ಡಿ.25ರಿಂದ 29ರವರೆಗೆ ಅಜಿಲಮೊಗರು ಮಾಲಿದಾ ಉರೂಸ್
ಮಂಗಳೂರು, ಡಿ.21: ಅಜಿಲಮೊಗರು ಜುಮಾ ಮಸೀದಿಯ ಸಂಸ್ಥಾಪಕ ಹಝ್ರತ್ ಸೈಯದ್ ಬಾಬಾ ಫಕ್ರುದ್ದೀನ್ ವಲಿ (ಖ.ಸಿ.) ಅವರ ಸ್ಮರಣಾರ್ಥ ನಡೆಯುವ 751ನೆ ಮಾಲಿದಾ ಉರೂಸ್ ಡಿ. 25ರಿಂದ 29ರವರೆಗೆ ನಡೆಯಲಿದೆ ಎಂದು ಮಸೀದಿಯ ಪ್ರಧಾನ ಕಾರ್ಯದರ್ಶಿ ಎಂ.ಕೆ.ಸಿನಾನ್ ಸಖಾಫಿ ತಿಳಿಸಿದ್ದಾರೆ.
ನಗರದ ಪ್ರೆಸ್ಕ್ಲಬ್ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಡಿ.25ರಂದು ಮಗ್ರಿಬ್ ನಮಾಝ್ ಬಳಿಕ ಅಸ್ಸೈಯದ್ ಜಾಫರ್ ಸ್ವಾದಿಕ್ ತಂಙಳ್, ಕುಂಬೋಳ್ ನೇತೃತ್ವದಲ್ಲಿ ಜಲಾಲಿಯ್ಯಾ ರಾತೀಬ್ ನಡೆಯಲಿದೆ. ಡಿ.26ರಂದು ಭಂಡಾರದ ಹರಕೆ ಪ್ರಾರಂಭ ಹಾಗೂ ಬುರ್ದಾ ಮಜ್ಲಿಸ್ ನಡೆಯಲಿದ್ದು, ಸೈಯದ್ ಮುಖ್ತಾರ್ ತಂಙಳ್ ಕುಂಬೋಳ್ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಜರುಗಲಿದೆ.
ಡಿ.27ರಂದು ಬೆಳಗ್ಗೆ 8ರಿಂದ ಊರ ಪರವೂರವರ ಕೂಡುವಿಕೆಯಿಂದ ಮಾಲಿದಾ ಹರಕೆ ಆರಂಭವಾಗಲಿದೆ. ಮಗ್ರಿಬ್ ನಮಾಝ್ ಬಳಿಕ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿಯವರಿಂದ ಧಾರ್ಮಿಕ ಪ್ರವಚನ ನಡೆಯಲಿದೆ. ಡಿ.28ರಂದು ಬೆಳಗ್ಗೆ 9ಕ್ಕೆ ಮಾಲಿದಾ ವಿತರಣೆ, ಸಾಮೂಹಿಕ ಪ್ರಾರ್ಥನೆ ಹಾಗೂ ಮಗ್ರಿಬ್ ನಮಾಝ್ ಬಳಿಕ ವಾಗ್ಮಿ ಆಶಿಕ್ ದಾರಿಮಿ ಆಲಪ್ಪುಝ ಅವರಿಂದ ಪ್ರವಚನ ನಡೆಯಲಿದೆ. ಡಿ.29ರಂದು ಸಮಾರೋಪ ಸಮಾರಂಭದಂದು ಹಗಲು ಸಾಮೂಹಿಕ ಪ್ರಾರ್ಥನೆ ಹಾಗೂ ಅಪರಾಹ್ನ 2ರಿಂದ ಸಂಜೆ 5ರವರೆಗೆ ಕಂದೂರಿ ಊಟ ವಿತರಣೆಯಾಗಲಿದೆ ಎಂದು ಅವರು ವಿವರಿಸಿದರು.
ಐದು ದಿನಗಳಲ್ಲಿ ಖ್ಯಾತ ಸಾದಾತುಗಳು ಹಾಗೂ ಧಾರ್ಮಿಕ ವಿದ್ವಾಂಸರಿಂದ ಝಿಯಾರತ್, ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. ಉರೂಸ್ ಸಂದರ್ಭ ಫ್ಯಾನ್ಸಿ ಟಾಯ್ಸ್ ಗಳ ವ್ಯಾಪಾರ, ಮನೋರಂಜನಾ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ ಎಂದು ಜಮಾಅತ್ ಅಧ್ಯಕ್ಷ ಹಾಗೂ ಕಮಿಟಿ ಸದಸ್ಯ ಹಾಜಿ ಪಿ.ಬಿ.ಅಬ್ದುಲ್ ಹಮೀದ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಸೀದಿಯ ಧರ್ಮಗುರು ಪಿ.ಎಸ್.ತ್ವಾಹಾ ಸಅದಿ, ಇಬ್ರಾಹೀಂ ಜಿ. ಅಜಿಲಮೊಗರು, ಆದಂ ಕುಂಞಿ ನಡುಮೊಗರು ಉಪಸ್ಥಿತರಿದ್ದರು.