ರೈತರ ಕೃಷಿ ಚಟುವಟಿಕೆಗಳಿಗಾಗಿ ಪ್ರತಿದಿನ 7 ಗಂಟೆ ವಿದ್ಯುತ್ ಪೂರೈಸಿ : ಸಂತೋಷ್ ಲಾಡ್
ಧಾರವಾಡ : ಬೇಸಿಗೆ ಆರಂಭವಾಗುತ್ತಿರುವುದರಿಂದ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ತೊಂದರೆ ಆಗದಂತೆ ಹೆಸ್ಕಾಂ ಸಂಸ್ಥೆಯವರು ಕ್ರಮ ವಹಿಸಬೇಕು. ಸರಕಾರದ ನಿಯಮದಂತೆ ಕೃಷಿ ಪಂಪ್‍ಸೆಟ್‍ಗಳಿಗೆ ಪ್ರತಿದಿನ 7 ಗಂಟೆಗಳ ಕಾಲ ನಿರಂತರವಾಗಿ ವಿದ್ಯುತ್ ಪೂರೈಸಬೇಕು. ರೈತರಿಗೆ ಅನುಕೂಲವಾಗುವಂತೆ, ಆದಷ್ಟೂ ಹಗಲು ಅಥವಾ ಸಂಜೆ ಹೊತ್ತಿನಲ್ಲಿ ವಿದ್ಯುತ್ ಪೂರೈಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹೇಳಿದರು.
ಶುಕ್ರವಾರ ನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯ ನೂತನ ಸಭಾಂಗಣದಲ್ಲಿ ಹೆಸ್ಕಾಂ ಸಂಸ್ಥೆಯ ವಿವಿಧ ಕಾಮಗಾರಿಗಳ ಪ್ರಗತಿ ಹಾಗೂ ಬೇಸಿಗೆ ಅವಧಿಯ ವಿದ್ಯುತ್ ಪೂರೈಕೆ ಸಿದ್ದತೆ ಕುರಿತು ಹೆಸ್ಕಾಂ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ 67 ಕೃಷಿ ವಿದ್ಯುತ್ ಫೀಡರ್‍ಗಳಿವೆ. ಇದರಲ್ಲಿ 41 ಫೀಡರ್‍ಗಳಿಂದ ಬೆಳಗ್ಗೆ 7 ರಿಂದ ಸಂಜೆ 4 ಗಂಟೆಯೊಳಗೆ, 12 ಫೀಡರ್‍ಗಳಿಗೆ ಸಂಜೆ 6 ರಿಂದ ರಾತ್ರಿ 9 ಗಂಟೆ ಹಾಗೂ ರಾತ್ರಿ 10 ರಿಂದ ಮಧ್ಯರಾತ್ರಿ 1 ಗಂಟೆಯೊಳಗೆ ಮತ್ತು 8 ಫೀಡರ್‍ಗಳಿಂದ ಬೆಳಗ್ಗೆ 6 ರಿಂದ 10 ಗಂಟೆವರೆಗೆ ಮತ್ತು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ, ಹೀಗೆ ನಿಗದಿತ ಫೀಡರ್‍ಗಳಿಂದ ವಿವಿಧ ಅವಧಿಯಲ್ಲಿ ಒಟ್ಟು 7 ತಾಸು ಕೃಷಿ ಚಟುವಟಿಕೆಗಳಿಗಾಗಿ ವಿದ್ಯುತ್ ಪೂರೈಸಲಾಗುತ್ತಿದೆ ಎಂದು ಹೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಅವರು ಹೇಳಿದರು.
ಹಿಂಗಾರು ಗೋಧಿ, ಭತ್ತ, ಕಬ್ಬು ಬೆಳೆಗಳಿಗೆ ಹೆಚ್ಚು ನೀರಿನ ಅಗತ್ಯವಿದ್ದು, ರೈತರು ನೀರಾವರಿಗಾಗಿ ಕೊಳವೆ ಬಾವಿಗಳನ್ನು ಹೆಚ್ಚಾಗಿ ಅವಲಂಬಿಸಿದ್ದಾರೆ. ಕಲಘಟಗಿ, ಅಳ್ನಾವರ ಮತ್ತು ಜಿಲ್ಲೆಯ ಇತರ ಭಾಗಗಳಲ್ಲಿ ಸರಿಯಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ, ತಡ ರಾತ್ರಿ ವಿದ್ಯುತ್ ನೀಡುವುದರಿಂದ ನೀರು ಹಾಯಿಸಲು ತೊಂದರೆಯಾಗುತ್ತಿದೆ ಎಂದು ರೈತರು ಕರೆ ಮಾಡಿ, ಸಮಸ್ಯೆ ಹೇಳುತ್ತಿದ್ದಾರೆ ಎಂದು ಸಂತೋಷ್ ಲಾಡ್ ತಿಳಿಸಿದರು.
ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಪೂರೈಕೆಯನ್ನು ಪಾಳಿ ಆಧಾರದಲ್ಲಿ ಮಾಡಿದರೂ ಪರವಾಗಿಲ್ಲ, ಆದರೆ ತೀರಾ ಮಧ್ಯರಾತ್ರಿ ವಿದ್ಯುತ್ ಪೂರೈಸಿದರೆ, ರಾತ್ರಿ ಹೊತ್ತಲ್ಲಿ ರೈತರಿಗೆ ತೊಂದರೆ ಆಗುತ್ತದೆ. ಇದನ್ನು ಪರಿಶೀಲಿಸಿ ಕ್ರಮವಹಿಸಬೇಕು ಎಂದು ಅವರು ತಿಳಿಸಿದರು.
ಅತೀ ಹೆಚ್ಚು ಸಮಸ್ಯೆ ಉಂಟಾಗುತ್ತಿರುವ ತಬಕದಹೊನ್ನಳ್ಳಿ ವಿದ್ಯುತ್ ವಿತರಣಾ ಕೇಂದ್ರವನ್ನು ಉನ್ನತಿಕರಿಸುವ ಕಾರ್ಯ ಪ್ರಗತಿಯಲ್ಲಿದೆ. ಜಿಲ್ಲಾಧಿಕಾರಿಗಳು, ಹೆಸ್ಕಾಂ ಅಧಿಕಾರಿ, ಇಂಜನೀಯರ್‍ಗಳೊಂದಿಗೆ ತಬಕದಹೊನ್ನಳ್ಳಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ಭೇಟಿ ನೀಡಿ, ಕಾಮಗಾರಿ ಪ್ರಗತಿ ಪರಿಶೀಲಿಸಲು ಸಚಿವರು ಸೂಚಿಸಿದರು.
ನಿಗದಿ ಮತ್ತು ಅರಳಿಕಟ್ಟಿ ಕ್ರಾಸ್, ಬಮ್ಮಿಗಟ್ಟಿ ಸೇರಿ ಮೂರು ಗ್ರಾಮಗಳಿಗೆ ಹೊಸದಾಗಿ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪಿಸಲು ಸರಕಾರದಿಂದ ಈಗಾಗಲೇ ಕ್ರಮಕೈಗೊಳ್ಳಲಾಗಿದೆ. ಟೆಂಡರ್, ಗುತ್ತಿಗೆದಾರ ಸಮಸ್ಯೆಗಳಿಂದ ವಿಳಂಬವಾಗುತ್ತಿದೆ ಎಂದು ಹೇಳಿದ ಸಂತೋಷ್ ಲಾಡ್, ಕೆಪಿಟಿಸಿಎಲ್ ನೂತನ ವ್ಯವಸ್ಥಾಪಕ ನಿರ್ದೇಶಕ ರಾಮ್ ಪ್ರಸಾತ್ ಮನೋಹರ್ ಅವರಿಗೆ ದೂರವಾಣಿ ಕರೆ ಮಾಡಿ, ತಕ್ಷಣ ಸಮಸ್ಯೆ ಬಗೆಹರಿಸಲು ಸೂಚಿಸಿದರು.
ಜಿಲ್ಲಾಧಿಕಾರಿ ಸ್ನೇಹಲ್ ಆರ್. ಮಾತನಾಡಿ, ಬೇಡಿಕೆಗಿಂತ ಹೆಚ್ಚು ವಿದ್ಯುತ್ ಲಭ್ಯವಿದೆ. ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ವಿತರಣೆ ಬಗ್ಗೆ ಸರಿಯಾದ ಕ್ರಮ ವಹಿಸಬೇಕು. ಕಾಮಗಾರಿಗಳನ್ನು ತೀವ್ರಗೊಳಿಸಿ, ಬೇಗ ಮುಗಿಸಬೇಕು. ರೈತರು ಟಿಸಿ ಬಯಸಿದಲ್ಲಿ ಬೇಗನೆ ಪೂರೈಸಬೇಕು. ಅಗತ್ಯಗಳಿಗೆ ಅನುಗುಣವಾಗಿ ಟಿಸಿಗಳ ಹೆಚ್ಚು ದಾಸ್ತಾನು ಹೊಂದಬೇಕು ಎಂದು ತಿಳಿಸಿದರು.
ಹೆಸ್ಕಾಂ ಅಧ್ಯಕ್ಷ ಸೈಯದ್ ಅಝೀಮ್ ಪೀರ್ ಎಸ್.ಖಾದ್ರಿ, ಮಹಾನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ್ ಪಾಟೀಲ್, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ವೇದಿಕೆಯಲ್ಲಿ ಇದ್ದರು.