×
Ad

ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹ: ಧಾರವಾಡದಲ್ಲಿ ಬೀದಿಗಿಳಿದ ಸಾವಿರಾರು ವಿದ್ಯಾರ್ಥಿಗಳು

Update: 2026-02-24 12:38 IST

ಧಾರವಾಡ: ಸರಕಾರಿ ಹುದ್ದೆಗಳ ನೇಮಕಾತಿಯಲ್ಲಿ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘಟನೆ (ಅಕ್ಸಾ) ಮತ್ತು ಬಿಜೆಪಿ ವತಿಯಿಂದ ಮಂಗಳವಾರ ಧಾರವಾಡದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಧಾರವಾಡದ ಜಯನಗರದ ವೃತ್ತದಲ್ಲಿ ಮುಂಜಾನೆಯೇ ಜಮಾವಣೆಗೊಂಡ ಸಾವಿರಾರು ಉದ್ಯೋಗಾಕಾಂಕ್ಷಿಗಳು ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರ ಭಾವಚಿತ್ರವನ್ನು ದಹಿಸಿ ಆಕ್ರೋಶ ಹೊರಹಾಕಿದರು.

ಬಿಜೆಪಿ ಬ್ಯಾನರ್ ಹರಿದು ಆಕ್ರೋಶ: ಇಂದು ನಡೆದ ವಿದ್ಯಾರ್ಥಿಗಳ ಪ್ರತಿಭಟನೆಗೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ವಿದ್ಯಾರ್ಥಿಗಳ ಪರವಾಗಿ ಪ್ರತಿಭಟನಾ ರ್ಯಾಲಿ ನಡೆಸಿದ್ದರು. ಆದರೆ, ಬಿಜೆಪಿ ನಾಯಕರು ಬರುವ ಮೊದಲೇ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗ ಆಕಾಂಕ್ಷಿಗಳು ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿದ್ದು, ಧಾರವಾಡದ ಜಯನಗರ ವೃತ್ತದಲ್ಲಿ ಅಳವಡಿಸಿದ್ದ ಬಿಜೆಪಿ ಬ್ಯಾನರ್‌ಗಳನ್ನು ಉದ್ಯೋಗ ಆಕಾಂಕ್ಷಿಗಳು ಹರಿದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿಯೂ ನಡೆಯಿತು.

ವಿದ್ಯಾರ್ಥಿ ಮುಖಂಡರ ವಶಕ್ಕೆ: ಪ್ರತಿಭಟನೆ ಸಂದರ್ಭದಲ್ಲಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘಟನೆ ಅಧ್ಯಕ್ಷ ಕಾಂತಕುಮಾರ್ ಅವರನ್ನು ಪೊಲೀಸರು ವಶಕ್ಕೆ ಪಡೆದು, ಬೇರೆ ಕಡೆ ಸ್ಥಳಾಂತರಿಸಲು ಆಟೊದಲ್ಲಿ ಕರೆದೊಯ್ದರು. ಈ ವೇಳೆ ಪ್ರತಿಭಟನಾಕಾರರು ಆಟೋಗೆ ಮುತ್ತಿಗೆ ಹಾಕಿದ ಘಟನೆಯೂ ನಡೆಯಿತು.

ಈ ಸಂದರ್ಭದಲ್ಲಿ ವಿಧಾನ ಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಉಪ ನಾಯಕ ಅರವಿಂದ ಬೆಲ್ಲದ್, ವಿಧಾನ ಪರಿಷತ್ ಸದಸ್ಯರಾದ ಎಸ್.ವಿ.ಸಂಕನೂರ, ಛಲವಾದಿ ನಾರಾಯಣಸ್ವಾಮಿ, ಅಕ್ಸಾ ಅಧ್ಯಕ್ಷ ಕಾಂತ ಕುಮಾರ್ ಹಾಗೂ ಸಾವಿರಾರು ಮಂದಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿದ್ಯಾರ್ಥಿಗಳ ಬೇಡಿಕೆ:

ರಾಜ್ಯದಲ್ಲಿ ಐದು ವರ್ಷದಿಂದ ಲಕ್ಷಾಂತರ ಸರಕಾರಿ ಹುದ್ದೆಗಳು ಖಾಲಿ ಇದ್ದು, ಕೂಡಲೇ ವಿವಿಧ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಉದ್ಯೋಗ ಆಕಾಂಕ್ಷಿಗಳ ವಯೋಮಿತಿ ಹೆಚ್ಚಳ ಮಾಡಬೇಕೆಂದು ವಿದ್ಯಾರ್ಥಿಗಳು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

ಬಿಗಿ ಪೊಲೀಸ್ ಬಂದೋಬಸ್ತ್

ನಿರೀಕ್ಷೆಗೂ ಮೀರಿ ಉದ್ಯೋಗಾಕಾಂಕ್ಷಿಗಳು ಜಮಾವಣೆಗೊಂಡಿದ್ದರಿಂದ ಪ್ರತಿಭಟನೆಯುದ್ದಕ್ಕೂ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಸ್ವತಃ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು. ಅಲ್ಲದೆ, ಶ್ರೀನಗರ ವೃತ್ತ ಭಾಗದಲ್ಲಿ ಹೆಚ್ಚುವರಿ ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿತ್ತು.

ರಾಜ್ಯದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ತರಬೇತಿ ಪಡೆದು ಕೆಲಸಕ್ಕಾಗಿ ಅಲೆದಾಡುತ್ತಿದ್ದಾರೆ. ಬಡವರ ಮಕ್ಕಳೂ ನೇಮಕಾತಿಗಾಗಿ ಕಾಯುತ್ತಿದ್ದು, ರಾಜ್ಯದಲ್ಲಿ ೨.೮೫ ಲಕ್ಷ ಖಾಲಿ ಹುದ್ದೆಗಳು ಇವೆ. ಸರಕಾರಿ ಹುದ್ದೆಗಳನ್ನು ನೇಮಕ ಮಾಡಿಲು ಸರಕಾರದಲ್ಲಿ ದುಡ್ಡಿಲ್ಲ. ಇವರಿಗೆ ವೇತನ ನೀಡಲೂ ಇವರ ಹತ್ತಿರ ದುಡ್ಡಿಲ್ಲ. ಇದರಿಂದ ನೇಮಕಾತಿ ಮಾಡುತ್ತಿಲ್ಲ.

ಆರ್.ಅಶೋಕ್, ವಿರೋಧ ಪಕ್ಷದ ನಾಯಕ

ವಿದ್ಯಾರ್ಥಿ ಸಂಘಟನೆ ಹೋರಾಟ ತೀವ್ರ ಸ್ವರೂಪ ಪಡೆದಿದ್ದು, ರಾಜ್ಯ ಸರಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು. ಬಡವರ ಮಕ್ಕಳು ಉದ್ಯೋಗದ ನಿರೀಕ್ಷೆಯಲ್ಲಿದ್ದಾರೆ. ಸರಕಾರ ಶೀಘ್ರವೇ ಸರಕಾರಿ ಹುದ್ದೆಗಳನ್ನು ತುಂಬಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟಗಳು ಇನ್ನೂ ತೀವ್ರವಾಗುತ್ತೆ.

ಅರವಿಂದ ಬೆಲ್ಲದ್, ವಿರೋಧ ಪಕ್ಷದ ಉಪ ನಾಯಕ

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News