ಮೂಡುಬಿದಿರೆ: ಟ್ರೆಕ್ಕಿಂಗ್ ವೇಳೆ ಬಿದ್ದು ವಿದ್ಯಾರ್ಥಿ ಮೃತ್ಯು
Update: 2025-09-17 14:06 IST
ಮನೋಜ್. ಎನ್
ಮೂಡುಬಿದಿರೆ: ಇಲ್ಲಿನ ಕೊಣಾಜೆಕಲ್ಲು ಗುಡ್ಡಕ್ಕೆ ಟ್ರಕ್ಕಿಂಗ್ ತೆರಳಿದ್ದ ವೇಳೆ ಆಕಸ್ಮಿಕವಾಗಿ ಜಾರಿ ಬಿದ್ದು ಸಿ.ಎ. ವಿದ್ಯಾರ್ಥಿಯೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬುಧವಾರ ಬೆಳಗ್ಗೆ ವರದಿಯಾಗಿದೆ.
ಪುತ್ತೂರು ತಾಲೂಕು ಇರ್ದೆ ಗ್ರಾಮದ ಬೆಟ್ಟಂಪಾಡಿ ನಡುವಡ್ಕ ನಿವಾಸಿ ಗೋಪಾಲಕೃಷ್ಣ ಭಟ್ ಎಂಬವರ ಪುತ್ರ ಮನೋಜ್ ಎನ್. (22) ಮೃತಪಟ್ಟವರು.
ಮಂಗಳೂರಿನ ಸಿ.ಎ. ಅಂತಿಮ ವರ್ಷದ ವಿದ್ಯಾರ್ಥಿಗಳಾದ ಕೇರಳ ಅಡೂರು ನಿವಾಸಿ ಕಾರ್ತಿಕ್(22) ಹಾಗೂ ಮನೋಜ್ ಕೊಣಾಜೆಕಲ್ಲು ಗುಡ್ಡಕ್ಕೆ ಟ್ರೆಕ್ಕಿಂಗ್ ಗೆ ತೆರಳಿದ್ದರು ಎನ್ನಲಾಗಿದೆ. ಈ ವೇಳೆ ಮನೋಜ್ ಆಕಸ್ಮಿಕವಾಗಿ ಗುಡ್ಡದಿಂದ ಜಾರಿಬಿದ್ದು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಮೂಡುಬಿದಿರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.