ಧರ್ಮಸ್ಥಳ ದೂರು | ಗ್ರಾಮ ಪಂಚಾಯತ್ ಉಪಾಧ್ಯಕ್ಷರ ಬಂಧನಕ್ಕೆ ಆಗ್ರಹಿಸಿದ ಸುಜಾತಾ ಭಟ್ ಪರ ವಕೀಲರು
ಮಂಗಳೂರು, ಜು.28: ಧರ್ಮಸ್ಥಳದಲ್ಲಿ ಹಲವಾರು ಶವಗಳನ್ನು ಹೂಳಲಾಗಿದೆ ಎಂದು ಆರೋಪಿಸಲಾಗಿರುವ ಪ್ರಕರಣದಲ್ಲಿ ಸೋಮವಾರ ಮಹತ್ವದ ಬೆಳವಣಿಗೆ ನದೆದಿದೆ. ಇದು ಎಲ್ಲ ಶವಗಳನ್ನು ಸೂಕ್ತ ದಾಖಲಾತಿಯೊಂದಿಗೆ ಅಧಿಕೃತ ಮಾರ್ಗಗಳ ಮೂಲಕ ಹೂಳಲಾಗಿತ್ತು ಎಂಬ ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ ರಾವ್ ಅವರ ಪೊಳ್ಳು ಹೇಳಿಕೆಗಳನ್ನು ಬಹಿರಂಗಗೊಳಿಸಿದೆ, ಎಂದು ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾರೆ ಎನ್ನಲಾದ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ಅವರ ತಾಯಿ ಸುಜಾತಾ ಭಟ್ ಪರ ವಕೀಲ ಮಂಜುನಾಥ್ ಎನ್. ಅವರು ಪ್ರತಿಪಾದಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆ ನೀಡಿರುವ ಅವರು, ಪ್ರಕರಣದ ದೂರುದಾರರು ಸೋಮವಾರ ವಿಶೇಷ ತನಿಖಾ ತಂಡ (SIT)ವನ್ನು ನೇತ್ರಾವತಿ ನದಿ ಸಮೀಪದ ಪ್ರದೇಶದಲ್ಲಿ ಶವಗಳನ್ನು ಹೂಳಲಾಗಿದ್ದ ಹಲವಾರು ಸ್ಥಳಗಳಿಗೆ ಕರೆದೊಯ್ದಿದ್ದರು. ಈ ಪ್ರದೇಶವು ಎಷ್ಟೊಂದು ಅಪಾಯಕಾರಿಯಾಗಿದೆ ಎಂದರೆ, ದೇಶದಲ್ಲಿಯ ಯಾವುದೇ ಪಂಚಾಯತಿಯು ಶವಗಳನ್ನು ಅಧಿಕೃತವಾಗಿ ಹೂಳಲು ಇಂತಹ ಸ್ಥಳಗಳನ್ನು ಆಯ್ಕೆ ಮಾಡುವುದಿಲ್ಲ. ಮಂಗಳವಾರದಿಂದ ಶವಗಳನ್ನು ಹೊರತೆಗೆಯಲು SIT ಗುರುತಿಸಿರುವ ಈ ಸ್ಥಳಗಳು 1980ರ ದಶಕದಿಂದಲೂ ವ್ಯವಸ್ಥಿತ, ದಾಖಲಿತ ಹೂಳುವಿಕೆಯ ಕುರಿತು ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ ರಾವ್ ಹೇಳಿಕೆಗೆ ಸಂಪೂರ್ಣವಾಗಿ ವಿರುದ್ಧವಾಗಿವೆ ಎಂದು ವಕೀಲ ಮಂಜುನಾಥ್ ಬೆಟ್ಟು ಮಾಡಿದ್ದಾರೆ.
ಸೋಮವಾರದಂದು ಗುರುತಿಸಲಾಗಿರುವ ಸ್ಥಳಗಳು ಅಪಾಯಕಾರಿ ಮತ್ತು ಪ್ರವೇಶಿಸಲು ಕಷ್ಟಕರವಾದ ಪ್ರದೇಶದಲ್ಲಿದ್ದು, ಯಾವುದೇ ವಿವೇಕಯುತ ಪಂಚಾಯತ್ ಆಡಳಿತವು ಬಳಿಕ ಸಂಬಂಧಿಕರಿಗಾಗಿ ಹೊರತೆಗೆಯುವುದು ಅಗತ್ಯವಾಗಬಹುದಾದ ಶವಗಳನ್ನು ಇಲ್ಲಿ ಹೂಳುವುದಿಲ್ಲ. ಶವಗಳನ್ನು ಹೂಳಲಾದ ಸ್ಥಳಗಳು ಅಧಿಕೃತ ಪಂಚಾಯತ್ ಕಾರ್ಯವಿಧಾನಕ್ಕೆ ಅನುಗುಣವಾಗಿ ಯಾವುದೇ ಗೊತ್ತುಪಡಿಸಿದ ಬಯಲು ಮತ್ತು ಸುಲಭವಾಗಿ ತಲುಪಬಹುದಾದ ಪ್ರದೇಶಗಳ ಬದಲು ಅರಣ್ಯದಂತಹ ಪ್ರದೇಶಗಳಲ್ಲಿ ಅಲ್ಲಲ್ಲಿ ಹರಡಿಕೊಂಡಿವೆ. ಪಂಚಾಯತ್ ದಾಖಲೆಗಳನ್ನು ನಿರ್ವಹಿಸಿದೆ ಮತ್ತು ಬಳಿಕ ಸಂಬಂಧಿಕರು ಬಂದ ಬಳಿಕ ಶವಗಳನ್ನು ಹೊರತೆಗೆದಿದ್ದೂ ಇದೆ ಎಂದು ರಾವ್ ಹೇಳಿಕೊಂಡಿದ್ದರು. ಪಂಚಾಯತ್ ಇಂತಹ ಅಪಾಯಕಾರಿ ಪ್ರದೇಶಗಳಿಗೆ ದುಃಖತಪ್ತ ಕುಟುಂಬಗಳನ್ನು ಸುರಕ್ಷಿತವಾಗಿ ಕರೆದೊಯ್ಯಲು ಹೇಗೆ ಸಾಧ್ಯ ಎಂದು ವಕೀಲ ಮಂಜುನಾಥ್ ಪ್ರಶ್ನಿಸಿದ್ದಾರೆ.
ದೂರುದಾರರು ಹಲವಾರು ಗುಪ್ತಸ್ಥಳಗಳನ್ನು SIT ಗೆ ತೋರಿಸಲು ಗಂಟೆಗಟ್ಟಲೆ ಸಮಯವನ್ನು ತೆಗೆದುಕೊಂಡಿದ್ದರು ಮತ್ತು ಇವುಗಳಲ್ಲಿ ಒಂದೂ ಸ್ಥಳವು ಅಧಿಕೃತ ಕಾರ್ಯವಿಧಾನವು ಕಡ್ಡಾಯಗೊಳಿಸಿರುವಂತೆ ಗೊತ್ತುಪಡಿಸಿದ ಪ್ರದೇಶದಲ್ಲಿ ಇರಲಿಲ್ಲ. ದುರ್ಗಮ ಪ್ರದೇಶಗಳಲ್ಲಿ ಶವಗಳನ್ನು ಹೂಳಲಾದ ಸ್ಥಳಗಳು ತಾರ್ಕಿಕತೆಯನ್ನು ಮೀರಿದ್ದು, ಪಂಚಾಯತ್ ಹೇಳಿಕೆಯ ಪೊಳ್ಳುತನವನ್ನು ಬಯಲಿಗೆಳೆದಿದೆ. ಇದು ಈಗ ಅಪರಾಧಗಳನ್ನು ಮುಚ್ಚಿ ಹಾಕುವ ಕಾರ್ಯಾಚರಣೆಯಂತೆ ಕಂಡು ಬರುತ್ತಿದ್ದು, ಇದರಲ್ಲಿ ರಾವ್ ಪಾತ್ರದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದಿರುವ ವಕೀಲ ಮಂಜುನಾಥ್, ಈ ಸ್ಥಳಗಳಲ್ಲಿ ಮಾನವ ಅವಶೇಷಗಳು ಪತ್ತೆಯಾದ ತಕ್ಷಣ ರಾವ್ ಅವರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಇದರಲ್ಲಿ ಶಾಮೀಲಾಗಿರಬಹುದಾದ ಪಂಚಾಯತ್ ನ ಎಲ್ಲ ಅಧಿಕಾರಿಗಳನ್ನು ತನಿಖೆಗೊಳಪಡಿಸುವಂತೆ ಅವರು ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.