ದಾವಣಗೆರೆ | ಕೋರ್ಟ್ ಆವರಣದಲ್ಲೇ ಪತ್ನಿಗೆ ಚಾಕುವಿನಿಂದ ಇರಿದ ಪತಿ
ಸಾಂದರ್ಭಿಕ ಚಿತ್ರ | PC : freepik
ದಾವಣಗೆರೆ : ಕೌಟುಂಬಿಕ ಕಲಹದಿಂದ ನ್ಯಾಯಾಲಯದ ಮೆಟ್ಟಿಲು ಏರಿದ್ದ ಪತಿಯೊಬ್ಬ ನ್ಯಾಯಾಲಯದ ಆವರಣದಲ್ಲೇ ಪತ್ನಿಗೆ ಚಾಕುವಿನಿಂದ ಇರಿದು ಕೊಲೆ ಯತ್ನ ನಡೆಸಿ ತಾನು ಕೈಗೆ ಚಾಕುವಿನಿಂದ ಇರಿದ ಘಟನೆ ಶನಿವಾರ ನಡೆದಿರುವುದಾಗಿ ವರದಿಯಾಗಿದೆ.
ಪವಿತ್ರ (30) ಚಾಕುವಿನಿಂದ ಇರಿತಕ್ಕೊಳಗಾದ ಪತ್ನಿ, ಪ್ರವೀಣ್ (35) ಚಾಕುವಿನಿಂದ ಇರಿದುಕೊಂಡ ಪತಿ. ಗಾಯಗೊಂಡಿರುವ ಇಬ್ಬರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದಾವಣಗೆರೆ ನಗರದ ಜಾಲಿನಗರದ ನಿವಾಸಿ ಪ್ರವೀಣ್, ಬೆಂಗಳೂರಿನ ನಿವಾಸಿ ಪವಿತ್ರಾ ಇಬ್ಬರು ಪರಸ್ಪರ ಪ್ರೀತಿಸಿ ವಿವಾಹ ಆಗಿದ್ದರು. ಪತ್ನಿಯ ನಡೆತೆಯ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದ ಪತಿ ಮತ್ತು ಪತ್ನಿಯ ನಡುವೆ ಕೌಟುಂಬಿಕ ಕಲಹದಿಂದ ಪ್ರಕರಣ ದಾಖಲಾಗಿತ್ತು. ಕೆಲ ದಿನಗಳ ಹಿಂದೆ ಪತ್ನಿ ತನ್ನ ಪತಿಯನ್ನು ತೊರೆದು ಹೋಗಿದ್ದಳು.
ಶನಿವಾರ ವಿಚಾರಣೆಗಾಗಿ ನಗರದ ಹೈಸ್ಕೂಲ್ ಮೈದಾನದ ಬಳಿ ಇರುವ ಕೌಟುಂಬಿಕ ನ್ಯಾಯಾಲಯಕ್ಕೆ ಆಗಮಿಸಿದ್ದರು. ಈ ವೇಳೆ ಕೋರ್ಟ್ ಆವರಣದಲ್ಲಿಯಲ್ಲಿಯೇ ಪತ್ನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದಾನೆ. ನಂತರ ತಾನು ಕೈಗೆ ಚಾಕುವಿಂದ ಇರಿದುಕೊಂಡಿದ್ದಾನೆ ಎಂದು ಹೇಳಲಾಗಿದೆ.
ಈ ಕುರಿತು ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.