ನಿರ್ದೇಶನ ನನ್ನ ಕನಸು -ರೂಪಶ್ರೀ ವರ್ಕಾಡಿ
ರೂಪಶ್ರೀ ವರ್ಕಾಡಿ ಕಳೆದ 26 ವರ್ಷಗಳಿಂದ ಸಕ್ರಿಯ ಕಲಾವಿದೆ. 700 ನಾಟಕಗಳ 4,000ಕ್ಕೂ ಅಧಿಕ ಪ್ರದರ್ಶನಗಳಲ್ಲಿ ನಟಿಸಿದ ಅನುಭವಿ. ತಿಲಕೆ ತಿರ್ಗಯೆ, ನಿತ್ಯೆ ಬನ್ನಗ, ಶಿವದೂತ ಗುಳಿಗೆ ಇವರು ನಟಿಸಿದ ಜನಪ್ರಿಯ ತುಳು ನಾಟಕಗಳು. ಇಂಥ ರಂಗಕಲಾವಿದೆ ಚಿತ್ರರಂಗದಲ್ಲಿ ನೂರರ ಗಡಿ ತಲುಪುವ ಮೊದಲೇ ಶ್ರೇಷ್ಠ ಪೋಷಕ ನಟಿಯಾಗಿದ್ದಾರೆ. ‘ಮಿಥ್ಯ’ ಚಿತ್ರದ ನಟನೆಗೆ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ರೂಪಶ್ರೀ ತಮ್ಮ ಕನಸುಗಳ ಬಗ್ಗೆ ಹೇಳಿಕೊಂಡಿದ್ದು ಹೀಗೆ...
ಶ್ರೇಷ್ಠ ಪೋಷಕ ನಟಿಯಾಗಿ ರಾಷ್ಟ್ರ ಪ್ರಶಸ್ತಿ ಘೋಷಿಸಲ್ಪಟ್ಟಿದೆ ಎಂದು ಗೊತ್ತಾದೊಡನೆ ಹೇಗಾಯಿತು?
► ಅಬ್ಬ! ಅದನ್ನು ಪದಗಳಲ್ಲಿ ವಿವರಿಸಲಾಗದು. ತಿಳಿದಾಕ್ಷಣವೇ ದೇವರ ಕೋಣೆಗೆ ಹೋಗಿ ಹದಿನೈದು ನಿಮಿಷ ಅಲ್ಲೇ ಕುಳಿತಿದ್ದೆ. ಒಂದು ವೇಳೆ ಆಲ್ರೆಡಿ ರಾಜ್ಯ ಪ್ರಶಸ್ತಿಗಳೆಲ್ಲಾ ಬಂದಿದ್ದರೆ, ನಮ್ಮಲ್ಲೊಂದು ಸಣ್ಣ ಆಸೆಯಾದರೂ ಇರುತ್ತದೆ. ಆದರೆ ನೇರವಾಗಿ ರಾಷ್ಟ್ರ ಪ್ರಶಸ್ತಿ ಅಂದಾಗ ಅದುರಿ ಬಿದ್ದಿದ್ದೆ.
ಆದರೆ ಸಿನೆಮಾ ಪ್ರಶಸ್ತಿಗೆ ಕಳಿಸಿರುವುದು ಮೊದಲೇ ಗೊತ್ತಿತ್ತು ತಾನೇ?
► ಸಿನೆಮಾ ಕಳಿಸಿರುವುದು ಗೊತ್ತಿತ್ತು. ನನ್ನ ಅಭಿನಯದ ಸಿನೆಮಾಗಳು ಪ್ರಶಸ್ತಿಗಾಗಿ ಕಳಿಸಲ್ಪಡುವುದು ಹೊಸದೇನಲ್ಲ. ಆದರೆ ಆವಾಗೆಲ್ಲ ಸ್ವತಃ ಚಿತ್ರತಂಡದವರೇ ವೈಯಕ್ತಿಕವಾಗಿ ಪ್ರಶಸ್ತಿ ಸಿಗುವುದು ಕಷ್ಟ ಎಂದು ತಿಳಿಸುತ್ತಿದ್ದರು. ಹೀಗಾಗಿ ಚಿತ್ರಕ್ಕೆ ಪ್ರಶಸ್ತಿ ಬರುವ ನಿರೀಕ್ಷೆ ಇರುತ್ತದೆಯೇ ಹೊರತು, ನನಗಲ್ಲ.
ಈ ಹಿಂದೆ ಪ್ರಶಸ್ತಿ ನಿರೀಕ್ಷಿಸಿದಾಗ ಸಿಗದೇ ಹೋಗಿದ್ದು ಇದೆಯೇ?
► ನಾನು ಪಾತ್ರಗಳನ್ನು ಆಯ್ಕೆ ಮಾಡುವಾಗ ಪ್ರಶಸ್ತಿ ಬರಬೇಕು ಎಂದು ಬಯಸುವುದೇ ಇಲ್ಲ. ನನ್ನ ನಟನೆ ಜನಮೆಚ್ಚುಗೆ ಗಳಿಸಿದರೆ ಸಾಕು ಎನ್ನುವುದಷ್ಟೇ ಇರುತ್ತದೆ. ಆದರೂ ‘ಜೀಟಿಗೆ’, ‘ಕೊರಮ’ ಮುಂತಾದ ಚಿತ್ರಗಳಲ್ಲಿ ನನ್ನ ನಟನೆ ಕಂಡವರು ಪ್ರಶಸ್ತಿ ಬರಬಹುದು ಎಂದಿದ್ದರು. ಹಾಗಾಗಿ ರಾಜ್ಯ ಪ್ರಶಸ್ತಿ ಬಂದೀತೇನೋ ಅಂದುಕೊಂಡಿದ್ದೆ.
ಪ್ರಶಸ್ತಿ ಬಂದಾಗ ಸಿಕ್ಕ ಪ್ರತಿಕ್ರಿಯೆ ಹೇಗಿತ್ತು?
► ತುಳುಚಿತ್ರರಂಗದಿಂದ ಸಾಕಷ್ಟು ಮಂದಿ ಕರೆ ಮಾಡಿ ಅಭಿನಂದಿಸಿದ್ದಾರೆ. ಆದರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಅಧ್ಯಕ್ಷೆ ಜಯಮಾಲಾ ಅವರು ಕರೆ ಮಾಡಿದ್ದು ಅಚ್ಚರಿ ಮೂಡಿಸಿತ್ತು. ಬಹುಶಃ ಅವರು ಎಲ್ಲ ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದ್ದರೋ ಗೊತ್ತಿಲ್ಲ. ಆದರೆ ವೈಯಕ್ತಿಕವಾಗಿ ನಾನು ಹೇಳುವುದಾದರೆ, ಅವರು ನಮ್ಮದೇ ತುಳುನಾಡಿನವರು ಎನ್ನುವುದು ಕೂಡ ಈ ಖುಷಿ ಹೆಚ್ಚಿಸಲು ಕಾರಣವಾಗಿತ್ತು.
ನೀವು ಇದುವರೆಗೆ ಎಷ್ಟು ಭಾಷೆಗಳಲ್ಲಿ ನಟಿಸಿದ್ದೀರಿ?
► ಎಲ್ಲ ಸ್ಥಳೀಯ ಭಾಷೆಗಳನ್ನು ಸೇರಿಸಿದರೆ ನಾನು ಐದಾರು ಭಾಷಾ ಚಿತ್ರಗಳಲ್ಲಿ ನಟಿಸಿದ್ದೇನೆ. ಕನ್ನಡ, ಮಲಯಾಳಂ, ತುಳು, ಕೊಂಕಣಿ, ಬ್ಯಾರಿ, ಅರೆಭಾಷೆ ಹೀಗೆ ವಿವಿಧ ಭಾಷಾ ಸಿನೆಮಾಗಳಲ್ಲಿ ಅಭಿನಯಿಸಿದ್ದೇನೆ. ಇವುಗಳಲ್ಲಿ ಮಲಯಾಳಂ ಸಿನೆಮಾ ಇನ್ನು ತೆರೆಕಾಣಬೇಕಿದೆ.
ತೆರೆಗೆ ಬರಲು ಸಿದ್ಧವಾಗಿರುವ ನಿಮ್ಮ ಚಿತ್ರಗಳು ಯಾವೆಲ್ಲ?
► ನಟ ಗಣೇಶ್ ಅವರ ನಿರ್ಮಾಣದ ‘ಪಿಚ್ಚರ್’ ಚಿತ್ರದಲ್ಲೊಂದು ಪ್ರಮುಖ ಪಾತ್ರ ಮಾಡಿದ್ದೇನೆ. ನಿತಿನ್ ರೈ ಕುಕ್ಕುವಳ್ಳಿಯವರ ‘ಬನ’ದಲ್ಲಿ ಪ್ರಧಾನ ಪಾತ್ರದಲ್ಲಿದ್ದೇನೆ. ಇವೆರಡೂ ತುಳು ಮತ್ತು ಕನ್ನಡ ಭಾಷೆಗಳಲ್ಲಿ ತೆರೆಕಾಣಲಿವೆ. ಇದಲ್ಲದೆ ಕಲಾಸಂಗಮ ತಂಡದ ‘ಶಿವದೂತ ಗುಳಿಗೆ’, ‘ಶಿವಾಜಿ’ ಎನ್ನುವ ನಾಟಕಗಳ ಮೂಲಕ ರಂಗಭೂಮಿಯಲ್ಲಿಯೂ ಸಕ್ರಿಯವಾಗಿದ್ದೇನೆ.
ಸಿನೆಮಾದ ಮಧ್ಯೆ ನಾಟಕಗಳಿಗೆ ಹೇಗೆ ಸಮಯ ಹೊಂದಿಸುತ್ತೀರಿ?
► ರಂಗಭೂಮಿಯಿಂದಲೇ ಚಿತ್ರರಂಗ ಪ್ರವೇಶಿಸಿರುವ ಕಾರಣ ನಾಟಕಕ್ಕಾಗಿ ಹೊಂದಾಣಿಕೆ ನಡೆಸುವುದು ಕಷ್ಟ ಅನಿಸಿಲ್ಲ. ಒಂದು ವೇಳೆ ಸಿನೆಮಾ ಚಿತ್ರೀಕರಣದ ದಿನಾಂಕಗಳಲ್ಲಿ ಏರುಪೇರಾದರೆ ನಾಟಕಕ್ಕೆ ನನ್ನ ಬದಲಿ ಕಲಾವಿದೆಯನ್ನು ಸಿದ್ಧಪಡಿಸುವ ಜವಾಬ್ದಾರಿ ನನ್ನದೇ ಆಗಿರುತ್ತದೆ. ಇಂಥದೊಂದು ಒಪ್ಪಂದವನ್ನು ನಾನು ಮೊದಲೇ ನಿರ್ದೇಶಕರೊಡನೆ ಮಾಡಿಕೊಂಡಿರುತ್ತೇನೆ. ಆ ಕಲಾವಿದೆಗೆ ನನ್ನ ಪಾತ್ರದ ತರಬೇತಿ ನಾನೇ ನೀಡಿರುತ್ತೇನೆ.
ನೀವೇ ಖುದ್ದಾಗಿ ನಿರ್ದೇಶನ ಮಾಡುವ ಗುರಿ ಇದೆಯೇ?
► ಖಂಡಿತವಾಗಿ ಇದೆ. ಸಿನೆಮಾ ನಿರ್ದೇಶನ ಮಾಡುವುದು ನನ್ನ ಕನಸು. ಆದರೆ ನನ್ನ ಮೇಲೆ ನಂಬಿಕೆ ಇಟ್ಟು ಕಥೆ ಕೊಟ್ಟು ನಿರ್ಮಾಣ ಮಾಡುವವರು ಬೇಕು! ನಾನೇ ಕಥೆ, ಚಿತ್ರಕಥೆ ಬರೆಯುವುದು ಕಷ್ಟ. ಆದರೆ ನಿರ್ದೇಶನ ಮಾತ್ರ ಜೀವನದಲ್ಲೊಂದು ಬಾರಿ ಮಾಡಲೇಬೇಕು ಅಂತ ಇದೆ.
ಇನ್ನು ಮುಂದೆ ನಟಿಯಾಗಿ ಯಾರ ಸಿನೆಮಾದಲ್ಲಿ ಪಾತ್ರವಾಗುವ ಕನಸಿದೆ?
► ತುಳು, ಕನ್ನಡ ಸೇರಿದಂತೆ ಖ್ಯಾತ ನಿರ್ದೇಶಕರ ಚಿತ್ರಗಳಲ್ಲಿ ನಟಿಸಬೇಕಿದೆ. ಕನಸು ಕಾಣುವುದಕ್ಕೇನು? ರಾಜಮೌಳಿಯವರ ನಿರ್ದೇಶನದಲ್ಲಿ ಕೂಡ ಪಾತ್ರವಾಗಬೇಕು ಅಂತ ಇದೆ.
ಹೊಸದಾಗಿ ಚಿತ್ರರಂಗಕ್ಕೆ ಬರುವ ನಟಿಯರಿಗೆ ನೀವು ಕೊಡಬಹುದಾದ ಸಲಹೆ ಏನು?
► ಬಹುಶಃ ಇದಕ್ಕೆ ಉತ್ತರವನ್ನು ನನ್ನದೇ ಉದಾಹರಣೆಯೊಂದಿಗೆ ಹೇಳಿದರೆ ಚೆನ್ನಾಗಿರುತ್ತದೆ.
ನಾನು ರಂಗಭೂಮಿ ಪ್ರವೇಶಿಸುವಾಗ ಮುಂದೆ ಸಿನೆಮಾ ಮಾಡಬೇಕು, ಪ್ರಶಸ್ತಿ ಪಡೆಯಬೇಕು ಎಂದೆಲ್ಲಾ ಅಂದುಕೊಂಡಿರಲಿಲ್ಲ. ಕೊಟ್ಟ ಪಾತ್ರವನ್ನು ಚೆನ್ನಾಗಿ ಮಾಡಬೇಕು ಎನ್ನುವುದಷ್ಟೇ ಗುರಿಯಾಗಿತ್ತು. ಅಂಥದೊಂದು ಪ್ರಾಮಾಣಿಕ ಶ್ರದ್ಧೆಯಿಂದ, ಪ್ರೀತಿಯಿಂದ, ಗೌರವದಿಂದ ಕೆಲಸ ಶುರುಮಾಡಿದರೆ ಉಳಿದವೆಲ್ಲ ತಾವಾಗಿಯೇ ನಿಮ್ಮನ್ನು ಸೇರಬಹುದು.