ಅಣ್ಣಪ್ಪ ಮುದ್ರಾಡಿ
ಸುರತ್ಕಲ್ : ನಿವೃತ್ತ ಶಿಕ್ಷಕ ಶ್ರೀ ಅಣ್ಣಪ್ಪ ಮುದ್ರಾಡಿ ಇವರು ಸುರತ್ಕಲ್ ಸಮೀಪದ ಕೃಷ್ಣಾಪುರದ ಸ್ವಗೃಹದಲ್ಲಿ ವಯೋ ಸಹಜ ಅಸ್ವಸ್ಥತೆಯಿಂದ ಜೂನ್ 4ರಂದು ನಿಧನರಾದರು.
ಇವರಿಗೆ 90 ವರ್ಷ ವಯಸ್ಸಾಗಿತ್ತು. 38 ವರ್ಷಗಳ ಕಾಲ ಹೆಬ್ರಿ ಹಾಗೂ ಕನ್ಯಾನ ಪ್ರಾಥಮಿಕ ಶಾಲೆಗಳಲ್ಲಿ ಅಧ್ಯಾಪಕರಾಗಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ ಇವರು, ಗಣಿತ, ವಿಜ್ಞಾನ ಹಾಗೂ ಬಹುಭಾಷಾ ಸಂಪನ್ಮೂಲ ವ್ಯಕ್ತಿಯಾಗಿ ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಶಿಕ್ಷಕರಿಗೂ ಪ್ರೇರಕ ಶಕ್ತಿಯಾದವರು. ಸಮರ್ಪಣಾ ಮನೋಭಾವದ ಗುರುವಾಗಿ, ವೈಜ್ಞಾನಿಕ ಮನೋಭಾವದ ಪ್ರತಿಪಾದಕರಾಗಿ, ಸರಳ ಸಜ್ಜನಿಕೆಯ ಮಾನವತಾ ವಾದಿಯಾಗಿ ಶಿಕ್ಷಕ- ವಿದ್ಯಾರ್ಥಿ ಬಾಂಧವ್ಯಕ್ಕೆ ಹೊಸ ಭಾಷ್ಯ ಬರೆದ ಅಣ್ಣಪ್ಪ ಮಾಸ್ಟರ್ ಅಪಾರ ಅಭಿಮಾನಿ ಶಿಷ್ಯ ವೃಂದವನ್ನು ಹೊಂದಿದವರು.
ಇವರು ರಾಜ್ಯಮಟ್ಟದ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಕಾರ್ಯದರ್ಶಿಯಾಗಿ ಶಿಕ್ಷಕರ ಕಲ್ಯಾಣಕ್ಕೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡವರು. ತನ್ನ ಜೀವಿತದುದ್ದಕ್ಕೂ ಗ್ರಾಮೀಣ ಮಕ್ಕಳ ಶಿಕ್ಷಣ ಹಾಗೂ ಸಮಾಜದಲ್ಲಿ ಪುಸ್ತಕ ಪ್ರೀತಿಯನ್ನು ಹಂಚುವ ಕಾಯಕದಲ್ಲಿ ಸದ್ದಿಲ್ಲದೆ ಕ್ರಾಂತಿ ಮಾಡಿದವರು.
ಇವರು ಪತ್ನಿ , ಪುತ್ರ ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.