×
Ad

ನ್ಯೂಯಾರ್ಕ್‌ ಚಲನಚಿತ್ರೋತ್ಸವದಲ್ಲಿ ಅತಿ ಹೆಚ್ಚು ಪ್ರಶಸ್ತಿ ಗೆದ್ದ ಮಣಿಪುರಿ ಸಿನಿಮಾ ‘ಬೂಂಗ್’

Update: 2026-06-02 18:32 IST

Photo Credit : Boong (2024) - IMDb

‘ಬೂಂಗ್’ ಸಿನಿಮಾಗೆ ಕಳೆದ ಫೆಬ್ರವರಿಯಲ್ಲಿ ಆಸ್ಕರ್‌ನಷ್ಟೇ ಪ್ರಸಿದ್ಧಿ ಹೊಂದಿದ BAFTA ಪ್ರಶಸ್ತಿ ದೊರೆತಾಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿನಿಮಾ ಗಮನ ಸೆಳೆದಿತ್ತು.

ಬ್ರಿಟಿಷ್ ಅಕಾಡೆಮಿ ಫಿಲ್ಮ್ ಅವಾರ್ಡ್ (BAFTA) ಪಡೆದುಕೊಂಡಿರುವ ಲಕ್ಷ್ಮಿಪ್ರಿಯಾ ದೇವಿ ನಿರ್ದೇಶನದ ಮಣಿಪುರಿ ಚಿತ್ರ ‘ಬೂಂಗ್’ ಇದೀಗ ನ್ಯೂಯಾರ್ಕ್ ಭಾರತೀಯ ಚಲನಚಿತ್ರೋತ್ಸವದಲ್ಲಿ ಮೂರು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.

ಸಿನಿಮಾದಲ್ಲಿ ಪ್ರಮುಖ ಪಾತ್ರದಾರಿಯಾಗಿರುವ ಗುಗುನ್ ಕಿಪ್ಗೆನ್‌ ಅವರಿಗೆ ಅತ್ಯುತ್ತಮ ಬಾಲನಟ ಪ್ರಶಸ್ತಿ ಲಭಿಸಿದೆ. ಅತ್ಯುತ್ತಮ ಚೊಚ್ಚಲ ಚಿತ್ರ ಮತ್ತು ಅತ್ಯುತ್ತಮ ನಿರ್ದೇಶಕಿಯಾಗಿ ಲಕ್ಷ್ಮಿಪ್ರಿಯಾ ದೇವಿ ಪ್ರಶಸ್ತಿ ಸ್ವೀಕರಿಸಿದರು. ಹೀಗೆ ‘ಬೂಂಗ್’ ಚಿತ್ರ ಅತಿ ಹೆಚ್ಚು ಪ್ರಶಸ್ತಿಗಳನ್ನು ಗೆದ್ದಿದೆ.

‘ಬೂಂಗ್’ ಸಿನಿಮಾಗೆ ಕಳೆದ ಫೆಬ್ರವರಿಯಲ್ಲಿ ಆಸ್ಕರ್‌ನಷ್ಟೇ ಪ್ರಸಿದ್ಧಿ ಹೊಂದಿದ BAFTA ಪ್ರಶಸ್ತಿ ದೊರೆತಾಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿನಿಮಾ ಗಮನ ಸೆಳೆದಿತ್ತು. ಪುಟ್ಟ ಬಾಲಕನೊಬ್ಬ ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಕಳೆದು ಹೋದ ಅಪ್ಪನನ್ನು ಹುಡುಕುವ ಕತೆ ಹೊಂದಿರುವ ಚಿತ್ರವನ್ನು ಫರಾನ್ ಅಖ್ತರ್ ಅವರು ಎಕ್ಸೆಲ್ ಎಂಟರ್‌ಟೇನ್‌ಮೆಂಟ್ ಮೂಲಕ ನಿರ್ಮಿಸಿದ್ದಾರೆ.

ನ್ಯೂಯಾರ್ಕ್ ಭಾರತೀಯ ಚಲನಚಿತ್ರೋತ್ಸವದಲ್ಲಿ ‘ಬಕ್ಷೋಬೋಂಡಿ’ ಚಿತ್ರವು ಅತ್ಯುತ್ತಮ ಚಿತ್ರ ಪ್ರಶಸ್ತಿ ಗೆದ್ದುಕೊಂಡಿದೆ. ‘ವಿಮುಕ್ತ್‌’ ಚಿತ್ರದ ಅಭಿನಯಕ್ಕಾಗಿ ನಿಖಿಲ್ ಯಾದವ್ ಅತ್ಯುತ್ತಮ ನಟ ಪ್ರಶಸ್ತಿಗೆ ಆಯ್ಕೆಯಾದರು. ‘ವಿಕ್ಟೋರಿಯ’ ಸಿನಿಮಾದ ಅಭಿನಯಕ್ಕೆ ಮೀನಾಕ್ಷಿ ಜಯನ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು. ‘ತಿಘೀ’ ಚಿತ್ರದ ಕತೆಗಾಗಿ ನಿಖಿಲ್ ಮಹಾಜನ್ ಮತ್ತು ಪ್ರಜಕ್ತ್ ದೇಶ್‌ಮುಖ್ ಅತ್ಯುತ್ತಮ ಚಿತ್ರಕತೆ ಪ್ರಶಸ್ತಿ ಪಡೆದರು.

ನಾಲ್ಕು ದಿನಗಳ ಕಾಲ ಆಯೋಜಿಸಲಾಗಿದ್ದ, ನ್ಯೂಯಾರ್ಕ್ ಭಾರತೀಯ ಚಲನಚಿತ್ರೋತ್ಸವ 2026 (NYIFF) ಹತ್ತು ಸ್ಪರ್ಧಾತ್ಮಕ ವಿಭಾಗಗಳಲ್ಲಿ ಭಾರತೀಯ ಪ್ರಾದೇಶಿಕ ಚಿತ್ರರಂಗದ ಸಾಧಕರನ್ನು ಗೌರವಿಸಿದೆ.

ಮೇ 28ರಿಂದ 31ರ ನಡುವೆ ನಡೆದ ಈ ಉತ್ಸವದಲ್ಲಿ 15 ಭಾಷೆಗಳಲ್ಲಿ ವೈವಿಧ್ಯಮಯ ಚಲನಚಿತ್ರಗಳನ್ನು ಪ್ರದರ್ಶಿಸಲಾಗಿದೆ. ಇಂಡೋ-ಅಮೆರಿಕನ್ ಆರ್ಟ್ಸ್ ಕೌನ್ಸಿಲ್ ಪ್ರಸ್ತುತಪಡಿಸಿದ ಚಲನಚಿತ್ರೋತ್ಸವದ ಈ ವರ್ಷದ ಆವೃತ್ತಿಯು 19 ಚಲನಚಿತ್ರ, ನಾಲ್ಕು ಸಾಕ್ಷ್ಯಚಿತ್ರ ಮತ್ತು 24 ಕಿರುಚಿತ್ರಗಳು ಮತ್ತು ಅನೇಕ ಪ್ರೀಮಿಯರ್‌ಗಳನ್ನು ಪ್ರದರ್ಶಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News