×
Ad

ʼಬೆಂಗಳೂರು- ಕಣ್ಣೂರುʼ ರೈಲು ವಿಸ್ತರಣೆಗೆ ವಿರೋಧ: ದ.ಕ. ಉಸ್ತುವಾರಿ ಸಚಿವರಿಂದ ಕೇಂದ್ರ ರೈಲ್ವೇ ಸಚಿವರಿಗೆ ಪತ್ರ

Update: 2024-02-05 18:32 IST

ದಿನೇಶ್ ಗುಂಡೂರಾವ್

ಮಂಗಳೂರು: ಬೆಂಗಳೂರು -ಮಂಗಳೂರು ವಯಾ ಕಣ್ಣೂರು ನಂ.16511-16512 ರೈಲನ್ನು ರೈಲ್ವೇ ಇಲಾಖೆ ಕೋಯಿಕ್ಕೋಡ್‌ವರೆಗೆ ವಿಸ್ತರಿಸಿರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದಿದ್ದು, ಹೊಸ ಆದೇಶವನ್ನು ಹಿಂಪಡೆಯಬೇಕು ಎಂದು ಮನವಿ ಮಾಡಿದ್ದಾರೆ.

ಕಣ್ಣೂರು- ಬೆಂಗಳೂರು ರೈಲು ಬಹುಬೇಡಿಕೆಯ ರೈಲಾಗಿದ್ದು, ಯಾವಾಗಲೂ ಭರ್ತಿಯಾಗಿ ಸಾಗುತ್ತದೆ. ಈ ರೈಲನ್ನು ಒಂದೂವರೆ ಗಂಟೆ ದೂರದ ಇನ್ನೊಂದು ಗಮ್ಯಸ್ಥಾನಕ್ಕೆ ವಿಸ್ತರಿಸಿರುವುದರಿಂದ ಈಗ ಇರುವ ಸಾಮರ್ಥ್ಯದ ಆಸನಗಳಿಗೆ ಇನ್ನೊಂದಷ್ಟು ಹೆಚ್ಚಿನ ಪ್ರಯಾಣಿಕರ ಬೇಡಿಕೆ ಬರುತ್ತದೆ. ಈಗಾಗಲೇ ಭರ್ತಿಯಾಗಿ ಸಾಗುತ್ತಿರುವ ರೈಲನ್ನು ವಿಸ್ತರಣೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ.

ಕಣ್ಣೂರು ಮತ್ತು ಕೋಯಿಕ್ಕೋಡ್ ನಡುವೆ ತಲಶ್ಶೇರಿ, ವಡಕರ ಮತ್ತು ಕ್ವೈಲಂಡಿ ನಿಲ್ದಾಣಗಳಲ್ಲಿ ರೈಲು ನಿಲುಗಡೆ ಯಾಗಲಿದೆ. ಇದರಿಂದ ಕಾಯ್ದಿರಿಸಲಾದ ಸೀಟ್‌ಗಳ ಸಂಖ್ಯೆ ಕಡಿಮೆಯಾಗಲಿದೆ. ಬೆಂಗಳೂರಿಗೆ ತೆರಳುವ ರೈಲಿನಲ್ಲಿ ಕಾಯ್ದಿರಿಸದ ಸೀಟ್‌ಗಳು ಕಣ್ಣೂರು ಮತ್ತು ಕೋಯಿಕ್ಕೋಡ್ ನಡುವಿನ ಪ್ರಯಾಣಿಕರಿಂದ ಭರ್ತಿಯಾಗಲಿದ್ದು, ದ.ಕ. ಜಿಲ್ಲೆಯ ಪ್ರಯಾಣಿಕರಿಗೆ ಸೀಟ್ ಕೊರತೆಯಾಗಲಿದೆ.

ಕೋಯಿಕ್ಕೋಡ್‌ಗೆ ಈಗಾಗಲೇ ಉತ್ತಮ ರೈಲ್ವೇ ಸಂಕರ್ಪವಿದೆ. 16526/527 ರೈಲು ಕೋಯಿಕ್ಕೋಡ್ ಮತ್ತು ಬೆಂಗಳೂರು ನಡುವೆ ಪ್ರತಿ ದಿನ ಸಂಚರಿಸುತ್ತಿದೆ. ನಂ.16566/657 ಕೋಯಿಕ್ಕೋಡ್-ಬೆಂಗಳೂರು ನಡುವೆ ರೈಲು ವಯಾ ಶೋರ್ನೂರು, ಪಾಲಕ್ಕಾಡ್, ಕೊಯಮತ್ತೂರು ಮೂಲಕ ಸಂಚರಿಸುತ್ತಿದೆ. ಈ ರೈಲುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಇದರಲ್ಲಿ ಸಂಚರಿಸಲು ಸಾಧ್ಯವಾಗದವರು ಕಣ್ಣೂರು ಮೂಲಕ ಸಂಚರಿಸುವ ರೈಲನ್ನು ಅವಲಂಬಿಸಲಿದ್ದಾರೆ.

ರಾಜ್ಯದ ರೈಲುಗಳ ವಿಚಾರಕ್ಕೆ ಬಂದಾಗ ರೈಲ್ವೇ ಸಚಿವಾಲಯ ಪ್ರತಿ ಬಾರಿ ಇತರ ರಾಜ್ಯಗಳ ಹಿತಾಸಕ್ತಿಗೆ ಮಣೆ ಹಾಕುತ್ತಿದೆ. ಇದೇ ವೇಳೆ ಕಾಸರಗೋಡು-ತಿರುವನಂತಪುರ ನಡುವಿನ ವಂದೇ ಭಾರತ್‌ ಎಕ್ಸ್‌ಪ್ರೆಸ್ ರೈಲನ್ನು ಕಾಸರಗೋಡಿನಿಂದ - ಮಂಗಳೂರಿಗೆ ವಿಸ್ತರಿಸುವ ಕುರಿತು ಮನವಿಯನ್ನು ತಿರಸ್ಕರಿಸಿದೆ. ನಂ.16511-16512 ರೈಲಿನ ವಿಚಾರವಾಗಿಯೂ ಕರಾವಳಿ ಕರ್ನಾಟಕದ ಜನರ ಬೇಡಿಕೆಯನ್ನು ನಿರಾಕರಿಸಿ, ಮಲಬಾರ್ ಭಾಗದ ಜನರ ಬೇಡಿಕೆಗೆ ಮಣೆ ಹಾಕಿದೆ.

ಇಂತಹ ಸನ್ನಿವೇಶದಲ್ಲಿ ಕರಾವಳಿ ಜನರ ಬೇಡಿಕೆಯನ್ನು ಪರಿಗಣಿಸಿ ರೈಲನ್ನು ಈ ಹಿಂದಿನಂತೆ ಬೆಂಗಳೂರು-ಕಣ್ಣೂರು (ವಯಾ ಮಂಗಳೂರು) ನಡುವೆ ಮಾತ್ರ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ದಿನೇಶ್ ಗುಂಡೂರಾವ್ ಅವರು ಪತ್ರದ ಮೂಲಕ ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News