×
Ad

ʼಸಿತಾರೆ ಝಮೀನ್ ಪರ್ʼ ಚಿತ್ರದ ಟ್ರೇಲರ್ ಬಿಡುಗಡೆ | ವಿಶೇಷ ವ್ಯಕ್ತಿಗಳ ಬಾಸ್ಕೆಟ್ ಬಾಲ್ ಕೋಚ್ ಪಾತ್ರದಲ್ಲಿ ಆಮಿರ್ ಖಾನ್

Update: 2025-05-13 23:35 IST

PC | Aamir Khan Productions

ಮುಂಬೈ: ಬಾಲಿವುಡ್ ತಾರೆ ಆಮಿರ್ ಖಾನ್ ನಾಯಕತ್ವದ ಮುಂಬರುವ 'ಸಿತಾರೆ ಝಮೀನ್ ಪರ್' ಚಲನಚಿತ್ರದ ಟ್ರೇಲರ್ ಮಂಗಳವಾರ ಕೊನೆಗೂ ಬಿಡುಗಡೆಯಾಗಿದೆ. ತೆರೆಗೆ ಬರಲು ಸಿದ್ಧವಾಗಿರುವ ಈ ಕ್ರೀಡಾಧಾರಿತ ಚಲನಚಿತ್ರವು 2018ರಲ್ಲಿ ಬಿಡುಗಡೆಯಾಗಿದ್ದ ಸ್ಪ್ಯಾನಿಶ್ ಚಲನಚಿತ್ರವಾದ 'ಚಾಂಪಿಯನ್ಸ್'ನ ಅಧಿಕೃತ ರಿಮೇಕ್ ಆಗಿದೆ. 2017ರಲ್ಲಿ ಪ್ರಣಯ ಕಥೆಯಾಧಾರಿತ ಹಾಸ್ಯಮಯ ಚಿತ್ರವಾದ 'ಶುಭ್ ಮಂಗಳ್ ಸಾವಧಾನ್' ನಿರ್ದೇಶನ ಮಾಡಿ ಖ್ಯಾತರಾದ ಆರ್.ಎಸ್.ಪ್ರಸನ್ನ ಈ ಚಿತ್ರದ ನಿರ್ದೇಶಕರಾಗಿದ್ದಾರೆ.

ಈ ಚಲನಚಿತ್ರವು 2007ರಲ್ಲಿ ಬಿಡುಗಡೆಯಾಗಿದ್ದ 'ತಾರೆ ಝಮೀನ್ ಪರ್'ನ ಚಿತ್ರದ ದ್ವಿತೀಯ ಭಾಗವಾಗಿದೆ. ಆಮಿರ್ ಖಾನ್‌ ರ ವೃತ್ತಿಜೀವನದಲ್ಲಿ ಅವರಿಗೆ ಭಾರಿ ಜನಮನ್ನಣೆ ತಂದುಕೊಟ್ಟ ಚಿತ್ರ ಇದಾಗಿತ್ತು. ಈ ಚಿತ್ರದ ದ್ವಿತೀಯ ಭಾಗವಾದ 'ಸಿತಾರೆ ಝಮೀನ್ ಪರ್' ಚಲನಚಿತ್ರವು ಜೂನ್ 20ರಂದು ಬಿಡುಗಡೆಗೆ ಸಜ್ಜಾಗಿದೆ.

'1 ಟಿಂಗು ಬಾಸ್ಕೆಟ್‌ ಬಾಲ್‌ ಕೋಚ್, 10 ತೂಫಾನಿ ಸಿತಾರೆ ಔರ್ ಉನ್ಕಿ ಜರ್ನಿ' ಎಂದು ಚಿತ್ರದ ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ಮೂರು ನಿಮಿಷ ಮೂವತ್ತು ಸೆಕೆಂಡುಗಳ ಅವಧಿಯ ಈ ಚಿತ್ರದ ಟ್ರೇಲರ್‌ ನಲ್ಲಿ, ಕುಡಿದ ಮತ್ತಿನಲ್ಲಿ ಪೊಲೀಸರ ವಾಹನಕ್ಕೆ ಢಿಕ್ಕಿ ಹೊಡೆದ ಆಮಿರ್‌ ಖಾನ್‌ ಗೆ ನ್ಯಾಯಾಲಯವು  10 ಮಂದಿ ವಿಶೇಷ ವ್ಯಕ್ತಿಗಳಿರುವ ತಂಡಕ್ಕೆ ಬಾಸ್ಕೆಟ್‌ ಬಾಲ್‌ ಕಲಿಸಿಕೊಡುವ ʼಶಿಕ್ಷೆʼ ನೀಡುತ್ತದೆ. ಆಮಿರ್ ಖಾನ್ ಹೇಗೆ ಅವರನ್ನೆಲ್ಲ ರಾಷ್ಟ್ರೀಯ ಚಾಂಪಿಯನ್‌ ಶಿಪ್‌ ಗೆ ಸಿದ್ಧಗೊಳಿಸುತ್ತಾರೆ ಎಂಬುದರತ್ತ ಈ ಟ್ರೇಲರ್ ಗಮನ ಸೆಳೆಯುತ್ತದೆ.

ಈ ಚಿತ್ರದ ತಾರಾಗಣದಲ್ಲಿ ಆಮಿರ್ ಖಾನ್ ಅಲ್ಲದೆ, ಜೆನಿಲಿಯ ದೇಶ್‌ ಮುಖ್, ಅರೌಶ್ ದತ್ತ, ಗೋಪಿ ಕೃಷ್ಣನ್ ವರ್ಮ, ವೇದಾಂತ್ ಶರ್ಮ, ನಮನ್ ಮಿಶ್ರಾ, ಋಷಿ ಶಹಾನಿ, ರಿಷಭ್ ಜೈನ್, ಆಶಿಶ್ ಪೆಂಡ್ಸೆ, ಸಮ್ವಿತ್ ದೇಸಾಯಿ, ಸಿಮ್ರನ್ ಮಂಗೇಶ್ಕರ್, ಆಯುಷ್ ಭನ್ಸಾಲಿ, ಡಾಲಿ ಅಹ್ಲುವಾಲಿಯ, ಗುರ್ಪಾಲ್ ಸಿಂಗ್ ಹಾಗೂ ಬಿಜೇಂದ್ರ ಕಾಳ ಕೂಡಾ ಇದ್ದಾರೆ.

ಚಿತ್ರದ ಟ್ರೇಲರ್‌ ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಅಭಿಮಾನಿಗಳಲ್ಲಿ ಹಲವರು ಇದನ್ನು ವರ್ಷದ ಚಿತ್ರ ಎಂದು ಕರೆದಿದ್ದಾರೆ. ಯೂಟ್ಯೂಬ್‌ ನಲ್ಲಿ ಟ್ರೇಲರ್ ಗೆ ಒಬ್ಬರು, "ಪರಿಕಲ್ಪನೆ ತುಂಬಾ ಚೆನ್ನಾಗಿದೆ. ಅವರು ತುಂಬಾ ಸಾಮಾನ್ಯ ಮನುಷ್ಯರು ಎಂಬ ಚಿತ್ರದ ಸಂದೇಶ ತುಂಬಾ ಅದ್ಭುತವಾಗಿದೆ. ಚಿತ್ರ ನೋಡಲು ಉತ್ಸುಕನಾಗಿದ್ದೇನೆ”, ಎಂದು ಬರೆದಿದ್ದಾರೆ. ಮತ್ತೊಬ್ಬರು, "ಆಮಿರ್ ಖಾನ್ ಮತ್ತೊಮ್ಮೆ ತಮ್ಮದೇ ಆದ ಶೈಲಿಯನ್ನು ಸಾಬೀತುಪಡಿಸಿದ್ದಾರೆ. ಚಿತ್ರದ ಟ್ರೇಲರ್ ಭಾವನಾತ್ಮಕತೆ, ಹಾಸ್ಯದ ಪರಿಪೂರ್ಣ ಮಿಶ್ರಣವಾಗಿದೆ. ಮತ್ತೊಂದು ಚಿಂತನಶೀಲ ಮಾಸ್ಟರ್ ಪೀಸ್ ಎದುರು ನೋಡುತ್ತಿದ್ದೇನೆ. ಸಂದೇಶ ಸಾರುವ ಸಿನಿಮಾ ಮತ್ತೆ ಬಂದಿದೆ" ಎಂದು ಕಮೆಂಟ್ ಮಾಡಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News