನು ಗೋವಿಂದ್‌ಗೆ ವಿವರಿಸಿದ್ದೆ. ಸಿನೆಮಾದಲ್ಲಿ ನಾನು ಅವರನ್ನು ನಟಿಸಲು ಬಯಸಿ ಅವರ ಬಳಿ ಕಥೆಯನ್ನು ಹೇಳುತ್ತಿದ್ದೇನೆ ಎಂದು ಅವರು ಭಾವಿಸಿದ್ದರು” ಎಂದು ಅನಿಲ್ ಶರ್ಮಾ ಹೇಳಿದ್ದಾರೆ.
“ನಾನು ಈ ಚಿತ್ರವನ್ನು ಮಾಡುವುದಿಲ್ಲ. ಇದರಲ್ಲಿ ಬಹಳ ʼಹಿಂದೂ-ಮುಸ್ಲಿಂʼ ಇದೆ” ಎಂದು ಗೋವಿಂದ ಪ್ರತಿಕ್ರಿಯಿಸಿದ್ದರು. ಆದರೆ, ನಾನು ಈ ಚಿತ್ರವನ್ನು ಸನ್ನಿ ಡಿಯೋಲ್ ಜೊತೆ ಮಾಡಲಿದ್ದೇನೆ ಎಂದು ಗೋವಿಂದಗೆ ಸ್ಪಷ್ಟಪಡಿಸಿದೆ ಎಂದು ಅನಿಲ್ ಹೇಳಿದ್ದಾರೆ.
ಆದಾಗ್ಯೂ, ಗದರ್ ಚಿತ್ರಕ್ಕೆ ಗೋವಿಂದ ಅವರು ಕೆಟ್ಟ ಆಯ್ಕೆಯಾಗಿರಲಿಲ್ಲ. ಆದರೆ ಚಿತ್ರಕ್ಕಾಗಿ ಸನ್ನಿ ಡಿಯೋಲ್ ಅವರಂತಹ ಪಂಜಾಬಿ ವ್ಯಕ್ತಿ ಬೇಕಿತ್ತು ಎಂದು ಅನಿಲ್ ಶರ್ಮಾ ಹೇಳಿದ್ದಾರೆ.