×
Ad

ಬಿಜೆಪಿ ಹೊಂದಾಣಿಕೆ ರಾಜಕಾರಣದಿಂದ ರಾಜ್ಯದ ಜನರಿಗೆ ಮೋಸ ಆಗುತ್ತಿದೆ : ಯತ್ನಾಳ್‌

Update: 2025-05-17 12:42 IST

ಬಸನಗೌಡ ಪಾಟೀಲ್ ಯತ್ನಾಳ್

ದಾವಣಗೆರೆ : ಬಿಜೆಪಿ ಹೊಂದಾಣಿಕೆ ರಾಜಕಾರಣದಿಂದ ರಾಜ್ಯದ ಜನರಿಗೆ ಮೋಸ ಆಗುತ್ತಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಶುಕ್ರವಾರ ದಾವಣಗೆರೆಯಲಿ ಮಾತನಾಡಿದ ಅವರು, ಒಂದು ಪಕ್ಷದ ರಾಜ್ಯಾಧ್ಯಕ್ಷ ಬರುತ್ತಾರೆ ಎಂದರೆ ಕನಿಷ್ಠ ಸಾವಿರಾರು ಜನರಾದರೂ ಸೇರಬೇಕು. ಆದರೆ, ಬಿಜೆಪಿ ನಡೆಸಿದ ಈ ಜನಾಕ್ರೋಶ ಯಾತ್ರೆಯಲ್ಲಿ 800-1000 ಜನ ಅಷ್ಟೇ ಸೇರಿದ್ದರು. ನಾನು ಯಾವುದಾದರೊಂದು ಕಾರ್ಯಕ್ರಮಕ್ಕೆ ತೆರಳಿದರೆ ಏನಿಲ್ಲವೆಂದರೂ 20 ಸಾವಿರ ಜನ ಸೇರುತ್ತಾರೆ ಎಂದು  ಹೇಳಿದರು.

ನಾನು ಬಿಜೆಪಿ ಹೈಕಮಾಂಡ್‌ಗೆ ಯಾವುದೇ ಪತ್ರ ಕೂಡ ಬರೆದಿಲ್ಲ, ಕ್ಷಮೆಯೂ ಕೇಳಿಲ್ಲ. ನನಗೆ ಅದರ ಅವಶ್ಯಕತೆ ಕೂಡ ಇಲ್ಲ ಎಂದು ಸ್ಪಷ್ಟನೆ ನೀಡಿದರು.

ಡಿ.ಕೆ.ಶಿವಕುಮಾರ್‌ ಸಿಎಂ, ವಿಜಯೇಂದ್ರ ಡಿಸಿಎಂ ಎಂದು ದೆಹಲಿಯಲ್ಲಿ ಒಪ್ಪಂದ ಆಗಿತ್ತು. ನನಗೆ ಗೊತ್ತಿಲ್ವಾ ಅದು?. ವಿಜಯೇಂದ್ರ ಮತ್ತು ಡಿ.ಕೆ.ಶಿವಕುಮಾರ್ ಈ ಇಬ್ಬರು ಸಿಡಿ ಫ್ಯಾಕ್ಟರಿಗಳು ಎಂದ ಅವರು, ಯತ್ನಾಳ್‌ ಕಾಂಗ್ರೆಸ್​ ಸೇರುತ್ತಾರೆಂದು ಹೇಳುತ್ತಿದ್ದಾರೆ. ಅದು ಸುಳ್ಳು. ನಾನು ಸತ್ತರೂ, ನನ್ನ ಹೆಣ ಕೂಡ ಕಾಂಗ್ರೆಸ್‌ಗೆ ಹೋಗಲ್ಲ ಎಂದು ವಾಗ್ದಾಳಿ ನಡೆಸಿದರು.

ಸಮಯ ಬಂದಾಗ ಹೊಸ ಪಕ್ಷ ಕಟ್ಟಲು ನಾಂದಿ ಹಾಡುವೆ. ಹೊಸ ಪಕ್ಷ ಕಟ್ಟಲು ಹೋಗಿ ಕೆಲ ನಾಯಕರು ವಿಫಲರಾದರೆಂದು ಹೇಳುತ್ತಿದ್ದಾರೆ. ಆದರೆ, ದೇವೇಗೌಡರು, ಕುಮಾರಸ್ವಾಮಿ ರೀತಿ ಸಕ್ಸಸ್ ಆಗಿ 50 - 60 ಸೀಟ್ ಗೆದ್ದರೆ ನಾನೇ ಸಿಎಂ ಆಗಬಹುದು. ಆಗ ಹೈಕಮಾಂಡ್ ನನ್ನ ಮನೆಗೆ ಬಂದು ನೀವೇ ಸಿಎಂ ಆಗಿ ಅಂತ ಹೇಳಬಹುದು. ರಾಜ್ಯ ಬಿಜೆಪಿಗೆ ನಾನು ಅಪರೇಷನ್ ಮಾಡಲ್ಲ. ಅದಕ್ಕೆ ಅದುವೇ ಡೆಲಿವರಿ ಆಗಲಿದೆ, ಹೊಸ ಕೂಸು ಹುಟ್ಟಲಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News