×
Ad

ಮಕ್ಕಳ ಹಕ್ಕುಗಳು- ರಕ್ಷಣೆ ಬಗ್ಗೆ ಅರಿವು ಕಾರ್ಯಾಗಾರ

ಮಾಹಿತಿ ಕೊರತೆಯಿಂದ ಅರ್ಹರು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ: ಡಾ. ತಿಪ್ಪೇಸ್ವಾಮಿ

Update: 2025-12-29 14:31 IST

ಮಂಗಳೂರು, ಡಿ.29: ಮಕ್ಕಳ ಹಕ್ಕುಗಳು ಅದರಲ್ಲೂ ವಿಶೇಷವಾಗಿ ವಿಕಲಚೇತನ ಮಕ್ಕಳ ಹಕ್ಕುಗಳು ಮತ್ತು ರಕ್ಷಣೆಯ ಕುರಿತಂತೆ ಮಾಹಿತಿ ಕೊರತೆ ಬಹಳಷ್ಟಿದ್ದು, ಇದರಿಂದ ಅರ್ಹ ಫಲಾನುಭವಿಗಳು ಅಗತ್ಯ ಹಕ್ಕುಗಳು ಮತ್ತು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಡಾ. ತಿಪ್ಪೇಸ್ವಾಮಿ ಕೆ.ಟಿ. ಹೇಳಿದ್ದಾರೆ.

ದ.ಕ. ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಸೋಮವಾರ ದ.ಕ. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಹಾಗೂ ನಗರ ಪುನರ್ವಸತಿ ಕಾರ್ಯಕರ್ತರಿಗೆ ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ರಕ್ಷಣೆಯ ಕುರಿತ ಅರಿವು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ ವರ್ಷ ಸಂವಾದ ಕಾರ್ಯಕ್ರಮದ ವೇಳೆ ಸಂಬಂಧಿತ ಸಂಸ್ಥೆಗಳಿಗೆ ಮಕ್ಕಳ ಹಕ್ಕುಗಳು ಮತ್ತು ರಕ್ಷಣೆಯ ಕುರಿತಂತೆ ಸಾಕಷ್ಟು ಕೊರತೆ ಇರುವುದು ಕಂಡಿ ಬಂದಿದೆ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಈ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ತರಬೇತಿಗೆ ಕಾರ್ಯಯೋಜನೆ ರೂಪಿಸಲಾಗಿದೆ. ಅದರಂತೆ ಈಗಾಗಲೇ 20 ಜಿಲ್ಲೆಗಳಲ್ಲಿ ಈ ತರಬೇತಿ ಮುಗಿದಿದೆ. ಮುಂದಿನ 10 ತಿಂಗಳೊಳಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಈ ತರಬೇತಿ ಮುಗಿಯಲಿದೆ. ಮಾಹಿತಿ ಕೊರತೆಯಿಂದಾಗಿ ಅರ್ಹರಿಗೆ ಸಂವಿಧಾನಬದ್ಧವಾಗಿ ತಲುಪಬೇಕಾದ ಸೌಲಭ್ಯಗಳು ತಪ್ಪಬಾರದು ಎಂಬುದು ಈ ಕಾರ್ಯಾಗಾರದ ಆಶಯವಾಗಿದೆ ಎಂದು ಅವರು ಹೇಳಿದರು.

ದ.ಕ.ಜಿಲ್ಲೆಯಲ್ಲಿ 954 ವಿಕಲಚೇನ ಮಕ್ಕಳಿರುವುದಾಗಿ ಗುರುತಿಸಲಾಗಿದೆ. ಮಕ್ಕಳ ಮೇಲಿನ ಹಿಂಸೆ ದೌರ್ಜನ್ಯದ ಸಂದರ್ಭ ನಿರ್ವಹಿಸಬೇಕಾದ ಕರ್ತವ್ಯಗಳು, ಅವರ ಜತೆ ಕೆಲಸ ಮಾಡುವವರಿಗೆ ಇರಬೇಕು. ತಮ್ಮ ವ್ಯಾಪ್ತಿಯ ಮಕ್ಕಳು ಸಂಕಷ್ಟಕ್ಕೆ ಸಿಲುಕಿದಾಗ ಯಾರನ್ನು ಸಂಪರ್ಕಿಸಬೇಕು ಎಂಬ ಸ್ಪಷ್ಟ ಕಾನೂನಿನ ಅರಿವು ಇರಬೇಕು. ಗ್ರಾಮ ಪಂಚಾಯತ್‌ಗಳಿಗೆ ಸೀಮಿತವಾಗಿದ್ದ ಮಕ್ಕಳ ಕಾವಲು ಸಮಿತಿಯನ್ನು ಇದೀಗ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲೂ ರಚಿಸಲು ಆದೇಶವಾಗಿದೆ. ವರ್ಷಕ್ಕೊಮ್ಮೆ ವಿಕಲ ಚೇನತರಿಗಾಗಿಯೇ ವಿಶೇಷ ಗ್ರಾಮ ಸಭೆ ನಡೆಸಬೇಕೆಂಬ ನಿಯಮವಿದೆ. ಸಬಲೀಕರಣದ ಮೊದಲ ಹೆಜ್ಜೆಯೇ ಮಾಹಿತಿ ನೀಡುವುದಾಗಿದ್ದು, ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಮಕ್ಕಳಹಕ್ಕುಗಳು ಮತ್ತು ರಕ್ಷಣೆಯ ಕುರಿತಾದ ಕಾರ್ಯಕ್ರಮಗಳ ಅನುಷ್ಟಾನ ಕರಾವಳಿ ಜಿಲ್ಲೆಗಳಲ್ಲಿ ಉತ್ತಮವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದ.ಕ. ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಝೈಬುನ್ನೀಸಾ ಮಾತನಾಡಿ, ವಿಕಲಚೇತನ ಮಕ್ಕಳಿಗೆ ವಿಶೇಷ ರಕ್ಷಣೆ ಒದಗಿಸುವುದು ಎಲ್ಲಾ ಸರಕಾರಿ ವ್ಯವಸ್ಥೆಗಳ ಕರ್ತವ್ಯ ಎಂದರು.

ಮಕ್ಕಳ ಹಕ್ಕುಗಳು ಮಕ್ಕಳಿಂದಲೇ ಕೆಲವೊಂದು ಸಂದರ್ಭಗಳಲ್ಲಿ ಉಲ್ಲಂಘನೆಯಾಗುತ್ತದೆ. ಶಾಲೆಗಳಲ್ಲಿ ಇಂತಹ ಉಲ್ಲಂಘನೆಗಳು ಅಧಿಕವಾಗಿದ್ದು, ಈ ಬಗ್ಗೆ ಶಿಕ್ಷಕರು ಅರಿವು ಮೂಡಿಸುವ ಕೆಲಸ ಮಾಡಬೇಕು. ಮಕ್ಕಳ ಹಕ್ಕಗಳು ಮತ್ತು ರಕ್ಷಣೆಯ ಕುರಿತಂತೆ ಪ್ರಾಥಮಿಕ ಹಂತದಲ್ಲಿ ಪರಸ್ಪರ ಬೆರೆಯುವಿಕೆ, ಒಬ್ಬರಿಗೊಬ್ಬರ ರಕ್ಷಣೆ ಜತೆ ಸಿಗುವ ಹಕ್ಕು ಹಾಗೂ ಹಕ್ಕುಗಳ ಉಲ್ಲಂಘನೆ ಆದಾಗ ಕ್ರಮಗಳು ಏನೆಂಬುದರ ಬಗ್ಗೆಯೂ ಮೂರು ಸ್ತರಗಳಲ್ಲಿ 5ರಿಂದ ಮೇಲ್ಪಟ್ಟ ಶಾಲಾ ಮಕ್ಕಳಿಗೆ ಪಠ್ಯದ ಮೂಲಕ ಅರಿವು ನೀಡುವ ಅಗತ್ಯವಿದೆ ಎಂದು ಅವರು ಹೇಳಿದರು.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀರಕಣ ಇಲಾಖೆ, ಮಕ್ಕಳ ಸಹಾಯವಾಣಿ, ಜಿಲ್ಲ ಮಕ್ಕಳ ರಕ್ಷಣಾ ಘಟಕ ಹಾಗೂ ಸಂಬಂಧಿಸಿದ ಇಲಾಖೆಗಳ ಸಹಭಾಗಿತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮಾಜಿ ಅಧ್ಯಕ್ಷ ರೆನ್ನಿ ಡಿಸೋಜಾ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.

ದ.ಕ. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯ ಕಿಶೋರ್ ಕುಂದರ್ ಉಪಸ್ಥಿತರಿದ್ದರು.

ಮಕ್ಕಳ ರಕ್ಷಣಾಧಿಕಾರಿ ರಶ್ಮಿ ಸ್ವಾಗತಿಸಿದರು. ಸಮಾಜ ಕಾರ್ಯಕರ್ತೆ ಯಶೋದಾ ವಂದಿಸಿದರು.

 

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News