ದಾರಿ ತಪ್ಪಿ ಅಧಿಕಾರಕ್ಕೆ ಬಂದಿದ್ದ ಬಿಜೆಪಿ : ಕೆ.ಎಸ್.ಈಶ್ವರಪ್ಪ
ಹುಬ್ಬಳ್ಳಿ : ರಾಜ್ಯದಲ್ಲಿ ಬಿಜೆಪಿಗೆ ಪೂರ್ಣ ಬಹುಮತ ಎಂದೆಂದೂ ಬಂದಿಲ್ಲ. ಈ ಹಿಂದೆ ನಾವು ದಾರಿ ತಪ್ಪಿ ಅಧಿಕಾರಕ್ಕೆ ಬಂದಿದ್ದೇವೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ವಿರೋಧ ಪಕ್ಷ ಸತ್ತು ಹೋಗಿದೆ ಎಂದು ನಾನು ಮೊದಲೇ ಹೇಳಿದ್ದೇನೆ. ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಟ್ಟು ಬೇರೆಡೆ ಹೋಗಲ್ಲ. ಆದರೆ, ಕರ್ನಾಟಕದ ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ನಡೆಯುತ್ತಿದ್ದು, ಬಿಜೆಪಿಯಲ್ಲಿ ಶುದ್ದೀಕರಣ ಆಗಬೇಕು. ಮುಂದಿನ ದಿನಗಳಲ್ಲಿ ಶುದ್ದೀಕರಣ ಆಗುವ ವಿಶ್ವಾಸವಿದ್ದು, ಆ ಬಳಿಕ ಪಕ್ಷಕ್ಕೆ ಹೋಗುತ್ತೇನೆ ಎಂದರು.
ರಾಜ್ಯದಲ್ಲಿ ಒಂದೇ ಒಂದು ಅಭಿವೃದ್ಧಿ ಕೆಲಸವೂ ಆಗುತ್ತಿಲ್ಲ, ಶಾಸಕರಿಗೆ ಅನುದಾನ ಬರುತ್ತಿಲ್ಲ. ಅನುದಾನವನ್ನು ಕಾಂಗ್ರೆಸ್ ಶಾಸಕರು ಬಾಯಿ ಬಿಟ್ಟು ಕೇಳುವ ಸ್ಥಿತಿಯಲ್ಲಿ ಇಲ್ಲ. ಏನಾದರೂ ಕೇಳಿದರೆ ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ಕೈ ತಪ್ಪುತ್ತದೆ ಎನ್ನುವ ಭಯ. ಈ ಸರಕಾರದಲ್ಲಿ ಎಲ್ಲರಿಗೂ ಅಧಿಕಾರ ದಾಹ ಆರಂಭವಾಗಿದ್ದು, ಜನರ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲ ಎಂದು ಈಶ್ವರಪ್ಪ ಟೀಕಿಸಿದರು.