×
Ad

ಕಡಬ: ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ಪ್ರಕರಣ; ಆರೋಪಿಯ ಬಂಧನ

Update: 2024-03-04 12:23 IST

 ಕಡಬ, ಮಾ.04. ಕಾಲೇಜು ಆವರಣದಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ನಡೆಸಿದ ಆರೋಪಿಯನ್ನು ಕಡಬ ಪೊಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿದೆ.

ಆರೋಪಿಯನ್ನು ಕೇರಳದ ಮಲಪ್ಪುರಂ ಜಿಲ್ಲೆಯ ನಿಲಂಬೂರ್‌ ನಿವಾಸಿ ಎಂಬಿಎ ವಿದ್ಯಾರ್ಥಿ ಅಬೀನ್‌ (23) ಎಂದು ಗುರುತಿಸಲಾಗಿದೆ. ಈತ  ಶಾಲಾ ವರಾಂಡದಲ್ಲಿ ಪರೀಕ್ಷಾ ತಯಾರಿ ನಡೆಸುತ್ತಿದ್ದ ಸೈನ್ಸ್‌ ವಿಭಾಗದ ವಿದ್ಯಾರ್ಥಿನಿಯ  ಮೇಲೆ  ಆ್ಯಸಿಡ್ ಎರಚಿದ್ದಾನೆ. ಈ ವೇಳೆ ಆಕೆಯ ಸಮೀಪ ಇದ್ದ ಇನ್ನಿಬ್ಬರು ವಿದ್ಯಾರ್ಥಿನಿಯರಿಗೂ ಆ್ಯಸಿಡ್ ತಗುಲಿದೆ ಎಂದು ತಿಳಿದು ಬಂದಿದೆ.

ಆರೋಪಿಯು ಕಡಬ ಕಾಲೇಜಿನ ಸಮವಸ್ತ್ರವನ್ನು ಹೋಲುವ ಬಿಳಿ ಅಂಗಿ ಮತ್ತು ನೀಲಿ ಪ್ಯಾಂಟ್ ಧರಿಸಿ ಆಗಮಿಸಿದ್ದು, ಪರೀಕ್ಷೆಗೆ ಸಿದ್ಧರಾಗುತ್ತಿದ್ದ ಇತರ ವಿದ್ಯಾರ್ಥಿಗಳೊಂದಿಗೆ ಜಗಲಿಯಲ್ಲಿ ಕುಳಿತಿದ್ದ.  ಪರಿಸರದ ಇತರ ಕಾಲೇಜಿನಿಂದಲೂ ಈ ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಬಂದಿದ್ದರಿಂದ ಈತನ ಬಗ್ಗೆ ಯಾರೂ ಅನುಮಾನ ಗೊಂಡಿರಲಿಲ್ಲ ಎನ್ನಲಾಗಿದೆ. 

ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಪ್ರಶ್ನೆ ಪತ್ರಿಕೆಗಳ ಬಂಡಲನ್ನು ಕಛೇರಿಯಲ್ಲಿ ಬಿಚ್ಚುತ್ತಿದ್ದ ವೇಳೆ ವಿದ್ಯಾರ್ಥಿಗಳ ಚೀರಾಟ ಕೇಳಿ ಹೊರ ಬಂದಿದ್ದಾರೆ. ಅದಾಗಲೇ ಆ್ಯಸಿಡ್ ಎರಚಿ ಪರಾರಿಯಾಗುತ್ತಿದ್ದ ಆರೋಪಿಯನ್ನು ವಿದ್ಯಾರ್ಥಿಗಳು ಬೆನ್ನಟ್ಟಿ ಹಿಡಿದು ಕಡಬ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.

ಆರೋಪಿಯ ಮನೆ ಹಾಗೂ ಸಂತ್ರಸ್ತ ವಿದ್ಯಾರ್ಥಿನಿಯ ತಾಯಿಯ ಮನೆ ಅಕ್ಕಪಕ್ಕದಲ್ಲಿದ್ದು, ದೂರದ ಸಂಬಂಧಿಯೂ ಆಗಿದ್ದಾನೆ ಎಂದು ತಿಳಿದುಬಂದಿದೆ. ಸಂತ್ರಸ್ತ ವಿದ್ಯಾರ್ಥಿನಿ ತನ್ನ ತಾಯಿಯ ಮನೆಗೆ ಹೋದ ಸಂದರ್ಭ ಈತನ ಪರಿಚಯವಾಗಿತ್ತು. ಇಬ್ಬರೂ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದ್ದು, ಪ್ರೀತಿ ನಿರಾಕರಿಸಿದ ಹಿನ್ನಲೆಯಲ್ಲಿ  ಆ್ಯಸಿಡ್ ದಾಳಿ ಮಾಡಿದ್ದಾನೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಪುತ್ತೂರು ಉಪವಿಭಾಗಾಧಿಕಾರಿ ಜುಬಿನ್ ಮಹಾಪಾತ್ರ, ಪುತ್ತೂರು ಡಿವೈಎಸ್ಪಿ ಅರುಣ್ ನಾಗೇಗೌಡ, ಕಡಬ ತಹಶೀಲ್ದಾರ್ ಪ್ರಭಾಕರ್ ಖಜೂರೆ, ಉಪ್ಪಿನಂಗಡಿ ವೃತ್ತ ನಿರೀಕ್ಷಕ ರವಿ ಬಿ.ಎಸ್, ಕಡಬ ಎಸ್ಐ ಅಭಿನಂದನ್ ಎಂ.ಎಸ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ‌.

ಘಟನೆಯಲ್ಲಿ ಓರ್ವ ವಿದ್ಯಾರ್ಥಿನಿಯ ಮುಖ ಹಾಗೂ ಶರೀರದ ಇತರ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದು, ಇಬ್ಬರು ವಿದ್ಯಾರ್ಥಿನಿಯರ ಕೈಗಳಿಗೆ ಗಾಯಗಳಾಗಿವೆ. ಮೂವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೇಲ್ನೋಟಕ್ಕೆ ಇದೊಂದು ಪ್ರೇಮ ನಿರಾಕರಣೆ ಎಂದು ಕಂಡು ಬರುತ್ತಿದೆ. ಆರೋಪಿಯು ಕಾಲೇಜಿನ ಸಮವಸ್ತ್ರ ಧರಿಸಿದ್ದ ಎಂಬ ಮಾಹಿತಿ ಇದೆ. ಈ ಬಗ್ಗೆ ವಿಚಾರಣೆ ನಡೆಯುತ್ತಿದೆ ಎಂದು ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಸಿ.ಬಿ. ರಿಷ್ಯಂತ್ ಅವರು ಮಾಹಿತಿ ನೀಡಿದ್ದಾರೆ.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News