×
Ad

ನಾಲ್ಕು ಭಿನ್ನ ಕ್ಯಾನ್ಸರ್ ರೋಗಗಳಿಗೆ ತುತ್ತಾಗಿದ್ದ ಮಗುವಿಗೆ ಝುಲೇಖಾ ಯೆನೆಪೊಯ ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ

Update: 2024-02-09 16:09 IST

ಮಂಗಳೂರು, ಫೆ.9: ನಾಲ್ಕು ಭಿನ್ನ ತರಹದ ಕ್ಯಾನ್ಸರ್ ಗೆ ತುತ್ತಾಗಿದ್ದ ಹೆಣ್ಣು ಮಗುವಿಗೆ ಯೆನೆಪೊಯ ವೈದ್ಯಕೀಯ ಕಾಲೇಜಿನ ಝುಲೇಖಾ ಯೆನೆಪೊಯ ಇನ್ಸ್ಟಿಟ್ಯೂಟ್ ಆಫ್ ಆಂಕಾಲಾಜಿಯಲ್ಲಿ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದ್ದು, ಸದ್ಯ ಮಗು ಚೇತರಿಸಿಕೊಂಡಿದೆ ಎಂದು ಚಿಕಿತ್ಸಾ ತಂಡದ ನೇತೃತ್ವ ವಹಿಸಿದ್ದ ವೈದ್ಯ ಡಾ.ಜಲಾಲುದ್ದೀನ್ ಅಕ್ಬರ್ ತಿಳಿಸಿದ್ದಾರೆ.

ದೇರಳಕಟ್ಟೆಯ ಯೆನೆಪೊಯ ಆಸ್ಪತ್ರೆಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಇದು ಭಾರತದಲ್ಲೇ ಮೊಟ್ಟಮೊದಲು ಎನ್ನಬಹುದಾದ ಶಸ್ತ್ರಚಿಕಿತ್ಸೆ ಎನ್ನಬಹುದು. ನಮ್ಮ ವೈದ್ಯರ ತಂಡವು ರೋಗಿಯಾದ ಮಗುವಿಗೆ 10 ಗಂಟೆಗಳ ಸುದೀರ್ಘವಾದ ಶಸ್ತ್ರಚಿಕಿತ್ಸೆ ನಡೆಸಿ ಶ್ವಾಸಕೋಶದಲ್ಲಿದ್ದ 40ಕ್ಕೂ ಹೆಚ್ಚು ಕ್ಯಾನ್ಸರ್ ಗೆಡ್ಡೆಗಳನ್ನು ಯಶಸ್ವಿಯಾಗಿ ಹೊರತೆಗೆದಿದೆ. 9 ದಿನಗಳಲ್ಲಿ ಮಗು ಚೇತರಿಸಿಕೊಂಡಿದೆ ಎಂದು ಹೇಳಿದರು.

ಹೆಣ್ಣು ಮಗು ತನ್ನ ಜೀವನದ 9ನೇ ತಿಂಗಳಿನಿಂದ ದೇಹದ 4 ವಿವಿಧ ಭಾಗಗಳಾದ ಕಣ್ಣು, ತೊಡೆಯ ಮೂಳೆ, ಕರುಳು ಮತ್ತು ಶ್ವಾಸಕೋಶ ಕ್ಯಾನ್ಸರ್ ನಿಂದ ಬಳಲುತ್ತಿತ್ತು. ತನ್ನ 9ನೇ ತಿಂಗಳಿನಲ್ಲಿ ಮಧುರೈ ಅರವಿಂದ್ ಆಸ್ಪತ್ರೆ ಮತ್ತು ಹೈದರಾಬಾದ್ ದೃಷ್ಟಿ ಕೇಂದ್ರದಲ್ಲಿ ಕಣ್ಣಿನ ಅರ್ಬುದ ರೋಗಗಕ್ಕೆ ಚಿಕಿತ್ಸೆ ಪಡೆದಿತ್ತು. 2021ರಲ್ಲಿ ತೊಡೆ ಮೂಳೆಯ ಅರ್ಬುದ ರೋಗಗಕ್ಕೆ ಕೊಚ್ಚಿಯ ಲೇಕ್ ಶೋರ್ ಆಸ್ಪತ್ರೆ ಮತ್ತು ಎಸ್.ಟಿ. ಆಸ್ಪತ್ರೆ ತಿರುವನಂತಪುರದಲ್ಲಿ ಚಿಕಿತ್ಸೆ ಪಡೆದಿದೆ. 2022ರಲ್ಲಿ ಕೊಚ್ಚಿಯಲ್ಲಿ ಶ್ವಾಸಕೋಶದ (ಶಾಸಕೋಶಕ್ಕೆ ಹರಡುವಿಕೆಗೆ) ಚಿಕಿತ್ಸೆ ಹಾಗೂ 2023ರಲ್ಲಿ ತಿರುವನಂತಪುರದ ಸರಕಾರಿ ಕಾಲೇಜಿನಲ್ಲಿ ಕರುಳಿನ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆದು, ನಂತರ ಮೈತ್ರಾ ಆಸ್ಪತ್ರೆ ಕ್ಯಾಲಿಕಟ್ನಲ್ಲಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಈ ಸಮಯದಲ್ಲಿ ಮಗುವಿನ ಶ್ವಾಸಕೋಶದ ಕ್ಯಾನ್ಸರ್ ಮತ್ತೆ ಅಭಿವೃದ್ಧಿಗೊಂಡಿದ್ದು ಕಂಡುಬಂತು ಇದಕ್ಕೆ ಹೆಚ್ಚಿನ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ಅಲ್ಲಿನ ವೈದ್ಯರು ಸೂಚಿಸಿದ್ದಾರೆ. ಮಗುವಿನ ಪ್ರಸಕ್ತ ರೋಗಸ್ಥಿತಿಯು ಅಪರೂಪದ ಪ್ರಕರಣವಾದ ಕಾರಣ ಭಾರತದಾದ್ಯಂತ 250ಕ್ಕೂ ಹೆಚ್ಚು ಆಸ್ಪತ್ರೆಗಳನ್ನು ಒಳಗೊಂಡಿರುವ ರಾಷ್ಟ್ರೀಯ ಕ್ಯಾನ್ಸರ್ ಗ್ರಿಡ್ ನಲ್ಲಿ ಮುಂದಿನ ಚಿಕಿತ್ಸೆ ಕುರಿತು ಚರ್ಚಿ ನಡೆಸಿತು. ಈ ಸಂದರ್ಭ ಮಗುವಿಗೆ ಶಸ್ತ್ರಚಿಕಿತ್ಸೆಯ ಅಗತ್ಯತೆಯನ್ನು ನಿರ್ಧರಿಸಲಾಯಿತು. ಆದರೆ ಶಸ್ತ್ರಚಿಕಿತ್ಸೆ ಅತ್ಯಂತ ಸಂಕೀರ್ಣ ಮತ್ತು ಕಷ್ಟಕರವಾಗಿರುವುದರಿಂದ ಟಾಟಾ ಮೆಮೋರಿಯಲ್ ಆಸ್ಪತ್ರೆ ಅಥವಾ ಮಂಗಳೂರಿನ ಯೆನೆಪೊಯ ವೈದ್ಯಕೀಯ ಕಾಲೇಜನ್ನು ಸಂಪರ್ಕಿಸಲು ಮಗುವಿನ ಪೋಷಕರಿಗೆ ಸೂಚಿಸಲಾಗಿತ್ತು ಎಂದು ಡಾ.ಜಲಾಲುದ್ದೀನ್ ಅಕ್ಬರ್ ತಿಳಿಸಿದರು.

ಅಂತೆಯೇ ರೋಗಿಯನ್ನು ಪರಿಶೀಲಿಸಿ ಪ್ರಕರಣವನ್ನು ಝುಲೇಖಾ ಯೆನೆಪೊಯ ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿ ಟ್ಯೂಮರ್ ಬೋರ್ಡ್ ನಲ್ಲಿ ಚರ್ಚಿಸಲಾಯಿತು. ಹಾಗೂ ಆಸ್ಪತ್ರೆಯಲ್ಲಿ ಅತ್ಯಅಧುನಿಕ ಸೌಕರ್ಯಗಳ ಲಭ್ಯತೆಯಿರುವುದರಿಂದ ಶಸ್ತ್ರಚಿಕಿತ್ಸೆಯನ್ನು ಇಲ್ಲಿ ನಡೆಸಲು ನಿರ್ಧರಿಸಲಾಯಿತು. ಅದರಂತೆ 10 ಗಂಟೆಗಳ ದೀರ್ಘ ಶಸ್ತ್ರಚಿಕಿತ್ಸೆ ಯಿಂದ ಶ್ಯಾಸಕೋಶ ಹಾಗೂ ಎರಡು ಪಕ್ಕೆಲುಬುಗಳಿದ್ದ ಕ್ಯಾನ್ಸರ್ ನ ಎಲ್ಲಾ ಗಡ್ಡೆಗಳನ್ನು ಹೊರತೆಗೆಯಲಾಯಿತು. ದೇಶದಲ್ಲಿ ಶಸ್ತ್ರಚಿಕಿತ್ಸೆಯ ಮೂಲಕ ಅತೀ ಹೆಚ್ಚು ಕ್ಯಾನ್ಸರ್ ಗೆಡ್ಡೆಗಳನ್ನು ದೇಹದಿಂದ ಬೇರ್ಪಡಿಸುವಲ್ಲಿ ನಮ್ಮ ವೈದ್ಯರ ತಂಡ ಯಶಸ್ವಿಯಾಗಿದೆ ಎಂದವರು ಹೇಳಿದರು.

ಡಾ.ವಿಜಯಕುಮಾರ್ ಎಂ. ಮಾರ್ಗದರ್ಶನದಲ್ಲಿ ಡಾ.ಜಲಾಲುದ್ದೀನ್ ಅಕ್ಬರ್ ನೇತೃತ್ವದಲ್ಲಿ, ಡಾ.ರೋಹನ್ ಶೆಟ್ಟಿ, ಡಾ.ಎಚ್.ಟಿ.ಅಮರ್ ರಾವ್, ಡಾ.ನೂರ್ ಮುಹಮ್ಮದ್ ಅವರನ್ನೊಳಗೊಂಡ ಶಸ್ತ್ರಚಿಕಿತ್ಸಾ ತಂಡ ಹಾಗೂ ಅರಿವಳಿಕೆ ತಜ್ಞರಾದ ಡಾ.ತಿಪ್ಪೇಸ್ವಾಮಿ ನೇತೃತ್ವದಲ್ಲಿ ಡಾ.ಸಂದೇಶ್( ಪೀಡಿಯಾಟ್ರಿಕ್ ವಿಭಾಗ) ಡಾ. ಡಾ.ಆದರ್ಶ್, ಡಾ. ವಿನೀತ್ ಮಗುವಿನ ಶಸ್ತ್ರಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ ನಂತರದ ನಿರ್ವಹಣೆ ಮಾಡಿದೆ ಎಂದವರು ತಿಳಿಸಿದ್ದಾರೆ.

ಯೆನೆಪೊಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಹಬೀಬ್ ರಹ್ಮಾನ್ ಎ.ಎ. ಮಾತನಾಡಿ, ಯೆನೆಪೊಯ ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಝುಲೇಖಾ ಯೆನೆಪೊಯ ಆಂಕಾಲಜಿ ಸಂಸ್ಥೆಯು ಈ ರೀತಿಯ ಅಪರೂಪದ ಶಸ್ತ್ರಚಿಕಿತ್ಸೆ ಪ್ರಕರಣಗಳನ್ನು ಆಧುನಿಕ ಸೌಕರ್ಯಗಳ ಮತ್ತು ರೋಗನಿರ್ಣಯ ಸೇವೆಗಳು ಮತ್ತು ಸೌಲಭ್ಯಗಳ ಸಹಾಯದಿಂದ ನಿರ್ವಹಿಸುತ್ತಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಡಾ.ಎಚ್.ಟಿ.ಅಮರ್ ರಾವ್, ಡಾ.ನೂರ್ ಮುಹಮ್ಮದ್ ,ಡಾ.ತಿಪ್ಪೇಸ್ವಾಮಿ, ಡಾ.ಸಂದೇಶ್, ಡಾ. ಡಾ.ಆದರ್ಶ್, ಡಾ.ವಿನೀತ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News