×
Ad

ಬ್ಯಾರೀಸ್ ಗ್ಲೋಬಲ್ ಯುನಿವರ್ಸಿಟಿ ಸ್ಥಾಪನೆಯ ಗುರಿ: ಸಯ್ಯದ್ ಬ್ಯಾರಿ

Update: 2023-12-16 18:18 IST

ಮಂಗಳೂರು : 21ನೇ ಶತಮಾನದಲ್ಲಿ ಭಾರತಕ್ಕೆ ಉಜ್ವಲ ಅವಕಾಶವಿದೆ. ಈ ಶತಮಾನದಲ್ಲಿ ಜಗತ್ತಿನ ಅತ್ಯಂತ ಶಕ್ತಿಶಾಲಿ ದೇಶವಾಗಿ ಭಾರತ ಮೂಡಿಬರಲಿದೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿ ಯುವಜನರು ನಾಗರೀಕ ಸೇವೆ, ರಕ್ಷಣಾ ಕ್ಷೇತ್ರ ಸಹಿತ ಉದ್ಯಮ ಮತ್ತಿತರ ರಂಗಗಳಲ್ಲಿ ಕ್ರೀಯಾಶೀಲವಾಗಿ ಸಮಾಜ ಹಾಗು ದೇಶ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು. ಬ್ಯಾರೀಸ್ ಸಮೂಹ ವೈದ್ಯಕೀಯ ವಿಜ್ಞಾನ ಸಹಿತ ವಿಜ್ಞಾನದ ಆಧುನಿಕ ಕ್ಷೇತ್ರಗಳಲ್ಲಿ ಶಿಕ್ಷಣ ನೀಡುವ ಯೋಜನೆಯಿದೆ. ಮುಂದೆ ಬ್ಯಾರೀಸ್ ಗ್ಲೋಬಲ್ ಯುನಿವರ್ಸಿಟಿ ಫಾರ್ ಸೊಸೈಟಲ್ ಹ್ಯಾಪಿನೆಸ್ ಸ್ಥಾಪಿಸುವುದು ನಮ್ಮ ಗುರಿ ಎಂದು ಬ್ಯಾರೀಸ್ ಅಕಾಡೆಮಿ ಆಫ್ ಲರ್ನಿಂಗ್ ನ ಅಧ್ಯಕ್ಷ ಸಯ್ಯದ್ ಮೊಹಮ್ಮದ್ ಬ್ಯಾರಿ ಅವರು ನೂತನ ಪದವೀಧರರಿಗೆ ಕರೆ ನೀಡಿದ್ದಾರೆ.

ಶನಿವಾರ ಮಂಗಳೂರು ವಿವಿ ಸಮೀಪದಲ್ಲಿರುವ ಬ್ಯಾರೀಸ್ ನಾಲೆಜ್ ಕ್ಯಾಂಪಸ್ ನಲ್ಲಿ ನಡೆದ ಬ್ಯಾರೀಸ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಬಿಐಟಿ) 11ನೇ ಹಾಗು ಬ್ಯಾರೀಸ್ ಎನ್ವಿರೋ ಆರ್ಕಿಟೆಕ್ಚರ್ ಡಿಸೈನ್ ಸ್ಕೂಲ್ ನ (ಬೀಡ್ಸ್) ನಾಲ್ಕನೇ ಪದವಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಸತ್ಯ, ವಿಶ್ವಾಸ ಹಾಗು ಸಹಾನೂಭೂತಿ - ಈ ಮೂರು ಅಂಶಗಳನ್ನು ಯುವಜನರು ಜೀವನದ ಪ್ರತಿಯೊಂದು ಹಂತದಲ್ಲೂ ಅಳವಡಿಸಿಕೊಳ್ಳಬೇಕು. ಆರ್ಥಿಕ ಲಾಭವೊಂದೇ ಯುವಜನರ ಗುರಿಯಾಗಬಾರದು. ನಮ್ಮ ವಿಧಿಯಲ್ಲಿರುವುದು ನಮಗೆ ಸಿಗದೇ ಹೋಗುವುದಿಲ್ಲ. ನಾವು ವೈಯಕ್ತಿಕ ಲಾಭಕ್ಕಿಂತ ಹೆಚ್ಚು ಸದಾ ಸಮಾಜದ ಸುಖ, ಶಾಂತಿಯ ಬಗ್ಗೆ ಗಮನ ಹರಿಸಬೇಕು. ಯುವಜನರು ಯಾವುದೇ ಕಾರಣಕ್ಕೂ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು. ಸದಾ ನಮಗೆ ಇಷ್ಟೆಲ್ಲಾ ಕೊಟ್ಟಿರುವ ದೇಶಕ್ಕೆ ನಾವೇನು ಕೊಡುಗೆ ಕೊಡಬಹುದು ಎಂಬ ನಿಟ್ಟಿನಲ್ಲೇ ಯೋಚಿಸಬೇಕು ಎಂದು ಸಯ್ಯದ್ ಬ್ಯಾರಿ ಹೇಳಿದರು.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಉದ್ಯೋಗಗಳನ್ನು ಕಿತ್ತುಕೊಳ್ಳಲಿದೆ ಎಂಬ ಆತಂಕ ಬೇಡ. ಅದಕ್ಕೆ ಅದರದ್ದೇ ಆದ ಇತಿಮಿತಿಗಳಿವೆ. ಯಾವುದೇ ರಂಗದಲ್ಲಿ ಮನುಷ್ಯ ಸ್ಪರ್ಶ ಹಾಗು ಆಲೋಚನೆಗಳಿಗೆ ಯಾವತ್ತೂ ಪರ್ಯಾಯ ಇಲ್ಲವೇ ಇಲ್ಲ ಎಂದವರು ಹೇಳಿದರು.

ದಿಕ್ಸೂಚಿ ಭಾಷಣ ಮಾಡಿದ ಮಾನವ ಸಂಪನ್ಮೂಲ ತಜ್ಞ ಹಾಗು ಲೀಡರ್ ಶಿಪ್ ಕೋಚ್ ಡಾ. ಸಂಪತ್ ಜೆ ಎಂ ಅವರು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಹಾಗು ಜನರೇಟೆಡ್ ಇಂಟೆಲಿಜೆನ್ಸ್ ನಿಂದ ಬದಲಾಗುತ್ತಿರುವ ವಿಜ್ಞಾನ ಹಾಗು ತಂತ್ರಜ್ಞಾನ ಕ್ಷೇತ್ರದಲ್ಲಿ ಯುವಜನರು ಜ್ಞಾನದ ಸೃಷ್ಟಿಕರ್ತರಾಗಬೇಕು ಎಂದು ಕರೆ ನೀಡಿದರು. ವಿದ್ಯಾರ್ಥಿಗಳು ತಮ್ಮ ಜೀವನದ ಉದ್ದೇಶ, ಗುರಿ ಹಾಗು ವೈಯಕ್ತಿಕ ಮೌಲ್ಯಗಳ ಕುರಿತು ಸ್ಪಷ್ಟತೆ ಬೆಳೆಸಿಕೊಳ್ಳಬೇಕು. ಯಾರದ್ದೋ ಗುರಿ ಸಾಧನೆಗಾಗಿ ದುಡಿಯುವುದಕ್ಕಿಂತ ತಮ್ಮ ನಿರ್ಧಾರ, ಸರಿ ತಪ್ಪುಗಳ ಬಗ್ಗೆ ಸ್ಪಷ್ಟ ನಿಲುವು ತೆಗೆದುಕೊಂಡು ಒಂದು ಸ್ವಂತ ದೃಷ್ಟಿಕೋನ ಇಟ್ಟುಕೊಂಡು ಮುಂದುವರಿಯಬೇಕು ಎಂದು ಅವರು ಸಲಹೆ ನೀಡಿದರು.

ಉದ್ಘಾಟನಾ ಭಾಷಣ ಮಾಡಿದ ಕಣ್ಣೂರು ಹಾಗು ಕ್ಯಾಲಿಕಟ್ ವಿವಿಗಳ ಮಾಜಿ ಉಪಕುಲಪತಿ ಪ್ರೊ. ಅಬ್ದುಲ್ ರಹ್ಮಾನ್ ಅವರು ನಾವು ನಮ್ಮ ವ್ಯಕ್ತಿತ್ವದಲ್ಲಿ ಸಹಾನುಭೂತಿಯ ಗುಣ ಬೆಳೆಸಿಕೊಳ್ಳಬೇಕು. ಇತರರ ಬಗ್ಗೆ ಕಾಳಜಿ ವಹಿಸುವುದು ಹಾಗು ಅವರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವುದು ವ್ಯಕ್ತಿ ಜೀವನದಲ್ಲಿ ಸಾಧನೆ ಮಾಡಲು ಬಹಳ ಮುಖ್ಯ. ಯಶಸ್ಸು ಕೇವಲ ಅದೃಷ್ಟದಿಂದ ಬರುವುದಿಲ್ಲ. ಅದು ಕಠಿಣ ಶ್ರಮ, ನಿರಂತರ ಪ್ರಯತ್ನ ಹಾಗು ಸ್ಪಷ್ಟ ಯೋಜನೆಯಿಂದ ಬರುತ್ತದೆ ಎಂದು ಕಿವಿಮಾತು ಹೇಳಿದರು.

ಪದವಿ ಪ್ರದಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಮಂಗಳೂರು ವಿವಿ ಉಪಕುಲಪತಿ ಡಾ.ಜಯರಾಜ್ ಅಮೀನ್ ಅವರು ಇಂದು ನೀವು ದೊಡ್ಡ ಸಾಧನೆ ಮಾಡಿದ್ದೀರಿ. ಅದಕ್ಕಾಗಿ ನೀವು ಪಟ್ಟ ಶ್ರಮ, ಪ್ರಯತ್ನ ಫಲ ಕೊಟ್ಟಿದ್ದಕ್ಕೆ ಖುಷಿಪಡಿ, ಸಂಭ್ರಮಿಸಿ. ಅದರ ಜೊತೆಗೆ ಈ ವಿದ್ಯಾ ಸಂಸ್ಥೆಯ ಪಾತ್ರ ಹಾಗು ನಿಮ್ಮ ಹೆತ್ತವರ ಅಮೂಲ್ಯ ಕೊಡುಗೆಗಳನ್ನು ಎಂದೂ ಮರೆಯಬೇಡಿ ಎಂದು ಹೇಳಿದರು.

ಬೆಂಗಳೂರಿನ ಆರ್ಕಿಟೆಕ್ಚರ್ ಪ್ಯಾರಾಡೈಮ್ ನ ಸ್ಥಾಪಕ ಪಾಲುದಾರ ಸಂದೀಪ್ ಜಗದೀಶ್ ಹಾಗು ಆಟಂ 360 ಯ ಸಹ ಸ್ಥಾಪಕಿ ಹಾಗು ಬಿಐಟಿ ಹಳೆ ವಿದ್ಯಾರ್ಥಿನಿ ರಿಝ್ಮಾ ಬಾನು ಅವರು ನೂತನ ಪದವೀಧರರನ್ನು ಉದ್ದೇಶಿಸಿ ಮಾತನಾಡಿದರು.

ಮಾಸ್ಟರ್ ಶೆಫ್ ಇಂಡಿಯಾ ಪ್ರಶಸ್ತಿ ಗೆದ್ದ ಪ್ರಪ್ರಥಮ ದಕ್ಷಿಣ ಭಾರತೀಯ ಮಂಗಳೂರಿನ ಮೊಹಮ್ಮದ್ ಆಶಿಕ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಬ್ಯಾರೀಸ್ ಇನ್ಸ್ ಟಿಟ್ಯೂಟ್ ಆಫ್ ಎಮರ್ಜಿನ್ಗ್ ಸಯನ್ಸಸ್ ನ ಪ್ರಾಂಶುಪಾಲ ಡಾ. ಅಝೀಝ್ ಮುಸ್ತಫಾ ಅವರು ನೂತನ ಪದವೀಧರರಿಗೆ ಪ್ರತಿಜ್ಞೆ ಬೋಧಿಸಿದರು.

ಸಾಧಕ ಹಳೆ ವಿದ್ಯಾರ್ಥಿಗಳನ್ನು, ಪಿ ಎಚ್ ಡಿ ಪದವಿ ಪಡೆದವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಬಿಐಟಿ ಪ್ರಾಂಶುಪಾಲ ಡಾ. ಎಸ್ ಐ ಮಂಜೂರ್ ಬಾಷಾ ಸ್ವಾಗತಿಸಿದರು. ಬೀಡ್ಸ್ ಪ್ರಾಂಶುಪಾಲ ಖಲೀಲ್ ಶೇಖ್ ಅವರು ಧನ್ಯವಾದ ಸಲ್ಲಿಸಿದರು.

ಸಯ್ಯದ್ ಬ್ಯಾರಿ ಮಾದರಿ : ಪ್ರೊ.ಡಾ.ಅಬ್ದುಲ್ ರಹ್ಮಾನ್

ಸಯ್ಯದ್ ಬ್ಯಾರಿ ಅವರಿಗೆ ಯಶಸ್ಸು ಸುಲಭವಾಗಿ ದಕ್ಕಲಿಲ್ಲ. ಅವರು ಅದಕ್ಕಾಗಿ ಸ್ಪಷ್ಟ ಯೋಜನೆ ಹಾಗು ಪರಿಶುದ್ಧ ಮನಸ್ಸಿನೊಂದಿಗೆ ನಿರಂತರ ಶ್ರಮ ಹಾಕಿದ್ದಾರೆ. ತಾನು ನಂಬಿರುವ ಮೌಲ್ಯಗಳನ್ನು ಎಂದೂ ಬಿಟ್ಟುಕೊಟ್ಟಿಲ್ಲ. ಅದರಿಂದಾಗಿಯೇ ಅವರಿಗೆ ಉದ್ಯಮದಲ್ಲಿ ಹಾಗು ಶೈಕ್ಷಣಿಕ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡುವುದು ಸಾಧ್ಯವಾಯಿತು. ಯುವಜನರಿಗೆ ಅವರ ಜೀವನ ಮಾದರಿಯಾಗಿದೆ.

















































































Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News