ಸತ್ಯಜಿತ್ ಸುರತ್ಕಲ್‌ಗೆ ಬಿಜೆಪಿಯಿಂದ ಲೋಕಸಭೆ ಟಿಕೆಟ್ ನೀಡಲು ಆಗ್ರಹ: ಫೆ. 25ರಂದು ಅಭಿಮಾನಿಗಳಿಂದ ಜನಾಗ್ರಹ ಸಮಾವೇಶ
ಮಂಗಳೂರು: ಕಳೆದ 37 ವರ್ಷಗಳಿಂದ ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ಸಮಾಜಕ್ಕಾಗಿ ತನ್ನನ್ನು ಅರ್ಪಣೆ ಮಾಡಿ ರುವ ಸತ್ಯಜಿತ್ ಸುರತ್ಕಲ್ ಅವರಿಗೆ ಭಾತೀಯ ಜನತಾ ಪಾರ್ಟಿಯಲ್ಲಿ ದ.ಕ. ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡುವಂತೆ ಒತ್ತಾಯಿಸಿ ಬೆಂಬಲಿಗರಿಂದ ಜನಾಗ್ರಹ ಸಮಾವೇಶ ಆಯೋಜಿಸಲಾಗಿದೆ.
ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಹಿಂಜಾವೇ ಮಾಜಿ ಅಧ್ಯಕ್ಷ ಅಚ್ಯುತ್ ಅಮೀನ್ ಕಲ್ಮಾಡಿ, ಬಂಟ್ವಾಳ ತುಂಬೆಯ ಬಂಟರ ಭವನದಲ್ಲಿ ಫೆ. 25ರಂದು ಸಂಜೆ 3 ಗಂಟೆಗೆ ಈ ಸಮಾವೇಶ ನಡೆಯಲಿದೆ ಎಂದು ಅವರು ಹೇಳಿದರು.
ರಾಜ್ಯದ ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋತಿದ್ದರೂ, ಅವಿಭಜಿತ ದ.ಕ. ಜಿಲ್ಲೆ ಹಿಂದುತ್ವ ಹಾಗೂ ಬಿಜೆಪಿ ಭದ್ರ ಕೋಟೆಯಾಗಿ ಉಳಿದಿರುವಲ್ಲಿ ಸತ್ಯಜಿತ್ ಸುರತ್ಕಲ್‌ನಂತಹ ನಾಯಕರು ಹಾಗೂ ಕಾರ್ಯಕರ್ತರ ಭದ್ರ ಬುನಾದಿ ಕಾರಣ. ಹಾಗಾಗಿ ಅವರಿಗೆ ಈ ಬಾರಿ ಪಕ್ಷದಿಂದ ಟಿಕೆಟ್ ನೀಡಬೇಕೆಂಬುದು ಅವರ ಅಭಿಮಾನಿಗಳು ಹಾಗೂ ಕಾರ್ಯಕರ್ತರ ಆಗ್ರಹವಾಗಿದೆ ಎಂದವರು ಹೇಳಿದರು.
ಕಳೆದ ಹಲವು ವರ್ಷಗಳಿಂದ ರಾಜ್ಯದ ಯಾವುದೇ ಮೂಲೆಯಲ್ಲಿಯೂ ಹಿಂದೂಗಳಿಗೆ ಅನ್ಯಾಯವಾದಾಗ ಅಲ್ಲಿಗೆ ಧಾವಿಸಿ ಧೈರ್ಯ ತುಂಬಿ ಕಾನೂನಿನ ರಕ್ಷಣೆ ಕೊಡಿಸುವಲ್ಲಿ ಸತ್ಯಜಿತ್ ಸುರತ್ಕಲ್ ಪ್ರಮುಖರಾಗಿದ್ದು, ತನ್ನ 11ನೆ ವರ್ಷದಲ್ಲಿಯೇ ಸಂಘದ ಶಾಖೆಗೆ ಹೋಗುವ ಮೂಲಕ ಸಂಘ ಶಿಕ್ಷಣವನ್ನು 17ನೆ ವಯಸ್ಸಿನಿಂದಲೇ ಪಡೆದಿದ್ದಾರೆ. 21ನೆ ವಯಸ್ಸಿಗೆ ಹಿಂದೂ ಜಾಗರಣ ವೇದಿಕೆಯ ಜವಾಬ್ದಾರಿ ವಹಿಸಿಕೊಂಡು ಆಯೋಧ್ಯೆ ಹೋರಾಟ ಸೇರಿದಂತೆ ನಿರಂತರವಾಗಿ ಹಿಂದು ತ್ವದ ಹಲವಾರು ಹೋರಾಟಗಳಲ್ಲಿ ನಾಯಕತ್ವ ವಹಿಸಿದ್ದಾರೆ. ಅವರಿಗೆ ಈ ಬಾರಿ ಅವಕಾಶ ನೀಡಬೇಕು ಎಂಬುದು ನಮ್ಮೆಲ್ಲರ ಆಶಯ ಎಂದವರು ಹೇಳಿದರು.
ಅವಕಾಶ ಸಿಗದಿದ್ದರೆ ಮುಂದಿನ ನಡೆ ಏನು ಎಂಬ ಸುದ್ದಿಗಾರರ ಪ್ರಶ್ನೆಗೆ, ನಾವು ಆಶಾಭಾವನೆ ಹೊಂದಿದ್ದೇವೆ. ಸಮಾ ವೇಶದ ಬಳಿಕ ಟಿಕೆಟ್ ದೊರೆಯುವ ವಿಶ್ವಾಸ ನಮಗಿದ್ದು, ಬಳಿಕ ಮುಂದಿನ ನಿರ್ಧಾರ ಕಾರ್ಯಕರ್ತರಿಗೆ ಬಿಟ್ಟ ವಿಚಾರ ವಾಗಿದೆ ಎಂದು ಅಚ್ಯುತ್ ಅಮೀನ್ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಸಂದೀಪ್ ಶೆಟ್ಟಿ ಅಂಬ್ಲಮೊಗರು, ಭಾಸ್ಕರ ರಾವ್ ಬಾಳ, ಯಶಪಾಲ್ ಸಾಲ್ಯಾನ್ ಚಿತ್ರಾಪುರ, ನಿತಿನ್ ಸುವರ್ಣ ಕೆಂಜಾರು ಮೊದಲಾದವರು ಉಪಸ್ಥಿತರಿದ್ದರು.