ಖ್ಯಾತ ಪಂಜಾಬಿ ಗಾಯಕ ಸುರಿಂದರ್ ಶಿಂದ ನಿಧನ
ಸುರಿಂದರ್ ಶಿಂದ (Photo: Twitter)
ಚಂಡೀಗಢ: ಖ್ಯಾತ ಪಂಜಾಬಿ ಗಾಯಕ ಸುರೀಂದರ್ ಶಿಂದ ನಿಧನರಾಗಿದ್ದಾರೆ. ಎಂಒಸಿಯ ಜನಕ ಎಂದೇ ಜನಪ್ರಿಯರಾಗಿದ್ದ ಅವರು ಜುಲೈ 26ರಂದು ತಮ್ಮ 64ನೇ ವಯಸ್ಸಿನಲ್ಲಿ ಮೃತಪಟ್ಟಿದ್ದಾರೆ ಎಂದು timesnownews.com ವರದಿ ಮಾಡಿದೆ.
ಜನಪ್ರಿಯ ಪಂಜಾಬಿ ಗಾಯಕ ಮತ್ತು ನಟರಾಗಿದ್ದ ಸುರೀಂದರ್ ಶಿಂದ ಲೂಧಿಯಾನಾದ ಡಿಎಂಸಿ ಆಸ್ಪತ್ರೆಯಲ್ಲಿ ತಮ್ಮ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯಪೀಡಿತರಾಗಿದ್ದ ಹಿರಿಯ ಗಾಯಕ ಸುರೀಂದರ್ ಶಿಂದ ಅವರನ್ನು ಲೂಧಿಯಾನಾದ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕಳೆದ ಕೆಲವು ದಿನಗಳಿಂದ ಬಹಿರಂಗಪಡಿಸಲಾಗದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಸುರೀಂದರ್ ಶಿಂದ ಅವರಿಗೆ ಚಿಕಿತ್ಸೆ ಅಗತ್ಯವಿರುವುದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಸಂಗತಿಯನ್ನು ಅವರ ಪುತ್ರ ಮಣಿಂದರ್ ಶಿಂದ ಒಂದೆರಡು ದಿನಗಳ ಹಿಂದಷ್ಟೇ ಹಂಚಿಕೊಂಡಿದ್ದರು. ತಮ್ಮ ತಂದೆಯ ಆರೋಗ್ಯದ ಕುರಿತು ಅಂತರ್ಜಾಲದಲ್ಲಿ ವದಂತಿಗಳು ಹರಡಿದ್ದರಿಂದ, ಅವರ ಆರೋಗ್ಯ ಸ್ಥಿತಿಯ ಕುರಿತು ಕೆಲವು ವಿವರಗಳನ್ನು ಮಣಿಂದರ್ ಫೇಸ್‌ಬುಕ್ ನೇರ ಪ್ರಸಾರದಲ್ಲಿ ಹಂಚಿಕೊಂಡಿದ್ದರು. ಅದರಲ್ಲಿ ತಮ್ಮ ತಂದೆ ಕೃತಕ ಉಸಿರಾಟದ ನೆರವಿನಲ್ಲಿಲ್ಲ ಎಂದು ಸ್ಪಷ್ಟಪಡಿಸಿದ್ದ ಅವರು, ತಮ್ಮ ತಂದೆ ಆರೋಗ್ಯವಾಗಿದ್ದಾರೆ ಮತ್ತು ಸಮರ್ಪಕ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದರು. ಆಸ್ಪತ್ರೆಯ ಹೊರಗೆ ಮಾಧ್ಯಮಗಳೊಂದಿಗೂ ಮಾತನಾಡಿದ್ದ ಅವರು, ತಮ್ಮ ತಂದೆಯ ಆರೋಗ್ಯದ ಕುರಿತ ಎಲ್ಲ ವದಂತಿಗಳನ್ನು ಅಲ್ಲಗಳೆದಿದ್ದರು. ಹೀಗಿದ್ದೂ, 20 ದಿನಗಳ ಕಾಲ ಆಸ್ಪತ್ರೆಗೆ ದಾಖಲಾಗಿದ್ದರೂ, ಈ ವಾರ ಸುರೀಂದರ್ ಶಿಂದ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.
ಇದಕ್ಕೂ ಮುನ್ನ, ಸುರೀಂದರ್ ಶಿಂದ ಅವರ ಆಪ್ತ ಗೆಳೆಯ ಅಮರ್‌ಜಿತ್ ಟಿಕ್ಕಾ ಅವರು, ಕೆಲ ದಿನಗಳ ಹಿಂದೆ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಅವರಿಗೆ ಸೋಂಕು ತಗುಲಿದ್ದು, ಉಸಿರಾಟದ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದರು.
'ಎಂಒಸಿ'ಯ ಜನಕ ಎಂದೇ ಖ್ಯಾತರಾಗಿದ್ದ ಸುರೀಂದರ್ ಶಿಂದ, ಪಂಜಾಬ್ ಸಂಗೀತೋದ್ಯಮದಲ್ಲಿ ಮುಂಚೂಣಿ ಗಾಯಕನೆಂದು ಗುರುತಿಸಲ್ಪಟ್ಟಿದ್ದರು. ತಮ್ಮ ವೃತ್ತಿ ಜೀವನದ ಹಲವಾರು ವರ್ಷಗಳ ಅವಧಿಯಲ್ಲಿ 'ಜಟ್ ಜಿಯೋನಾ ಮೋರ್', 'ಪುಟ್ ಜಟ್ಟನ್ ಡೇ', 'ಟ್ರಕ್ ಬಿಲ್ಲಿಯ', 'ಬಾಲ್ಬಿರೊ ಭಾಭಿ', 'ಕಶೇರ್ ಸಿಂಗ್ ದೀ ಮೌತ್'ನಂತಹ ಹಲವಾರು ಜನಪ್ರಿಯ ಗೀತೆಗಳನ್ನು ಸುರೀಂದರ್ ಶಿಂದ ರಚಿಸಿದ್ದಾರೆ. ಅವರ ವಿಶಿಷ್ಟ ಕಂಠ ಶೈಲಿಯು ಅವರನ್ನು ಪಂಜಾಬಿ ಸಂಗೀತ ಕ್ಷೇತ್ರದಲ್ಲಿ ಪ್ರಖ್ಯಾತ ವ್ಯಕ್ತಿಯನ್ನಾಗಿಸಿತ್ತು.