“ನೀವು ಯಾವುದನ್ನು ನಂಬುತ್ತೀರೋ ಅದನ್ನು ಮಾಡಿ”; ‘ಟಾಕ್ಸಿಕ್’ ಹಾಡಿಗೆ ಟೀಕೆ ಎದುರಿಸಿದ ಕಿಯಾರಗೆ ಧೈರ್ಯ ತುಂಬಿದ ಯಶ್
‘ಟಾಕ್ಸಿಕ್’ ಟ್ರೇಲರ್ ಅನಾವರಣ ಕಾರ್ಯಕ್ರಮದಲ್ಲಿ ಆತ್ಮವಿಶ್ವಾಸದಿಂದ ಮಾತನಾಡಿದ ನಟ ಯಶ್ ಅವರು ಸದಾ ಬೆಂಬಲಿಸಿದ ಅಭಿಮಾನಿಗಳು ಹಾಗೂ ಕರ್ನಾಟಕದ ಜನತೆಗೆ ಭಾವುಕವಾಗಿ ಧನ್ಯವಾದ ಅರ್ಪಿಸಿದ್ದಾರೆ.
ಶನಿವಾರ ಬೆಂಗಳೂರಿನಲ್ಲಿ ‘ಟಾಕ್ಸಿಕ್: ಎ ಫೇರಿ ಟೇಲ್ ಗ್ರೋನ್ ಅಪ್ಸ್’ ಚಿತ್ರದ ಟ್ರೇಲರ್ ಅನಾವರಣಗೊಳಿಸಲಾಗಿದೆ. ಚಿತ್ರತಂಡ ಮತ್ತು ನಿರ್ಮಾಣದ ಸಂದರ್ಭದ ನೆನಪುಗಳನ್ನು ಬಹಿರಂಗಪಡಿಸುತ್ತಿದ್ದಂತೆ ಕಾರ್ಯಕ್ರಮ ಭಾವನಾತ್ಮಕವಾಗಿ ಬದಲಾಯಿತು. ಯಶ್ ಅವರು ತಮ್ಮ ಪತ್ನಿಗೆ ಧನ್ಯವಾದ ಹೇಳಿ, ಸಹನಟರನ್ನು ಪ್ರಶಂಸಿಸುವ ಮೂಲಕ ಹೃತ್ಪೂರ್ವಕ ಭಾಷಣ ಮಾಡಿದರು. ಇದೇ ಸಂದರ್ಭದಲ್ಲಿ ಚಿತ್ರದ “ತಬಾಹಿ” ಹಾಡಿನ ಅಭಿನಯಕ್ಕಾಗಿ ಟೀಕೆಗಳನ್ನು ಎದುರಿಸುತ್ತಿರುವ ಕಿಯಾರಾ ಅಡ್ವಾಣಿಯ ಬೆಂಬಲಕ್ಕೂ ಬಂದರು.
“ತಬಾಹಿ” ಹಾಡು ಬಿಡುಗಡೆಯಾದಂದಿನಿಂದ ಕಿಯಾರಾ ಅಡ್ವಾಣಿ ಅಸವರ ಅಭಿನಯಕ್ಕಾಗಿ ಟೀಕೆಗಳನ್ನು ಎದುರಿಸಿದ್ದಾರೆ. ಈ ಟೀಕೆಯ ಬಗ್ಗೆ ಮಾತನಾಡಿದ ಯಶ್, “ಕಿಯಾರಾ ನಿರ್ವಹಿಸಿದ ಪಾತ್ರ ಮತ್ತು ಅದಕ್ಕಾಗಿ ತೋರಿದ ಬದ್ಧತೆ ಅದ್ಭುತವಾದುದು. ಆರಂಭದಲ್ಲಿ ಇಷ್ಟೊಂದು ನಟಿಯರನ್ನು ಒಗ್ಗೂಡಿಸುವುದು ಕಷ್ಟವಾಗಬಹುದು ಎಂದು ನಾವೆಲ್ಲರೂ ಭಾವಿಸಿದ್ದೆವು. ಆದರೆ ಕಿಯಾರಾ ಅತ್ಯಂತ ಸರಳ ಹಾಗೂ ಸಜ್ಜನಿಕೆಯ ವ್ಯಕ್ತಿಯಾಗಿದ್ದರು. ಒಬ್ಬ ನಟಿಯಾಗಿ ನೀವು ಎದುರಿಸಬೇಕಾದ ಸವಾಲುಗಳ ಬಗ್ಗೆ ದುರದೃಷ್ಟವಶಾತ್ ಜನರು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ನೀವು ಯಾವುದನ್ನು ನಂಬುತ್ತೀರೋ ಅದನ್ನು ಮುಂದುವರಿಸಿ; ಜನರು ಖಂಡಿತವಾಗಿಯೂ ಅದನ್ನು ಸಂಭ್ರಮಿಸುತ್ತಾರೆ ಮತ್ತು ಮೆಚ್ಚುತ್ತಾರೆ” ಎಂದು ಹುರಿದುಂಬಿಸಿದ್ದಾರೆ.
ಯಶ್ ಅವರು ಸಿನಿಮಾದಲ್ಲಿ ನಟಿಸಿದ ತಮ್ಮ ಅನುಭವದ ಬಗ್ಗೆ ಮಾತನಾಡಿ, ನಟಿ ಮತ್ತು ಪತ್ನಿಯಾಗಿರುವ ರಾಧಿಕಾ ಪಂಡಿತ್‌ಗೆ ಧನ್ಯವಾದ ಹೇಳಿದ್ದಾರೆ. “ನಾನು ನನ್ನ ಪತ್ನಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನನ್ನೊಂದಿಗೆ ಯಾವುದೇ ರೀತಿಯಲ್ಲಿಯೂ ಒಡನಾಟ ಹೊಂದಿರುವುದು ಸುಲಭದ ವಿಷಯವಲ್ಲ. ಹೊಂದಿಕೊಂಡು ಹೋಗುವುದು ಕಷ್ಟ. ಈ ನಿರ್ದಿಷ್ಟ ಸಿನಿಮಾವು ಸಾಕಷ್ಟು ಶ್ರಮ ಬೇಡುವಂತದ್ದಾಗಿತ್ತು ಮತ್ತು ಇದಕ್ಕಾಗಿ ನಾನು ನನ್ನ ಸಹಜ ಮಿತಿಯನ್ನು ಮೀರಿ ಕೆಲಸ ಮಾಡಬೇಕಾಯಿತು. ಇದರಲ್ಲಿ 2-3 ವಿಭಿನ್ನ ಲುಕ್ ಗಳಲ್ಲಿ ಕಾಣಿಸಿಕೊಂಡಿದ್ದೆ. ಅದಕ್ಕೆ ಬಹಳಷ್ಟು ಸಮಯದ ಅಗತ್ಯವಿತ್ತು. ಎಲ್ಲದರಲ್ಲೂ ಅವರು ನನಗೆ ದೊಡ್ಡ ಬೆಂಬಲವಾಗಿದ್ದಾರೆ” ಎಂದು ರಾಧಿಕಾ ಅವರಿಗೆ ಹೃತ್ಪೂರ್ವಕ ಧನ್ಯವಾದ ಹೇಳಿದ್ದಾರೆ.
‘ಟಾಕ್ಸಿಕ್’ ಅನ್ನು ಕಠಿಣ ಸಿನಿಮಾ ಎಂದು ಕರೆದ ಯಶ್, “ನಾನು ಒಂದು ವಿಷಯವನ್ನು ಬಲವಾಗಿ ನಂಬುತ್ತೇನೆ. ಇದು ಕನ್ನಡ, ತಮಿಳು ಅಥವಾ ತೆಲುಗು ಚಿತ್ರವಾಗಿ ಉಳಿದಿಲ್ಲ. ಬದಲಾಗಿ ಇದೊಂದು ಭಾರತೀಯ ಚಿತ್ರ. ವಿವಿಧ ಚಿತ್ರರಂಗಗಳ ಪ್ರತಿಭಾವಂತರು ಒಗ್ಗೂಡಿ ಅತ್ಯುತ್ತಮ ಕೆಲಸ ಮಾಡುತ್ತಿರುವುದಕ್ಕೆ ಇದೊಂದು ಸೂಕ್ತ ಉದಾಹರಣೆ. ‘ಟಾಕ್ಸಿಕ್’ ಕೇವಲ ಯಶ್ ಅವರ ಚಿತ್ರವಲ್ಲ. ಇದೊಂದು ಭಾರತೀಯ ಚಲನಚಿತ್ರವಾಗಿದ್ದು, ಉನ್ನತ ಮಟ್ಟದ ತಾರೆಯರು ಮತ್ತು ಪ್ರತಿಭಾವಂತರು ತಮ್ಮ ವೈಯಕ್ತಿಕ ಆತಂಕ, ಗುರಿಗಳು ಮತ್ತು ಅಹಂಕಾರಗಳನ್ನು ಬದಿಗಿಟ್ಟು, ಈ ಚಿತ್ರವನ್ನು ಜಾಗತಿಕ ವೇದಿಕೆಗೆ ಕೊಂಡೊಯ್ಯಲು ಒಗ್ಗೂಡಿದ್ದಾರೆ” ಎಂದು ಅವರು ಹೇಳಿದರು.
“ಸಿನಿಮಾವನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಚಿತ್ರೀಕರಿಸಿದ್ದೇವೆ. ನಾವು ಜೀವನದಲ್ಲಿ ಏನಾದರೂ ಮಾಡಲು ಬಯಸಿದಾಗ ಎಂದಿಗೂ ತಡೆಯಬಾರದು. ನಾನು ಯಾರ ಮಾತನ್ನೂ ಕೇಳದ ವ್ಯಕ್ತಿ. ಯಾರಾದರೂ ನನಗೆ ಏನನ್ನಾದರೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರೆ, ಅವರ ಕಲ್ಪನೆಯ ಕೊರತೆ ಮತ್ತು ಮೂರ್ಖತನವನ್ನು ಮಾತ್ರ ನೋಡಬಲ್ಲೆ. ಜೀವನದಲ್ಲಿ ನಿಮಗೆ ಅಸಾಧ್ಯವಾದುದು ಯಾವುದೂ ಇಲ್ಲ. ನಾವು ತೆಗೆದುಕೊಳ್ಳಬೇಕಾಗಿ ಬಂದ ನಿರ್ಧಾರಗಳಿಂದಾಗಿ ಇದು ಕಠಿಣ ಚಿತ್ರವಾಗಿತ್ತು. ಇದು ಕಮರ್ಶಿಯಲ್ ಪ್ಯಾಕೇಜ್ ಚಿತ್ರವಾಗಿರಲಿಲ್ಲ. ಒಂದು ವಿಶಿಷ್ಟ ಪ್ರಯತ್ನವಾಗಿತ್ತು” ಎಂದು ಅವರು ಹೇಳಿದ್ದಾರೆ.
ಈ ಸಂದರ್ಭದಲ್ಲಿ ನಿರ್ದೇಶಕಿ ಗೀತು ಮೋಹನ್‌ದಾಸ್ ಮತ್ತು ನಿರ್ಮಾಪಕ ವೆಂಕಟ್ ಕೆ. ನಾರಾಯಣ್ ಅವರನ್ನು ಯಶ್ ಪ್ರಶಂಸಿಸಿದರು.
ಸಿನಿಮಾದಲ್ಲಿ ತಮ್ಮ ಸಹೋದರಿಯ ಪಾತ್ರ ನಿರ್ವಹಿಸಿರುವ ನಯನತಾರಾ ಬಗ್ಗೆಯೂ ಆತ್ಮೀಯವಾಗಿ ಮಾತನಾಡಿದ ಯಶ್, “ನಯನತಾರಾ ಅವರಲ್ಲಿ ಅಪಾರ ಘನತೆ ಮತ್ತು ವ್ಯಕ್ತಿತ್ವದ ಗಾಂಭೀರ್ಯವಿದೆ. ನೀವು ನಿಜಕ್ಕೂ ಒಬ್ಬ ಲೇಡಿ ಸೂಪರ್‌ಸ್ಟಾರ್. ನಿಮ್ಮ ಮಾರುಕಟ್ಟೆ ಮೌಲ್ಯ ಮತ್ತು ಅಭಿಮಾನಿಗಳು ನಿಮ್ಮನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದು ನನಗೆ ತಿಳಿದಿದೆ. ಈ ಚಿತ್ರದ ಚಿತ್ರೀಕರಣದ ದಿನಾಂಕಗಳ ವಿಷಯದಲ್ಲಿ ಸ್ವಲ್ಪ ಸಮಸ್ಯೆಯಿತ್ತು. ನಿಮಗೆ ಹೆಚ್ಚಿನ ಸಮಯ ಸಿಗದೆ ಇದ್ದರೂ ಚಿತ್ರಕ್ಕಾಗಿ ತೋರಿಸಿದ ಬದ್ಧತೆ ನನಗೆ ತುಂಬಾ ಇಷ್ಟವಾಯಿತು. ಯಾರಾದರೂ ಪಡೆಯಬಹುದಾದ ಅತ್ಯಂತ ಪ್ರಭಾವಿ ಮತ್ತು ದೃಢ ವ್ಯಕ್ತಿತ್ವದ ಸಹೋದರಿಯಂತೆ ನೀವು ಕಾಣುತ್ತೀರಿ” ಎಂದು ಹೇಳಿದ್ದಾರೆ.
‘ಟಾಕ್ಸಿಕ್’ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್ ಸಹ ಆಗಮಿಸಿದ್ದರು. ಟ್ರೈಲರ್ ನೋಡಿದ ಬಳಿಕ ಮಾತನಾಡಿದ ಶಿವಣ್ಣ, “ಅದ್ಭುತವಾಗಿದೆ” ಎಂದರು. ಸಿನಿಮಾದಲ್ಲಿ “It's Time I am Comming” ಎಂದು ಯಶ್ ಡೈಲಾಗ್ ಹೇಳುತ್ತಾರೆಯೋ, ಅದೇ ರೀತಿ “We Are All Waiting” ಎಂದು ಹೇಳಿದ್ದಾರೆ. “Toxic ಚಿತ್ರ ಬಿಡುಗಡೆಗಾಗಿ ನಾನೂ ಕಾಯುತ್ತಿದ್ದೇನೆ. ಯಶ್ ಈ ರೀತಿ ದೊಡ್ಡ ಮಟ್ಟಕ್ಕೆ ಬೆಳೆದಿರುವುದು, ಕನ್ನಡಿಗನಾಗಿ ಇಷ್ಟು ದೊಡ್ಡ ಮಟ್ಟದ ಸಿನಿಮಾ ಮಾಡಿರುವುದು ನಮ್ಮೆಲ್ಲರಿಗೂ ತುಂಬಾ ಹೆಮ್ಮೆ ಎನಿಸುತ್ತದೆ. ನಾನು, ನನ್ನ ತಮ್ಮನೇ ಸಿನಿಮಾ ಮಾಡಿದ್ದಾನೆ ಎನ್ನುವಷ್ಟು ಖುಷಿಯಾಗುತ್ತಿದೆ” ಎಂದು ಹೇಳಿದ್ದಾರೆ.
‘ಕೆಜಿಎಫ್’ ಸರಣಿಯ ಐತಿಹಾಸಿಕ ಯಶಸ್ಸಿನ ಬಳಿಕ ಯಶ್ ಅವರು ನಟಿಸಿ, ಸಹ-ನಿರ್ಮಾಣ ಮಾಡುತ್ತಿರುವ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಟ್ರೈಲರ್ ಬಿಡುಗಡೆ ನಂತರ ಭಾರತೀಯ ಚಿತ್ರರಂಗದಲ್ಲೇ ಹೊಸ ಸಂಚಲನ ಸೃಷ್ಟಿಸಿದೆ. ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಪ್ರಶಂಸೆ ವ್ಯಕ್ತವಾಗುತ್ತಿದೆ.
ಆಗಸ್ಟ್ 26 ರಂದು ‘ಟಾಕ್ಸಿಕ್’ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ರುಕ್ಮಿಣಿ ವಸಂತ್, ಹುಮಾ ಖುರೇಷಿ ಮತ್ತು ತಾರಾ ಸುತಾರಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.