×
Ad

ಕುಡುಪು ಗುಂಪು ಹತ್ಯೆ ಪ್ರಕರಣ: ನಾಲ್ಕು ಮಂದಿ ಆರೋಪಿಗಳ ಜಾಮೀನು ಅರ್ಜಿ ತಿರಸ್ಕೃತ

Update: 2025-06-20 19:35 IST

(ಅಶ್ರಫ್)

ಮಂಗಳೂರು: ನಗರ ಹೊರವಲಯದ ಕುಡುಪುವಿನಲ್ಲಿ ಎ.27ರಂದು ನಡೆದ ವಯನಾಡಿನ ಅಶ್ರಫ್ ಗುಂಪು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿ ಆರೋಪಿಗಳ ಜಾಮೀನು ಅರ್ಜಿಯು ಶುಕ್ರವಾರ ತಿರಸ್ಕೃತಗೊಂಡಿದೆ.

ಆರೋಪಿಗಳಾದ ವಿವಿಯನ್, ಶ್ರೀದತ್ತ, ಧನುಷ್, ಕಿಶೋರ್ ಕುಮಾರ್ ಎಂಬವರು ಅರ್ಜಿ ಸಲ್ಲಿಸಿದ್ದರು. ವಿಚಾರಣೆಗೆ ಕೈಗೆತ್ತಿಕೊಂಡ ಮಂಗಳೂರಿನ 2ನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜಗದೀಶ್ ವಿ.ಎನ್. ಅರ್ಜಿ ತಿರಸ್ಕೃತಗೊಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 21 ಮಂದಿಯನ್ನು ಬಂಧಿಸಿದ್ದರು. ಆ ಪೈಕಿ ಈವರೆಗೆ 6 ಮಂದಿಗೆ ಜಾಮೀನು ಲಭಿಸಿದ್ದರೆ, ಇಂದಿನ ನಾಲ್ಕು ಮಂದಿ ಸಹಿತ 10 ಮಂದಿಯ ಜಾಮೀನು ಅರ್ಜಿ ತಿರಸ್ಕೃತಗೊಂಡಿವೆ. ಆರೋಪಿಗಳ ಪೈಕಿ 4 ಮಂದಿ ಇನ್ನೂ ಜಾಮೀನು ಅರ್ಜಿ ಸಲ್ಲಿಸಿಲ್ಲ. ಒಬ್ಬ ಸಲ್ಲಿಸಿದ್ದ ಅರ್ಜಿಯು ಇನ್ನಷ್ಟೆ ವಿಚಾರಣೆಗೆ ಬರಬೇಕಿದೆ.

ಈಗಾಗಲೆ ನೀರುಮಾರ್ಗದ ಸಾಯಿದೀಪ್, ಪದವು ಗ್ರಾಮದ ಜ್ಯೋತಿನಗರದ ಅನಿಲ್ ಕುಮಾರ್, ಕುಲಶೇಖರದ ಯತಿರಾಜ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಮಂಗಳೂರಿನ 2ನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತಿರಸ್ಕೃರಿಸಿತ್ತು.

ಆರೋಪಿಗಳಾದ ರಾಹುಲ್ ಮತ್ತು ಕೆ.ಸುಶಾಂತ್, ಸಂದೀಪ್, ದೀಕ್ಷಿತ್, ಸಚಿನ್, ಆದರ್ಶ್ ಪಂಡಿತ್ ಜಾಮೀನು ಪಡೆದು ಜೈಲಿನಿಂದ ಹೊರಗೆ ಬಂದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಆರೋಪದ ಮೇರೆಗೆ ಇನ್‌ಸ್ಪೆಕ್ಟರ್ ಸಹಿತ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News