ಧಾರವಾಡ ಹೈಕೋರ್ಟ್ ಪೀಠಕ್ಕೆ ಹುಸಿ ಬಾಂಬ್ ಬೆದರಿಕೆ: ಪರಿಶೀಲನೆ ಬಳಿಕ ಕಲಾಪ ಮುಂದುವರಿಕೆ
ಧಾರವಾಡ: ಧಾರವಾಡ ಹೈಕೋರ್ಟ್ ಪೀಠಕ್ಕೆ ಇಮೇಲ್ ಮೂಲಕ ಇಂದು ಮುಂಜಾನೆ ಹುಸಿ ಬಾಂಬ್ ಬೆದರಿಕೆ ಸಂದೇಶ ಬಂದಿರುವ ಹಿನ್ನೆಲೆಯಲ್ಲಿ ಕೋರ್ಟ್ ಆವರಣದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಕೋರ್ಟ್ ಕಟ್ಟಡವನ್ನು ಹಾಗೂ ಆವರಣದ ಸುತ್ತಲು ಸಂಪೂರ್ಣವಾಗಿ ಪರಿಶೀಲಿಸಿದ ನಂತರ ಪೊಲೀಸರಿಗೆ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಮತ್ತೆ ಕೋರ್ಟ್ ಕಲಾಪಕ್ಕೆ ಆರಂಭವಾಗಿದೆ.
ಧಾರವಾಡ ಹೈಕೋರ್ಟ್ ಪೀಠಕ್ಕೆ ಇಂದು ಮುಂಜಾನೆ ಬಂದಿರುವ ಇ ಮೇಲ್ ಮಧ್ಯಾಹ್ನ 1-15ಕ್ಕೆ ಬಾಂಬ್ ಸ್ಫೋಟಿಸುವುದಾಗಿ ಹೇಳಲಾಗಿದ್ದು, ಸ್ಥಳಕ್ಕೆ ಗರಗ ಪೊಲೀಸ್ ಠಾಣೆ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ, ಪರಿಶೀಲನೆ ನಡೆಸಿದರು.
ಕೋರ್ಟ್ ಆವರಣದಲ್ಲಿದ್ದ ಕಕ್ಷಿಗಾರರು, ವಕೀಲರನ್ನು ಹೈಕೋರ್ಟ್ನಿಂದ ಹೊರಗಡೆ ಕಳುಹಿಸಿ ತಪಾಸಣೆ ನಡೆಸಿದರು. ಪೊಲೀಸರ ತನಿಖೆಯ ಬಳಿಕ ಇದೀಗ ಅದು ಸುಳ್ಳು ಬಾಂಬ್ ಬೆದರಿಕೆ ಎನ್ನುವುದು ಗೊತ್ತಾಗಿದೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಸಹ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಎಂದಿನಂತೆ ಹೈಕೋರ್ಟ್ ಕಲಾಪ ಪುನರ್ ಆರಂಭವಾಗಿದೆ.
''ಕೋರ್ಟ್ ಆವರಣದೊಳಗೆ ಬರುವ ಪ್ರತಿಯೊಬ್ಬ ವ್ಯಕ್ತಿ ಹಾಗೂ ವಾಹನಗಳನ್ನು ತಪಾಸಣೆ ಮಾಡಿಯೇ ಒಳಗೆ ಬಿಡಬೇಕು ಎಂದು ಸಾಕಷ್ಟು ಸಲ ನಾವು ಮನವಿ ಮಾಡಿದ್ದೇವೆ. ಆದರೆ ಸರಕಾರ ಇನ್ನು ಎಚ್ಚೆತ್ತುಕೊಂಡಿಲ್ಲ. ಕಳೆದ ತಿಂಗಳು ಈ ರೀತಿ ಬಾಂಬ್ ಬೆದರಿಕೆ ಇ-ಮೇಲ್ ಬಂದಿತ್ತು. ಹೈಕೋರ್ಟ್ ಪೀಠಕ್ಕೆ ಭದ್ರತೆ ಹೆಚ್ಚಿಸಬೇಕು. ಬೆದರಿಕೆ ಇ-ಮೇಲ್ ಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಹೈಕೋರ್ಟ್ ಪೀಠಗಳಿಗೂ ಭದ್ರತೆಯನ್ನು ಒದಗಿಸಬೇಕು. ಇಲ್ಲವಾದಲ್ಲಿ ನಾವು ಹೋರಾಟ ಪ್ರಾರಂಭಿಸುತ್ತೇವೆ" ಎಂದು ವಕೀಲರ ಸಂಘದ ಅಧ್ಯಕ್ಷ ಬಿ.ಡಿ. ಹಿರೇಮಠ ಹೇಳಿದ್ದಾರೆ.