ಎಸ್‌ಐಆರ್ ರದ್ದತಿಗೆ ಆಗ್ರಹಿಸಿ ಧಾರವಾಡದಲ್ಲಿ ಧರಣಿ
ಸರ್ವಾಧಿಕಾರದ ವಿರುದ್ಧ ನಿರಂತರ ಹೋರಾಟ ಅಗತ್ಯ : ಪ್ರೊ.ಜಿ.ಎನ್.ದೇವಿ
ಧಾರವಾಡ : ದಿಲ್ಲಿಯಲ್ಲಿ ಪ್ರತಿಭಟನೆ ನಡೆಸಲು ಮುಂದಾದವರನ್ನು ತಡೆಯುವ ಉದ್ದೇಶದಿಂದ ರೈಲು ಸಂಚಾರಕ್ಕೆ ಅಡ್ಡಿಪಡಿಸಲಾಗಿದೆ, ದಿಲ್ಲಿಗೆ ಸಂಪರ್ಕಿಸುವ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಆ ಮೂಲಕ ಪ್ರಜಾಪ್ರಭುತ್ವದ ಹಕ್ಕುಗಳಿಗಾಗಿ ಹೋರಾಡುವವರ ವಿರುದ್ಧ ವಿವಿಧ ನಿರ್ಬಂಧಗಳನ್ನು ಹೇರಲಾಗುತ್ತಿದೆ ಎಂದು ಭಾಷಾ ವಿಜ್ಞಾನಿ ಪ್ರೊ.ಜಿ.ಎನ್. ದೇವಿ ಆರೋಪಿಸಿದ್ದಾರೆ.
ನಗರದಲ್ಲಿ ಶನಿವಾರ ಜನಪರ ಸಂಘಟನೆಗಳ ನೇತೃತ್ವದಲ್ಲಿ ನಡೆದ ಎಸ್‌ಐಆರ್ ರದ್ದತಿ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ನಡೆದ ಧರಣಿಯಲ್ಲಿ ಅವರು ಮಾತನಾಡಿದರು.
ದಿಲ್ಲಿಯಲ್ಲಿ ಮೆಟ್ರೋ ನಿಲ್ದಾಣಗಳನ್ನೂ ಬಂದ್ ಮಾಡಲಾಗಿದೆ. ಕಳೆದ ಹತ್ತು ವರ್ಷಗಳಿಂದ ದೇಶದಲ್ಲಿ ತುರ್ತು ಪರಿಸ್ಥಿತಿಯಂತಹ ವಾತಾವರಣ ನಿರ್ಮಾಣವಾಗಿದೆ. ಸಂಸ್ಕೃತದ ‘ವಿನಾಶಕಾಲೇ ವಿಪರೀತ ಬುದ್ಧಿ’ ಎಂಬ ಗಾದೆಯನ್ನು ಉಲ್ಲೇಖಿಸಿದ ಅವರು, ಕೇಂದ್ರ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಸರಕಾರದ ಪತನದ ಕಾಲ ಸನ್ನಿಹಿತವಾಗಿದೆ ಎಂದು ಹೇಳಿದರು.
ಇದು ಯಾವುದೇ ಸರಕಾರವನ್ನು ಬೀಳಿಸುವ ಅಥವಾ ಉಳಿಸುವ ಹೋರಾಟವಲ್ಲ. ಚುನಾವಣೆಯಲ್ಲಿ ಗೆಲುವು ಅಥವಾ ಸೋಲಿನ ಪ್ರಶ್ನೆಯೂ ಅಲ್ಲ. ದೇಶದ ಭವಿಷ್ಯ ಮತ್ತು ಮುಂದಿನ ಪೀಳಿಗೆಯ ಹಿತಕ್ಕಾಗಿ ನಡೆಯುತ್ತಿರುವ ಹೋರಾಟವಾಗಿದೆ ಎಂದು ಅವರು ಪ್ರತಿಪಾದಿಸಿದರು.
ಮಹಾತ್ಮಾ ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜನರು ಒಗ್ಗಟ್ಟಿನಿಂದ ಭಾಗವಹಿಸಿದಂತೆ, ಪ್ರಸಕ್ತ ಹೋರಾಟದಲ್ಲಿಯೂ ಎಲ್ಲರೂ ಕೈಜೋಡಿಸಬೇಕು. ಹೋರಾಟಕ್ಕೆ ಎಷ್ಟು ದಿನ, ವಾರ ಅಥವಾ ತಿಂಗಳುಗಳು ಬೇಕಾದರೂ ನಿರಂತರವಾಗಿ ಮುಂದುವರಿಯಲು ಸಿದ್ಧರಿದ್ದೇವೆ. ದೇಶ, ನೆಲ ಮತ್ತು ಜನರ ಹಿತ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು ರೂಪಿಸಿಕೊಟ್ಟ ಸಂವಿಧಾನದ ರಕ್ಷಣೆಗಾಗಿ ಎಲ್ಲರೂ ಸರ್ವಸ್ವವನ್ನೂ ತ್ಯಾಗ ಮಾಡಲು ಸಿದ್ಧರಾಗಬೇಕು. ದೇಶದಲ್ಲಿ ಸರ್ವಾಧಿಕಾರದ ಪ್ರವೃತ್ತಿಗೆ ಅವಕಾಶ ನೀಡಬಾರದು ಎಂದು ಅವರು ಕರೆ ನೀಡಿದರು.
ನಿವೃತ್ತ ಪ್ರಾಧ್ಯಾಪಕ ಕೆ.ಆರ್. ದುರ್ಗಾದಾಸ್ ಮಾತನಾಡಿ, ಧರ್ಮದ ಹೆಸರಿನಲ್ಲಿ ಜನರಲ್ಲಿ ಭಯದ ವಾತಾವರಣ ಸೃಷ್ಟಿಸುವುದು, ಸಮಾಜದಲ್ಲಿ ವಿಭಜನೆ ಮೂಡಿಸುವುದು ಹಾಗೂ ರಾಜಕೀಯ ಲಾಭಕ್ಕಾಗಿ ಧಾರ್ಮಿಕ ಭಾವನೆಗಳನ್ನು ಬಳಸಿಕೊಳ್ಳುವ ಪ್ರವೃತ್ತಿ ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದರು.
ರಾಜಕೀಯವಾಗಿ ನಿರೀಕ್ಷಿತ ಬೆಂಬಲ ದೊರೆಯದ ಹಿನ್ನೆಲೆಯಲ್ಲಿ ತಮ್ಮನ್ನು ಬೆಂಬಲಿಸದ ಜನರನ್ನು ಗುರಿಯಾಗಿಸುವ ಪ್ರಯತ್ನಗಳು ನಡೆಯುತ್ತಿವೆ. ಅಲ್ಪಸಂಖ್ಯಾತ ಸಮುದಾಯದ ಜನರನ್ನು ಊರು ಮತ್ತು ಮನೆ ತೊರೆಯುವಂತೆ ಮಾಡುವ ಆರೋಪಗಳು ಹಾಗೂ ಜನರ ಹಕ್ಕುಗಳಿಗೆ ಧಕ್ಕೆ ತರುವ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕು ಮತ್ತು ಗೌರವ ದೊರೆಯಬೇಕು. ಜನರಲ್ಲಿ ಭಯ ಹುಟ್ಟಿಸುವ ಬದಲು ಸಂವಿಧಾನಾತ್ಮಕ ಮೌಲ್ಯಗಳನ್ನು ಎತ್ತಿಹಿಡಿಯುವ ಅಗತ್ಯವಿದೆ. ಇಂತಹ ಬೆಳವಣಿಗೆಗಳನ್ನು ಎದುರಿಸಲು ಜನರು ಒಗ್ಗಟ್ಟಿನಿಂದ ನಿಂತು ತಮ್ಮ ಹಕ್ಕುಗಳ ರಕ್ಷಣೆಗೆ ಮುಂದಾಗಬೇಕು ಎಂದು ಅವರು ಕರೆ ನೀಡಿದರು.
ಕರ್ನಾಟಕದ ಜಲ ಮತ್ತು ಭೂ ನಿರ್ವಹಣಾ ಸಂಸ್ಥೆ (ವಾಲ್ಮಿ, ಧಾರವಾಡ) ಮಾಜಿ ನಿರ್ದೇಶಕ ಡಾ.ರಾಜೇಂದ್ರ ಪೋದ್ದಾರ ಮಾತನಾಡಿ, ಪ್ರಜಾಪ್ರಭುತ್ವದ ಶಕ್ತಿ, ಅಂತಃಶಕ್ತಿಯನ್ನು ಈಗ ಪರೀಕ್ಷಿಸುವ ಘಟನೆಗಳು ನಡೆಯುತ್ತಿವೆ. ಇದರ ವಿರುದ್ಧ ಇಡೀ ಭಾರತದ ಜನತೆ ಎದ್ದು ನಿಂತಿದ್ದಾರೆ. ಇಡೀ ಭಾರತದಾದ್ಯಂತ ಚಳವಳಿ ನಡೆಯುತ್ತಿವೆ. ಪ್ರಜಾಪ್ರಭುತ್ವದ ನಿಜವಾದ ಮೌಲ್ಯಗಳ ಆಧಾರದ ಮೇಲೆ ಆರಿಸಿ ಬಂದರೆ, ಅವರಿಗೆ ನಾವು ಗೌರವ ಕೊಡಬಹುದು. ಅವರು ಕಳ್ಳತನದಿಂದ ಹಿಂಬಾಗಿಲಿನಿಂದ ಆರಿಸಿ ಬಂದು ಅಧಿಕಾರ ನಡೆಸುತ್ತಿದ್ದಾರೆ. ಅವರಿಗೆ ಒಂದು ಅಂತ್ಯ ನಾವು ಕಾಣಿಸಬೇಕಾಗಿದೆ ಎಂದು ಹೇಳಿದರು.
ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಸದಸ್ಯೆ ಲಿನೆಟ್ ಡಿಸೋಜಾ, ಸಾಮಾಜಿಕ ಕಾರ್ಯಕರ್ತೆ ಶಾರದಾ ದಾಬಡೆ ಮಾತನಾಡಿದರು.
ಧರಣಿಯಲ್ಲಿ ಸಿಐಟಿಯುನ ಮಹೇಶ ಪತ್ತಾರ, ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಬಿ.ಎಸ್. ಸೊಪ್ಪಿನ, ಎಚ್.ಜಿ. ದೇಸಾಯಿ, ಬಿ.ಐ. ಇಳಗೇರ, ಬಿ.ಎನ್. ಪೂಜಾರಿ ಮತ್ತಿತರರಿದ್ದರು.