×
Ad

ದಾವಣಗೆರೆ | ಸೂಕ್ತ ವ್ಯವಸ್ಥೆ ನೀಡದೆ 38 ಕುಟುಂಬಗಳ ತೆರವು; ನಿವಾಸಿಗಳಿಂದ ಜಿಲ್ಲಾಡಳಿತ ವಿರುದ್ಧ ಆಕ್ರೋಶ

Update: 2025-10-11 23:20 IST

ದಾವಣಗೆರೆ, ಅ.11: ಗೋಮಾಳ ಜಾಗದಲ್ಲಿ ವಾಸಿಸುತ್ತಿದ್ದ 38 ಕುಟುಂಬಗಳನ್ನು ಸೂಕ್ತ ವ್ಯವಸ್ಥೆ ಕಲ್ಪಿಸದೆ ಅಲ್ಲಿಂದ ಎತ್ತಂಗಡಿ ಮಾಡಿದ ಘಟನೆ ಶನಿವಾರ ನಡೆದಿದೆ.

ಹೊರವಲಯದ ರವೀಂದ್ರನಾಥ ಬಡಾವಣೆಯ ಗೋಮಾಳ ಜಾಗದಲ್ಲಿ ಕಳೆದ 15 ವರ್ಷಗಳಿಂದ ಈ ಕುಟುಂಬಗಳು ವಾಸ ಮಾಡುತ್ತಿದ್ದರು. ಆದರೆ ನಗರಪಾಲಿಕೆ, ಜಿಲ್ಲಾಡಳಿತ ಹಾಗೂ ಸ್ಥಳೀಯ ಆಡಳಿತದ ಪರವಾಗಿ ತಹಶೀಲ್ದಾರ್‌ ಅವರು ನೂರಾರು ಪೊಲೀಸರು ಮತ್ತು ಜೆಸಿಬಿ ಯಂತ್ರಗಳೊಂದಿಗೆ ತೆರವು ಕಾರ್ಯಾಚರಣೆ ನಡೆಸಿದರು.

ಇದರಿಂದ ಏನೂ ಮಾಡಲಾರದ ಸ್ಥಿತಿಯಲ್ಲಿದ್ದ ಕುಟುಂಬಗಳು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದವು. ಬೆಳಗ್ಗೆ 6 ಗಂಟೆಗೆ ಜೆಸಿಬಿಗಳು, ಟ್ರಾಕ್ಟರ್ ಹಾಗೂ ನೂರಾರು ಪೊಲೀಸರೊಂದಿಗೆ ಆಗಮಿಸಿದ ಅಧಿಕಾರಿಗಳು ಸಾಮಾನು, ಸರಂಜಾಮುಗಳನ್ನು ಹೊರಗೆ ಹಾಕಿ ಹೆಂಚು, ಚಾವಣಿ ಶೀಟುಗಳು ಹಾಗೂ ಗೋಡೆಗಳನ್ನು ಕೆಡವಿ ತೆರವುಗೊಳಿಸಿದರು.

ಇಲ್ಲಿನ ನಿವಾಸಿಗಳು ಮಾತನಾಡಿ, ‘ಕೋರ್ಟ್ ಅ.15ರೊಳಗೆ ಸೂಕ್ತ ವಸತಿ ಸೌಕರ್ಯ ಕಲ್ಪಿಸಿ ತೆರವುಗೊಳಿಸಲು ಸಮಯ ನೀಡಿದ್ದರೂ, ಅಧಿಕಾರಿಗಳು ಅದನ್ನು ಪಾಲಿಸದೆ ಬೆಳಗ್ಗೆ 6 ಗಂಟೆಗೆ ಬಂದು ಮನೆಯಲ್ಲಿದ್ದ ಮಕ್ಕಳು, ಮಹಿಳೆಯರು, ವಯೋವೃದ್ಧರನ್ನು ಹೊರಗೆ ಹಾಕಿ ದೌರ್ಜನ್ಯ ಮಾಡಿದ್ದಾರೆ. ಸಮಯಾವಕಾಶ ಕೇಳಿದರೂ ಮಹಿಳೆ, ವೃದ್ಧರೆನ್ನದೇ ಎಳೆದು, ತಳ್ಳಾಡಿ, ಹೊರಹಾಕಿದ್ದಾರೆ ’ ಎಂದು ಅಳಲು ತೋಡಿಕೊಂಡರು.

ಮನೆಯ ಚಾವಣಿ ಶೀಟುಗಳು, ಹೆಂಚು ಹಾಗೂ ಇತರ ಮರಮುಟ್ಟು ಸಾಮಾಗ್ರಿಗಳನ್ನು ತೆಗೆದುಕೊಂಡು ಹೋಗಲು ಅವಕಾಶ ನೀಡದೆ, ಸಂಪೂರ್ಣವಾಗಿ ಎಲ್ಲವನ್ನೂ ನಾಶಗೊಳಿಸಿ ಬೀದಿಗೆ ತಳ್ಳಲಾಗಿದೆ ಎಂದು ನಿವಾಸಿಗಳು ದೂರಿದರು.

ಶುಕ್ರವಾರ ಮಹಾನಗರ ಪಾಲಿಕೆ ಆಯುಕ್ತರು ಮತ್ತು ಜಿಲ್ಲಾಧಿಕಾರಿಗೆ ಮನವಿ ನೀಡಿ ಸಮಯ ಕೇಳಿದ್ದರೂ, ಅಧಿಕಾರಿಗಳು ನೀಡಿದ ಭರವಸೆ ಪಾಲಿಸದೆ ಅಮಾನವೀಯವಾಗಿ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಇದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಹೋರಾಟಗಾರರಾದ ಸಿಪಿಐ ಮುಖಂಡ ಚಂದ್ರು ಆವರಗೆರೆ, ನೆರಳು ಸಂಘಟನೆಯ ಜಬೀನಾ ಖಾನಂ, ವಕೀಲ ರಾಘವೇಂದ್ರ, ಮಾಜಿ ಕಾರ್ಪೊರೇಟರ್ ಪಾಮೇನಳ್ಳಿ ನಾಗರಾಜ್ ಹಾಗೂ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳೀಯ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ, ಶಾಸಕರು, ಜಿಲ್ಲಾ ಉಸ್ತುವಾರಿ ಮಂತ್ರಿ ಸೇರಿದಂತೆ ಯಾರೊಬ್ಬರೂ ನೊಂದವರ ಪರವಾಗಿ ಬಂದಿಲ್ಲ. ‘ಚುನಾವಣೆ ಬಂದಾಗ ಮಾತ್ರ ನಮ್ಮ ನೆನಪಾಗುತ್ತದೆ. ಅಧಿಕಾರಿಗಳು ಕೂಲಿ ಕಾರ್ಮಿಕರು, ಬಡ ಮತ್ತು ಸಾಮಾನ್ಯ ಜನರ ಮೇಲೆ ದೌರ್ಜನ್ಯ ನಡೆಸಿದ್ದಾರೆ’ ಎಂದು ನಿವಾಸಿಗಳು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News