ಧಾರವಾಡ: ಎಸ್ಐಆರ್ ರದ್ದುಗೊಳಿಸಲು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಹೋರಾಟಗಾರರನ್ನು ಬಂಧಿಸಿರುವ ಕೇಂದ್ರ ಸರಕಾರದ, ಪೊಲೀಸರ ದಮನಕಾರಿ ನೀತಿಯನ್ನು ಖಂಡಿಸಿ ನಗರದ ವಿವೇಕಾನಂದ ವೃತ್ತದಲ್ಲಿ ಎಐಡಿಎಸ್ಒ, ಎಐಡಿವೈಒ, ಎಐಕೆಕೆಎಂಎಸ್ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು.

ಈ ಸಂದರ್ಭದಲ್ಲಿ ಎಐಡಿವೈಒ ಜಿಲ್ಲಾಧ್ಯಕ್ಷರಾದ ಭವಾನಿ ಶಂಕರ್ ಎಸ್. ಗೌಡ ಮಾತನಾಡಿ, 13 ಕೋಟಿಗೂ ಹೆಚ್ಚು ಮತದಾರರ ಮತದಾನದ ಹಕ್ಕನ್ನು ಕಸಿದುಕೊಳ್ಳುತ್ತಿರುವ ಎಸ್ಐಆರ್ ಪ್ರಕ್ರಿಯೆ ಅತ್ಯಂತ ಜನವಿರೋಧಿ ಹಾಗೂ ಅಪ್ರಜಾತಂತ್ರವಾಗಿದೆ. ಕಡು ಬಡವರು, ಕೂಲಿ ಕಾರ್ಮಿಕರು, ಕೃಷಿ ಕಾರ್ಮಿಕರು, ಆದಿವಾಸಿಗಳು ಮತದಾನದ ಹಕ್ಕನ್ನು ಕಳೆದುಕೊಳ್ಳುತ್ತಿದ್ದು, ಸರ್ಕಾರ ಈ ಕೂಡಲೇ ಎಸ್ಐಆರ್ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ಉಳಿದ ಇಬ್ಬರು ಚುನಾವಣಾ ಆಯುಕ್ತರ ಅಭಿಪ್ರಾಯಗಳನ್ನು ಕಡೆಗಣಿಸಿ, ಏಕಪಕ್ಷಿಯವಾಗಿ ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಈ ಪ್ರಕ್ರಿಯೆಯನ್ನು ನಡೆಸುತ್ತಿದ್ದು, ಅವರ ಅಪ್ರಜಾತಾಂತ್ರಿಕ ನಡೆಯನ್ನು ಒಪ್ಪಲು ಸಾಧ್ಯವಿಲ್ಲ. ಈ ಕೂಡಲೇ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಈ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ದೇಶವ್ಯಾಪಿ ವಿದ್ಯಾರ್ಥಿ-ಯುವಜನರು, ಜನಸಾಮಾನ್ಯರು ಬೀದಿಗಿಳಿದಿದ್ದು, ಜನಾಂದೋಲನವನ್ನು ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಫ್ಯಾಶಿಸ್ಟ್ ಸರಕಾರ ಪೊಲೀಸ್ ಹಾಗೂ ಮಿಲಿಟರಿ ಬಲದ ಮೂಲಕ ಹತ್ತಿಕ್ಕಲು ಹೊರಟಿದೆ. ಸಾವಿರಾರು ಹೋರಾಟಗಾರರನ್ನು, ವಿದ್ಯಾರ್ಥಿ, ಯುವಜನ, ಜನಪರ ಸಂಘಟನೆಗಳ ನಾಯಕರನ್ನು ಬಂಧಿಸಿದೆ. ಆದರೆ ಈ ಬಂಧನದ ಮೂಲಕ ಜನಗಳ ಆಕ್ರೋಶವನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದರು.

ಎಐಡಿಎಸ್ಒ ಜಿಲ್ಲಾಧ್ಯಕ್ಷರಾದ ಸಿಂಧೂ ಕೌದಿ ಮಾತನಾಡಿ, ರಾಜ್ಯದಲ್ಲಿಯೂ ನಿನ್ನೆ ಫ್ರೀಡಂ ಪಾರ್ಕ್ ನಲ್ಲಿ ನಡೆದ ಪ್ರತಿಭಟನೆಯನ್ನು ಕಾಂಗ್ರೆಸ್ ಸರಕಾರ ಪೊಲೀಸ್ ಬಲದ ಮೂಲಕ ಹತ್ತಿಕ್ಕಲಾಗುತ್ತಿದೆ. ವಿದ್ಯಾರ್ಥಿಗಳ ಯುವಜನರ ಹೋರಾಟ ಇನ್ನಷ್ಟು ತೀವ್ರಗೊಳ್ಳಲಿದ್ದು ಸರಕಾರ ಕೂಡಲೇ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.

ಎಐಕೆಕೆಎಂಎಸ್ ಸಂಘಟನೆಯ ದೀಪಾ ಧಾರವಾಡ ಮಾತನಾಡಿ, ಭಗತ್ ಸಿಂಗ್, ನೇತಾಜಿ ಹುಟ್ಟಿ ಬೆಳೆದ ನಾಡಿನಲ್ಲಿ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ. ದೇಶದ ಜನರು ಎಸ್ಐಆರ್ ಪ್ರಕ್ರಿಯೆ ರದ್ದೂಗೊಳಿಸಲು ಹಾಗೂ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಬೀದಿಗಿಳಿದಿದ್ದು ಬೇಡಿಕೆಗಳು ಈಡೇರುವವರೆಗೂ ಹೋರಾಟವನ್ನು ಇನ್ನಷ್ಟು ತೀವ್ರ ಗೊಳಿಸಬೇಕು ಆ ದಿಕ್ಕಿನಲ್ಲಿ ಎಲ್ಲರೂ ಒಂದಾಗಬೇಕೆಂದು ಹೇಳಿದರು.

ಪ್ರತಿಭಟನೆಯಲ್ಲಿ ಸಾದಿಕ್ ರವೂಫ್ ಖಾನ್, ಉಮರ್ ಲಂಗೋಟಿ, ಶಾಂತೇಶ್ ನಂದಿಕೊಲ್ಮಠ, ಸಿದ್ದಲಿಂಗ ಚಿಪ್ಪಲಕಟ್ಟಿ, ಸೈಮುದ್ದಿನ್ ಮಗಳಾನಿ ಮುಂತಾದವರು ಭಾಗವಹಿಸಿದ್ದರು.

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor