ಆಸ್ಕರ್ ವಿಜೇತ ‘ಎಲಿಫೆಂಟ್ ವಿಸ್ಪರರ್ʼ ಚಿತ್ರ ನಿರ್ಮಾಪಕರ ವಿರುದ್ಧ ಶೋಷಣೆ ಆರೋಪ ಮಾಡಿದ ಬೆಳ್ಳಿ-ಬೊಮ್ಮನ್ ದಂಪತಿ
Photo: thenewsminute.com
ಆಸ್ಕರ್ ಪ್ರಶಸ್ತಿ ಪುರಸ್ಕೃತ ಸಾಕ್ಷ್ಯಚಿತ್ರ 'ದಿ ಎಲಿಫೆಂಟ್ ವಿಷ್ಪರರ್ಸ್' (The Elephant Whisperers) ನಲ್ಲಿ ಪ್ರಮುಖ ಆಕರ್ಷಣೆಯಾಗಿರುವ ಬೊಮ್ಮನ್- ಬೆಳ್ಳೀ ಆದಿವಾಸಿ ದಂಪತಿಗಳು "ಈ ಸಾಕ್ಷ್ಯಚಿತ್ರದ ನಿರ್ಮಾಪಕರು ನಮ್ಮನ್ನು ಆರ್ಥಿಕವಾಗಿ ಶೋಷಿಸುತ್ತಿದ್ದಾರೆ ಮತ್ತು ಕಡೆಗಣಿಸುತ್ತಿದ್ದಾರೆ" ಎಂಬ ಗಂಭೀರ ಆರೋಪ ಮಾಡಿದ್ದಾರೆ. ಸಲಗಗಳ ಜತೆಗೆ ವಿಶಿಷ್ಟ ಬಂಧವನ್ನು ಹೊಂದಿರುವ ಮತ್ತು ಅವುಗಳ ಜತೆ ಸಂವಾದ ನಡೆಸುವ ಈ ದಂಪತಿಯ ಪ್ರಯತ್ನಗಳನ್ನು ದಾಖಲಿಸಿದ ಚಿತ್ರ 2023ನೇ ಸಾಲಿನಲ್ಲಿ ಅತ್ಯುತ್ತಮ ಸಾಕ್ಷ್ಯ ಚಿತ್ರ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಯನ್ನು ತಂದುಕೊಟ್ಟಿದೆ.
ಚಿತ್ರೀಕರಣದ ಸಂದರ್ಭದಲ್ಲಿ ದೊಡ್ಡ ಮೊತ್ತವನ್ನು ನಾವು ಖರ್ಚು ಮಾಡಿದ್ದು, ಈ ಗೌರವಧನವನ್ನು ಚಿತ್ರ ನಿರ್ಮಾಪಕರು ನೀಡಿಲ್ಲ ಎನ್ನುವುದು ಈ ದಂಪತಿಯ ಪ್ರಮುಖ ಆರೋಪ. ಆಸ್ಕರ್ ಪ್ರಶಸ್ತಿ ಬಂದ ಬಳಿಕ ಅವರಿಂದ ಯಾವುದೇ ಸ್ಪಂದನೆ ಇಲ್ಲ ಎಂದು ದೂರುತ್ತಾರೆ.
ಪ್ರೊಡಕ್ಷನ್ ಕಂಪನಿ ಸಿಖ್ಯಾ ಎಂಟರ್‍ಟೈನ್‍ಮೆಂಟ್ ಮತ್ತು ನಿರ್ದೇಶಕ ಕಾರ್ತಿಕಿ ಗೋನ್ಸಾಲ್ವೆಸ್ ಈ ಬಗ್ಗೆ ಪ್ರತಿಕ್ರಿಯಿಸಿ, "ಎಲಿಫೆಂಟ್ ವಿಷ್ಪರರ್ಸ್ ನಿರ್ಮಿಸುವ ಉದ್ದೇಶ ಆನೆಗಳ ಸಂವಾದವನ್ನು ಮತ್ತು ಅರಣ್ಯ ಇಲಾಖೆಯ ಹಾಗೂ ಮಾವುತರಾದ ಬೊಮ್ಮನ್- ಬೆಳ್ಳೀ ದಂಪತಿಯ ಅದ್ಭುತ ಪ್ರಯತ್ನವನ್ನು ಬಿಂಬಿಸುವುದಾಗಿತ್ತು. ಆರಂಭದಿಂದಲೂ ತನ್ನ ಉದ್ದೇಶದ ಬಗ್ಗೆ ಜಾಗೃತಿ ಮೂಡಿಸುತ್ತಲೇ ಬಂದಿದೆ. ಇದು ಮಾವುತ ಸಮುದಾಯದ ಮೇಳೆ ನೈಜ ಪರಿಣಾಮ ಬೀರಿದೆ. 91 ಮಂದಿ ಮಾವುತ ಹಾಗೂ ಸಹಾಯಕರಿಗೆ ಸಿಎಂ ಎಂ.ಕೆ.ಸ್ವಾಲಿನ್ ದೇಣಿಗೆ ನೀಡಿದ್ದಾರೆ. ಅವರಿಗಾಗಿ ಪರಿಸರ ಸ್ನೇಹಿ ಮನೆಗಳನ್ನು ನಿರ್ಮಿಸಿಕೊಟ್ಟಿರುವುದು ಮಾತ್ರವಲ್ಲದೇ ಆನೆ ಶಿಬಿರವನ್ನು ಅಣ್ಣಾಮಲೈ ಹುಲಿ ಅಭಯಾರಣ್ಯದಲ್ಲಿ ಅಭಿವೃದ್ಧಿಪಡಿಸಿದ್ದಾರೆ" ಎಂದು ಸ್ಪಷ್ಟನೆ ನೀಡಿದ್ದಾರೆ.
"ಈ ಸಾಕ್ಷ್ಯಚಿತ್ರವನ್ನು ದೇಶಾದ್ಯಂತ ಎಲ್ಲ ಮುಖಂಡರು ಸಂಭ್ರಮಿಸಿದ್ದಾರೆ ಹಾಗೂ ಅಕಾಡೆಮಿ ಪ್ರಶಸ್ತಿ ಇಡೀ ದೇಶ ಹೆಮ್ಮೆಪಡುವ ವಿಚಾರ. ಜತೆಗೆ ಬೊಮ್ಮನ್ ಮತ್ತು ಬೆಳ್ಳೀಗೆ ವ್ಯಾಪಕ ಮನ್ನಣೆ ದೊರಕಿಸಿಕೊಟ್ಟಿದೆ. ಅವರು ಮಾಡುವ ಎಲ್ಲ ಕ್ಲೇಮ್‍ಗಳು ನಿಜವಲ್ಲ. ಈ ಕಥಾನಕಕ್ಕೆ ಕೊಡುಗೆ ನೀಡಿದ ಎಲ್ಲರ ಬಗ್ಗೆ ನಮಗೆ ಗೌರವ ಇದೆ. ಧನಾತ್ಮಕ ಬದಲಾವಣೆ ತರುವ ಅಪೇಕ್ಷೆ ನಮ್ಮದು" ಎಂದು ವಿವರಿಸಿದ್ದಾರೆ.