×
Ad

ಮಂಗಳೂರಿನ ಮಹಿಳೆಗೆ 3.16 ಕೋಟಿ ರೂ. ವಂಚನೆ: ಪ್ರಕರಣ ದಾಖಲು

Update: 2025-07-05 21:10 IST

ಮಂಗಳೂರು, ಜು.5: ಪತಿಯ ಹೆಸರಿನಲ್ಲಿ ಹೊಸ ಸಿಮ್ ಖರೀದಿಸಿ ಅದರಿಂದ ವಂಚನೆಯ ಕರೆ ಮಾಡಲಾಗಿದೆ ಮತ್ತು ಸಂಶಯಾಸ್ಪದ ಲಿಂಕ್ ಕಳುಹಿಸಲಾಗಿದೆ ಎಂದು ನಂಬಿಸಿದ ಸೈಬರ್ ವಂಚಕರು ನಗರದ ಮಹಿಳೆಯೊಬ್ಬರಿಗೆ 3,16,52,142 ರೂ. ವಂಚನೆ ಮಾಡಿರುವ ಬಗ್ಗೆ ವರದಿಯಾಗಿದೆ.

ಜೂನ್ 5ರಂದು ಮುಂಬೈ ಸಹಾರ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಅನುಶರ್ಮ ಮತ್ತು ಸಬ್ ಇನ್‌ಸ್ಪೆಕ್ಟರ್ ಮೋಹನ್ ಕುಮಾರ್ ಎಂಬ ಹೆಸರಿನಲ್ಲಿ ತನಗೆ ಕರೆ ಮಾಡಿದ ವಂಚಕರು ನಿಮ್ಮ ಮತ್ತು ನಿಮ್ಮ ಪತಿಯ ಬ್ಯಾಂಕ್ ವಿವರದ ಬಗ್ಗೆ ತನಿಖೆ ಮಾಡಬೇಕಾಗಿದೆ ಎನ್ನುತ್ತಾ ಖಾತೆಗಳ ವಿವರ ಪಡೆದುಕೊಂಡಿದ್ದಾರೆ.

ಬಳಿಕ ಕರೆ ಮಾಡಿದ ವ್ಯಕ್ತಿಗಳು ಅವರ ಬೇರೆ ಬೇರೆ ಖಾತೆಗಳಿಗೆ ಜೂ.10ರಿಂದ 27ರವರೆಗೆ ತನ್ನ ಮತ್ತು ಪತಿಯ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಹಣ ಹಾಕಿಸಿಕೊಂಡಿದ್ದಾರೆ. ವಿಷಯವನ್ನು ಯಾರಿಗೂ ತಿಳಿಸದಂತೆ ಬೆದರಿಸಿ ಡಿಜಿಟಲ್ ಅರೆಸ್ಟ್ ಮಾಡಿದ್ದಾರೆ.

ಕರೆ ಮಾಡಿದ ವ್ಯಕ್ತಿಗಳು ನಂತರ ತನಗೆ ಯಾವುದೇ ಕರೆ ಅಥವಾ ಸಂದೇಶ ಕಳುಹಿಸದೆ ನನ್ನ ನಂಬರ್ ಬ್ಲಾಕ್ ಮಾಡಿದ್ದಾರೆ. ಈ ವಿಷಯವನ್ನು ಮಕ್ಕಳಿಗೆ ತಿಳಿಸಿದಾಗ ತಾನು ಮೋಸ ಹೋಗಿರುವುದು ಗಮನಕ್ಕೆ ಬಂದಿದೆ ಎಂದು ಮಹಿಳೆಯು ಮಂಗಳೂರಿನ ಸೆನ್ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News