ನವಲಗುಂದ ಕ್ಷೇತ್ರವನ್ನು ಮಾದರಿ ಕ್ಷೇತ್ರ ಮಾಡಲು ಶ್ರಮ : ಮುಖ್ಯಮಂತ್ರಿ ಸಿದ್ದರಾಮಯ್ಯ
ʼಬೆಣ್ಣೆಹಳ್ಳ ಪ್ರವಾಹ ನಿಯಂತ್ರಣ ಕಾಮಗಾರಿ ಶಂಕು ಸ್ಥಾಪನೆʼ
ಹುಬ್ಬಳ್ಳಿ : ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಲಾಗಿದೆ. ಅಣ್ಣಿಗೇರಿಗೆ ಯುಜಿಡಿ ಮಾಡುವ ಕುರಿತು ಬಜೆಟ್ ನಲ್ಲಿ ಚರ್ಚಿಸಲಾಗುವುದು. ಈ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಶ್ರಮಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇಂದು ಶಿರಗುಪ್ಪಿ ಗ್ರಾಮದಲ್ಲಿ ಜಲ ಸಂಪನ್ಮೂಲ ಇಲಾಖೆ ಹಾಗೂ ಕರ್ನಾಟಕ ನೀರಾವರಿ ನಿಗಮ ನಿಯಮಿತ ಸಹಯೋಗದಲ್ಲಿ ಬೆಣ್ಣೆಹಳ್ಳ ಪ್ರವಾಹ ನಿಯಂತ್ರಣ ಕಾಮಗಾರಿ ಶಂಕು ಸ್ಥಾಪನೆ ಮತ್ತು ನವಲಗುಂದ ವಿಧಾನಸಭಾ ಕ್ಷೇತ್ರದ ವಿವಿಧ ಕಾಮಗಾರಿಗಳ ಉದ್ಘಾಟನಾ, ಭೂಮಿ ಪೂಜೆ ಸಮಾರಂಭವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಬೆಣ್ಣೆ ಹಳ್ಳ ಪ್ರವಾಹ ನಿಯಂತ್ರಣ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಲಾಗಿದೆ. ಅಲ್ಲದೇ ವಿವಿಧ ಕಾಮಗಾರಿಗಳ ಉದ್ಘಾಟನೆ ಮಾಡಲಾಗಿದೆ. ಶಾಸಕ ಎನ್.ಎಚ್.ಕೋನರಡ್ಡಿ ನಿಷ್ಠಾವಂತ ಪ್ರಾಮಾಣಿಕ ಶಾಸಕರಾಗಿದ್ದಾರೆ. 200 ಕೋಟಿ ರೂ. ವೆಚ್ಚದಲ್ಲಿ ಬೆಣ್ಣೆ ಹಳ್ಳ ಯೋಜನೆಗೆ ಚಾಲನೆ ನೀಡಲಾಗಿರುತ್ತದೆ. ಈ ಯೋಜನೆ ಪ್ರಾರಂಭಕ್ಕೆ ಶಾಸಕ ಎನ್.ಎಚ್. ಕೋನರಡ್ಡಿ ಅವರ ಒತ್ತಾಸೆ ಕಾರಣವಾಗಿದೆ. ಈ ಹಿಂದೆ 1610 ಕೋಟಿ ರೂ. ಅಂದಾಜು ವೆಚ್ಚದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಆದರೆ ಕೇಂದ್ರ ಸರ್ಕಾರ ವಿಳಂಬ ಮಾಡಿದ ನಂತರ 200 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಯನ್ನು ಪ್ರಾರಂಭಿಸಲಾಗುತ್ತಿದೆ. ಈ ಹಳ್ಳದ ಪ್ರವಾಹದಿಂದ ಸುಮಾರು 37 ಹಳ್ಳಿಗಳು ಹಾಗೂ 20 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಪ್ರವಾಹ ಉಂಟಾಗುತ್ತಿತ್ತು. 150 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಗ್ಯಾರಂಟಿ ಯೋಜನೆಯಿಂದ ರಾಜ್ಯದಲ್ಲಿ ಅಭಿವೃದ್ಧಿ ನಡೆಯುತ್ತಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಹಲವಾರು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. 2018 ರಲ್ಲಿ ಸುಪ್ರೀಂ ಕೋರ್ಟ್ ಕಳಸಾ ಬಂಡೂರಿ ಯೋಜನೆಗೆ ಒಪ್ಪಿಗೆ ಸೂಚಿಸಿದೆ. ಈಗಾಗಲೇ ಕಳಸಾ ಬಂಡೂರಿ ಯೋಜನೆಗೆ ಟೆಂಡರ್ ಕರೆದು ಏಜೆನ್ಸಿಗೆ ಒಪ್ಪಿಸಲಾಗಿದೆ. ಕೇಂದ್ರ ಸರ್ಕಾರ ಅನುಮತಿ ಕೊಟ್ಟರೆ ನಾಳೆನೇ ಕಾಮಗಾರಿ ಆರಂಭಿಸಲಾಗುವುದು. ಕೇಂದ್ರ ಸರ್ಕಾರದಿಂದ ಅನುಮತಿ ದೊರೆಯಬೇಕಿದೆ. ಕೇಂದ್ರ ವನ್ಯಜೀವಿ ಮಂಡಳಿಯು ಅನುಮತಿ ಕೂಡಲೇ ನೀಡಬೇಕಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ಮೂರನೇ ಹಂತದ ಕೃಷ್ಣಾ ಮೇಲ್ದಂಡೆ ಯೋಜನೆ ಕೇಂದ್ರ ಸರ್ಕಾರದಿಂದ ನಿಂತು ಹೋಗಿದೆ. ಕೇಂದ್ರ ಸರ್ಕಾರ ಕೂಡಲೇ ಗೆಜೆಟ್ ನೋಟಿಫಿಕೇಶನ್ ಮಾಡಬೇಕು. ಮೇಕೆದಾಟು ಯೋಜನೆಗೆ ಸಹ ಕೇಂದ್ರ ಸರ್ಕಾರ ಅನುಮತಿ ನೀಡಬೇಕು. ಈಗಾಗಲೇ ತಮಿಳುನಾಡು ಸಲ್ಲಿಸಿದ್ದ ಅರ್ಜಿ ವಜಾ ಆಗಿದೆ. 65 ಟಿಎಂಸಿ ಕುಡಿಯುವ ನೀರಿನ ಯೋಜನೆ ಇದಾಗಿದೆ. ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ. ಕೊಡುತ್ತೇವೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಆದರೆ ಯಾವುದೇ ಹಣ ಇದುವರೆಗೂ ನೀಡಿಲ್ಲ. ರಾಷ್ಟ್ರೀಯ ಯೋಜನೆಯಾಗಿ ಮಾಡುತ್ತೇವೆ ಎಂದು ಬಣ್ಣಿಸಿದ್ದರು. 2005 ರಲ್ಲಿ ಮನರೇಗಾ ಯೋಜನೆ ಜಾರಿ ಮಾಡಲಾಗಿತ್ತು. ಆದರೆ ಕೇಂದ್ರ ಸರ್ಕಾರ ಕಳೆದ ಡಿಸೆಂಬರ್ ನಲ್ಲಿ ಈ ಯೋಜನೆಯನ್ನು ರದ್ದು ಮಾಡಿದೆ. ಯುವಕರಿಗೆ, ಮಹಿಳೆಯರಿಗೆ, ಕೆಲಸವಿಲ್ಲದವರಿಗೆ ಕೆಲಸ ಕೊಡುವ ಯೋಜನೆಯನ್ನು ಕೈ ಬಿಡಲಾಗಿದೆ ಎಂದು ಅವರು ತಿಳಿಸಿದರು.