×
Ad

ಆರೇ ದಿನದಲ್ಲಿ 600 ಕೋಟಿ ರೂ. ಬಾಚಿದ ‘ಜವಾನ್’:‌ ಹೊಸ ಮೈಲಿಗಲ್ಲು ನಿರ್ಮಿಸಿದ ಶಾರೂಖ್‌ ಚಿತ್ರ!

Update: 2023-09-13 11:52 IST

ಮುಂಬೈ: ಶಾರೂಖ್ ಖಾನ್ ಅಭಿನಯದ 'ಜವಾನ್' ಸಿನೆಮಾ ಮತ್ತೊಂದು ಮೈಲಿಗಲ್ಲಿನತ್ತ ಸಾಗುತ್ತಿದೆ. ಸೆಪ್ಟೆಂಬರ್ 7 ರಂದು ಬಿಡುಗಡೆಯಾದ ಈ ಚಿತ್ರವು ಭಾರತದಲ್ಲಿ ಸುಮಾರು 350 ಕೋಟಿ ರೂ.ಗಳನ್ನು ಗಳಿಸಿದ್ದು, ಕೇವಲ ಒಂದು ವಾರದೊಳಗೆ ವಿಶ್ವಾದ್ಯಂತ 600 ಕೋಟಿ ರೂಪಾಯಿಗಳನ್ನು ಗಳಿಸಿದೆ ಎಂದು ವರದಿಯಾಗಿದೆ.

ತಮಿಳಿನ ಯಶಸ್ವಿ ನಿರ್ದೇಶಕ ಅಟ್ಲಿ ನಿರ್ದೇಶನದ, ಆ್ಯಕ್ಷನ್-ಥ್ರಿಲ್ಲರ್ ಚಿತ್ರವಾದ ಜವಾನ್‌, ಮೊದಲ ದಿನದಂದೇ 74.50 ಕೋಟಿ ರೂ.ಗಳನ್ನು ಗಳಿಸಿತ್ತು. ವಿಶ್ವಾದ್ಯಂತ ಮೊದಲ ದಿನದಂದು 129.06 ಕೋಟಿ ರೂಪಾಯಿಗಳನ್ನು ಗಳಿಸುವ ಮೂಲಕ ದಾಖಲೆಯನ್ನು ಸೃಷ್ಟಿಸಿತ್ತು.

ವರದಿಗಳ ಪ್ರಕಾರ, ಚಿತ್ರ ಬಿಡುಗಡೆಯಾದ 6 ನೇ ದಿನದಂದು (ಸೆಪ್ಟೆಂಬರ್ 12) 'ಜವಾನ್' ಭಾರತದಲ್ಲಿ 26.50 ಕೋಟಿ ರೂ. ಗಳಿಸಿದ್ದು, ಆ ಮೂಲಕ ಕೇವಲ ಭಾರತದಲ್ಲಿ ಒಟ್ಟು 345.58 ಕೋಟಿ ರೂ. ಗಳನ್ನು ಕಲೆಕ್ಷನ್‌ ಮಾಡಿದೆ.

'ಗದರ್ 2' ಮತ್ತು 'ಪಠಾನ್' ಅನ್ನು ಹಿಂದಿಕ್ಕಿದ ಜವಾನ್‌, ಅತ್ಯಂತ ವೇಗವಾಗಿ 300 ಕೋಟಿ ಕ್ಲಬ್‌ಗೆ ಪ್ರವೇಶಿಸಿದ ಚಲನಚಿತ್ರವಾಗಿ ದಾಖಲೆ ಸೃಷ್ಟಿಸಿದೆ. 'ಜವಾನ್' ಕೇವಲ 6 ದಿನದಲ್ಲಿ ಈ ದಾಖಲೆ ಸೃಷ್ಟಿಸಿದ್ದು, 'ಪಠಾಣ್' 7ನೇ ದಿನದಲ್ಲಿ ಮತ್ತು 'ಗದರ್ 2' 8ನೇ ದಿನದಲ್ಲಿ 300 ಕೋಟಿ ಕ್ಲಬ್‌ ಸೇರಿತ್ತು.

ಜಾಗತಿಕ ಮಟ್ಟದಲ್ಲಿ, 'ಜವಾನ್' ಈಗಾಗಲೇ ಬಾಕ್ಸ್ ಆಫೀಸ್‌ನಲ್ಲಿ 600 ಕೋಟಿ ರೂಪಾಯಿಗಳ ಗಡಿ ದಾಟಿದೆ ಎಂದು ಸಿನೆಮಾ ವ್ಯಾಪಾರ ತಜ್ಞ ರಮೇಶ್ ಬಾಲಾ ಹೇಳಿದ್ದಾರೆ.

ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಸೆಪ್ಟೆಂಬರ್ 7 ರಂದು ವಿಶ್ವಾದ್ಯಂತ ಬಿಡುಗಡೆಯಾದ ಈ ಚಿತ್ರದಲ್ಲಿ ಶಾರುಖ್ ಖಾನ್ ಜೊತೆಗೆ ವಿಜಯ್ ಸೇತುಪತಿ, ನಯನತಾರಾ, ಸನ್ಯಾ ಮಲ್ಹೋತ್ರಾ ಮತ್ತು ಪ್ರಿಯಾಮಣಿ ನಟಿಸಿದ್ದಾರೆ. ದೀಪಿಕಾ ಪಡುಕೋಣೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರವು ಕಮರ್ಷಿಯಲ್ ಎಂಟರ್‌ಟೈನರ್ ಆಗಿದ್ದು ಎಸ್‌ಆರ್‌ಕೆ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪುಣೆ, ಮುಂಬೈ, ಹೈದರಾಬಾದ್, ಚೆನ್ನೈ, ರಾಜಸ್ಥಾನ ಮತ್ತು ಔರಂಗಾಬಾದ್‌ನಲ್ಲಿ ಚಿತ್ರೀಕರಣ ನಡೆದಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News