ಹನಫಿ ಖಾಝಿಯಾಗಿ ಶೇಖ್ ಮುತಹರ್ ಹುಸೇನ್ ಖಾಸ್ಮಿ ನಿಯುಕ್ತಿ
ಮಂಗಳೂರು, ಫೆ.6: ದ.ಕ.ಜಿಲ್ಲೆಯ ಹನಫಿ ಸಮುದಾಯದ ಧಾರ್ಮಿಕ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಇತ್ಯಾದಿ ಸಮಸ್ಯೆಗಳನ್ನು ಹನಫಿ ಕರ್ಮಶಾಸ್ತ್ರದ ಪ್ರಕಾರ ಇತ್ಯರ್ಥಪಡಿಸುವ ಸಲುವಾಗಿ ಮೌಲಾನಾ ಶೇಖ್ ಮುತಹರ್ ಹುಸೇನ್ ಖಾಸ್ಮಿ ಅವರನ್ನು ಹನಫಿ ಖಾಝಿಯಾಗಿ ನಿಯುಕ್ತಿಗೊಳಿಸಲಾಗಿದೆ ಎಂದು ಕುದ್ರೋಳಿಯ ಜಾಮಿಯಾ ಮಸೀದಿಯ ಅಧ್ಯಕ್ಷ ಅಲ್ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ದಿನನಿತ್ಯ ಎದುರಿಸುವ ಸಮಸ್ಯೆಗಳನ್ನು ಹನಫಿ ಕರ್ಮ ಸಿದ್ಧಾಂತದ ಅನ್ವಯ ಇತ್ಯರ್ಥಪಡಿಸಲು ಹನಫಿ ಆಲಿಮ್‌ರನ್ನು ನಿಯುಕ್ತಿಗೊಳಿಸಬೇಕು ಎಂಬುದು ಹನಫಿ ಸಮುದಾಯದ ದೀರ್ಘಕಾಲದ ಬೇಡಿಕೆಯಾಗಿತ್ತು. ಅದರಂತೆ 2022ರ ಫೆಬ್ರವರಿ 27ರಂದು ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿತ್ತು. ಬಳಿಕ ಬೆಂಗಳೂರಿನ ಅಮೀರ್ ಏ ಶರೀಯತ್ ಸಗೀರ್ ಅಹ್ಮದ್ ರಶಾದಿ ಅವರ ಶಿಫಾರಸ್ಸಿನಂತೆ ಹಾಫಿಝ್, ಆಲಿಂ, ಮುಫ್ತಿ, ಖಾಝಿ ಏ ಶರೀಯತ್‌ನ ಅಧಿಕೃತ ಸನದು ಹೊಂದಿರುವ ಮೌಲಾನಾ ಶೇಖ್ ಮುತಹರ್ ಹುಸೇನ್ ಖಾಸ್ಮಿ ಅವರನ್ನು 2023ರ ಡಿಸೆಂಬರ್ 1ರಿಂದ ಅನ್ವಯವಾಗುವಂತೆ ಖಾಝಿ ಏ ಶರಿಯತ್ ಆಗಿ ನಿಯುಕ್ತಿಗೊಳಿಸಲಾಗಿದೆ. ದ.ಕ.ಜಿಲ್ಲಾ ಖಾಝಿ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್‌ಹಝ್‌ಹರಿ ಅವರ ಹುದ್ದೆಯ ಮಾನ್ಯತೆಯನ್ನು ಕೂಡ ಯಥಾವತ್ತಾಗಿ ಅನುಮೋದಿಸುತ್ತೇವೆ ಎಂದು ಅಲ್ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್ ತಿಳಿಸಿದ್ದಾರೆ.