ದಾವಣಗೆರೆ: ತೆಪ್ಪ ಮಗುಚಿ ಇಬ್ಬರು ಯುವಕರು ನೀರುಪಾಲು
Update: 2025-10-06 22:04 IST
ಸಾಂದರ್ಭಿಕ ಚಿತ್ರ
ಹೊನ್ನಾಳಿ: ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ತುಂಗಭದ್ರಾ ನದಿಯಲ್ಲಿರುವ ತಮಿಳು ಕ್ವಾರಿಯಲ್ಲಿ ತೆಪ್ಪ ಮಗುಚಿ ಇಬ್ಬರು ಯುವಕರು ನೀರು ಪಾಲಾಗಿದ್ದು, ಇನ್ನೋರ್ವ ಯುವಕ ಪ್ರಾಣಾಪಾಯದಿಂದ ಪಾರಾದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.
ಪಟ್ಟಣದ ತಿಪ್ಪೇಶ್ (23), ಮುಕ್ತಿಯಾರ್ (28) ನೀರುಪಾಲಾಗಿರುವ ಯುವಕರು. ಪ್ರಾಣಾಪಾಯದಿಂದ ಪಾರದ ಯುವಕ ಶಾಹಿಲ್ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಸುದ್ದಿ ತಿಳಿದ ಕೂಡಲೇ ಪೊಲೀಸರು, ಅಗ್ನಿ ಶಾಮಕ ದಳದ ಸಿಬ್ಬಂದಿ, ಹರಿಹರದ ನೀರು ಮುಳುಗು ತಜ್ಞರು ಧಾವಿಸಿ ನದಿಯಲ್ಲಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಈ ಇಬ್ಬರು ಯುವಕರು ಬೆಳಿಗ್ಗೆ ತೆಪ್ಪದ ಮೂಲಕ ನದಿಗೆ ಇಳಿದಿದ್ದಾರೆ.
ನದಿಯಲ್ಲಿ ತೆಪ್ಪದಲ್ಲಿ ಹುಟ್ಟು ಹಾಕಿಕೊಂಡು ಬರುತ್ತಿರುವಾಗ ಚೂಪಾದ ಕಲ್ಲಿಗೆ ತೆಪ್ಪ ಬಡಿದು ಸಂಪೂರ್ಣ ಮುಳುಗಿ ಈ ಘಟನೆ ಸಂಭವಿಸಿದೆ ಎಂದು ನದಿ ತೀರದಲ್ಲಿದ್ದ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.