×
Ad

ಬೆಂಗಳೂರು ಸಂಗೀತ ಕಾರ್ಯಕ್ರಮದಲ್ಲಿ ನೀಡಿದ ವಿವಾದಾತ್ಮಕ ಹೇಳಿಕೆ ಕುರಿತು ಗಾಯಕ ಸೋನು ನಿಗಂ ಪ್ರತಿಕ್ರಿಯಿಸಿದ್ದು ಹೀಗೆ...

Update: 2025-05-04 00:25 IST

Screengrab:X/@sonunigamofficial

ಮುಂಬೈ: ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿದ್ದ ಸಂಗೀತ ಕಾರ್ಯಕ್ರಮವೊಂದರಲ್ಲಿ ಕನ್ನಡ ಗೀತೆ ಹಾಡುವಂತೆ ಒತ್ತಾಯಿಸಿದ್ದಕ್ಕೆ ಒರಟಾಗಿ ವರ್ತಿಸಿ, ಭಯೋತ್ಪಾದನೆಯೊಂದಿಗೆ ಹೋಲಿಸಿದ್ದಕ್ಕಾಗಿ  ತೀವ್ರ ಟೀಕೆಗೆ ಗುರಿಯಾಗಿರುವ ಬಾಲಿವುಡ್‌ನ ಖ್ಯಾತ ಗಾಯಕ ಸೋನು ನಿಗಂ, ಕೊನೆಗೂ ಈ ವಿವಾದದ ಕುರಿತು ತಮ್ಮ ಮೌನ ಮುರಿದಿದ್ದಾರೆ. ಈ ಕುರಿತು ಸ್ಪಷ್ಟನೆ ಬಿಡುಗಡೆ ಮಾಡಿರುವ ಸೋನು ನಿಗಂ, ಕನ್ನಡ, ಕನ್ನಡ ಎಂದು ಖುಷಿಯಲ್ಲಿ ಹೇಳುವುದಕ್ಕೂ, ಕೋಪದಿಂದ ಬೆದರಿಕೆಯೊಡ್ಡುವ ರೀತಿ ಹೇಳುವುದಕ್ಕೂ ವ್ಯತ್ಯಾಸ ಇದೆ ಎಂದು ಹೇಳಿದ್ದಾರೆ.

"ನನ್ನ ಉದ್ದೇಶ ಇಡೀ ಸಮುದಾಯವನ್ನು ಟೀಕಿಸುವುದಾಗಿರಲಿಲ್ಲ. ಬದಲಿಗೆ ಕೆಲವು ವ್ಯಕ್ತಿಗಳು ಕನ್ನಡ ಗೀತೆಗಳಿಗಾಗಿ ಮನವಿ ಮಾಡುವ ಬದಲು ಬೆದರಿಕೆ ಒಡ್ಡುತ್ತಿದ್ದ ನಕಾರಾತ್ಮಕ ಕ್ರಿಯೆಗೆ ಪ್ರತಿಕ್ರಿಯೆ ನೀಡುವುದಾಗಿತ್ತು. ಕೆಲವು ವ್ಯಕ್ತಿಗಳು ನಾನು ಹಾಡುವಾಗ ತೊಂದರೆಯನ್ನುಂಟು ಮಾಡುತ್ತಿದ್ದರು" ಎಂದು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ಹೇಳಿದ್ದಾರೆ.

"ಅಂದು ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದ ನಡುವೆ ನಾಲ್ಕೈದು ಮಂದಿ 'ಕನ್ನಡ, ಕನ್ನಡ' ಎಂದು ಕೂಗುತ್ತಿದ್ದರು‌. ಈ ವೇಳೆ ಅಲ್ಲಿದ್ದ ಸಾವಿರಾರು ಮಂದಿ ಕಾರ್ಯಕ್ರಮಕ್ಕೆ ತೊಂದರೆಯನ್ನುಂಟು ಮಾಡಬೇಡಿ ಎಂದು ಅವರನ್ನು ತಡೆಯುತ್ತಿದ್ದರು. ಆ ಐವರಿಗೆ ಪಹಲ್ಗಾಮ್‌ನಲ್ಲಿ ಪ್ಯಾಂಟ್ ಬಿಚ್ಚಿಸಿದಾಗ, ಅವರ ಭಾಷೆಯನ್ನು ಕೇಳಲಾಗಿರಲಿಲ್ಲ ಎಂದು ನೆನಪಿಸಬೇಕಿತ್ತು"  ಎಂದು ಅವರು ತಮ್ಮ ವಿವಾದಾತ್ಮಕ ಪಹಲ್ಗಾಮ್ ಘಟನೆಯ ಉಲ್ಲೇಖದ ಕುರಿತು ಸಮಜಾಯಿಷಿ ನೀಡಿದ್ದಾರೆ.

ಇದೇ ವೇಳೆ, ಕನ್ನಡಿಗರು ತುಂಬಾ ಒಳ್ಳೆಯ ಜನರು ಎಂದೂ ಅವರು ಹೇಳಿದ್ದಾರೆ.

"ಯಾವುದೇ ರಾಜ್ಯದಲ್ಲಾದರೂ, ಅವರು ಯಾವ ರಾಜ್ಯದವರು ಎಂಬುದನ್ನು ಹೊರತುಪಡಿಸಿ ಇಂತಹ ನಾಲ್ಕೈದು ಮಂದಿ ಕೆಟ್ಟವರು ಇರುತ್ತಾರೆ. ಆದರೆ, ನಾವು ಹಾಡುವಂತೆ ಮಾಡಲು ಅವರಿಗೆ ಬೆದರಿಕೆ ಒಡ್ಡಲು ಅವಕಾಶ ನೀಡಬಾರದು ಎಂದು ಕನ್ನಡಿಗರಿಗೆ ನೆನಪಿಸಬೇಕಿರುವುದು ತುಂಬಾ ಮುಖ್ಯವಾಗಿದೆ. ಇಡೀ ಜಗತ್ತು ಅದನ್ನು ಪ್ರೀತಿಯಿಂದ ಮಾಡುತ್ತಿದೆ. ಯಾರಾದರೂ ನಮ್ಮನ್ನು ಪ್ರಚೋದಿಸಿದಾಗ, ಅಂಥವರನ್ನು ಅಲ್ಲೇ ತಡೆಯುವುದು ಬಹಳ ಮುಖ್ಯವಾಗಿದೆ. ಯಾಕೆಂದರೆ, ಮುಂದೆ ಅದೇ ರೂಢಿಯಾಗಿ ಹೋಗುತ್ತದೆ" ಎಂದು ಅವರು ತಮ್ಮ ವಿಡಿಯೊ ಸಂದೇಶದಲ್ಲಿ ಹೇಳಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News