×
Ad

'ಐಐಐಟಿ' ಧಾರವಾಡದ ವಿದ್ಯಾರ್ಥಿಗೆ ನಿರಾಳತೆ ತಂದ ‘ಪಿಎಂ ಯಶಸ್ವಿ' ವಿದ್ಯಾರ್ಥಿವೇತನ

Update: 2026-03-10 15:39 IST

ಸಾಂದರ್ಭಿಕ ಚಿತ್ರ | PC : Gemini AI

ಧಾರವಾಡ : ಧಾರವಾಡದ 'ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಶನ್ ಟೆಕ್ನಾಲಜಿ'(ಐಐಐಟಿ)ಯ ವಿದ್ಯಾರ್ಥಿಯೊಬ್ಬರು 'ಸದೃಢ ಭಾರತಕ್ಕಾಗಿ ಪಿಎಂ ಯುವ ಸಾಧಕರ ವಿದ್ಯಾರ್ಥಿವೇತನ ಪ್ರಶಸ್ತಿ ಯೋಜನೆ' (ಪಿಎಂ ಯಶಸ್ವಿ) ಅಡಿಯಲ್ಲಿ ನೆರವು ಪಡೆದ ಹಿನ್ನೆಲೆಯಲ್ಲಿ ಪ್ರಧಾನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ವಿದ್ಯಾರ್ಥಿವೇತನ ಮಂಜೂರಾತಿ ವಿಳಂಬದಿಂದ ಉಂಟಾಗಿದ್ದ ಆರ್ಥಿಕ ಸಂಕಷ್ಟವು ಕುಂದುಕೊರತೆ ನಿವಾರಣೆ ಬಳಿಕ ಬಗೆಹರಿದಿದ್ದು, ವಿದ್ಯಾರ್ಥಿ ರಾಕೇಶ್ ಗಡುಪುಡಿ ಅವರು ಪ್ರಧಾನ ಮಂತ್ರಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ

ರಾಕೇಶ್ ಅವರು ಈ ಹಿಂದೆ ಪ್ರಧಾನಿಗೆ ಪತ್ರ ಬರೆದು, ತಾವು ಬಡ ಕುಟುಂಬದಿಂದ ಬಂದವರು ಮತ್ತು ತಮ್ಮ ಶಿಕ್ಷಣವನ್ನು ಬೆಂಬಲಿಸಲು ವಿದ್ಯಾರ್ಥಿವೇತನವು ನಿರ್ಣಾಯಕವಾಗಿದೆ ಎಂದು ತಿಳಿಸಿದ್ದರು. ಕಾಲೇಜಿನ ಮೊದಲ ವರ್ಷದಲ್ಲಿ ವಿದ್ಯಾರ್ಥಿವೇತನ ಯೋಜನೆಯ ಬಗ್ಗೆ ತಮಗೆ ತಿಳಿದಿರಲಿಲ್ಲ. ಆದರೆ, ಅದರ ಬಗ್ಗೆ ತಿಳಿದ ನಂತರ ಅವರು ತಮ್ಮ ಎರಡನೇ ವರ್ಷದಲ್ಲಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿದ್ದಾಗಿ ಅವರು ಪತ್ರದಲ್ಲಿ ತಿಳಿಸಿದ್ದರು.

ಅರ್ಜಿಯನ್ನು ಸಂಸ್ಥೆಯು ಅನುಮೋದಿಸಿತ್ತಾದರೂ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಂತಿಮ ಅನುಮೋದನೆ ಜನವರಿ 2025 ರಿಂದ ಬಾಕಿ ಉಳಿದಿತ್ತು. ಈ ವಿಳಂಬವು ಆರ್ಥಿಕ ಸಂಕಷ್ಟಕ್ಕೆ ಕಾರಣವಾಗುತ್ತಿದೆ ಮತ್ತು ಅಧ್ಯಯನದತ್ತ ಗಮನ ಕೇಂದ್ರೀಕರಿಸುವ ತಮ್ಮ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಿಯವರ ನೆರವು ಕೋರಿ ಬರೆದ ಪತ್ರದಲ್ಲಿ ರಾಕೇಶ್‌ ಅವರು ತಿಳಿಸಿದ್ದರು. ಪ್ರಕ್ರಿಯೆಯಲ್ಲಿನ ವಿಳಂಬದಿಂದಾಗಿ ಅರ್ಹ ವಿದ್ಯಾರ್ಥಿಗಳು ತೊಂದರೆ ಎದುರಿಸದಂತೆ ತ್ವರಿತ ಅನುಮೋದನೆ ನೀಡಬೇಕೆಂದು ಅವರು ವಿನಂತಿಸಿದ್ದರು.

ಈ ಸಮಸ್ಯೆ ಪರಿಹಾರವಾದ ಬಳಿಕ ಮತ್ತು ವಿದ್ಯಾರ್ಥಿವೇತನವನ್ನು ಮಂಜೂರು ಮಾಡಿದ ನಂತರ, ರಾಕೇಶ್ ಅವರು ಡಿಸೆಂಬರ್ 2025 ರಲ್ಲಿ ಪ್ರಧಾನಿಯವರಿಗೆ ಮತ್ತೆ ಪತ್ರ ಬರೆದು, ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಅವರು ಬರೆದ ಪತ್ರದಲ್ಲಿ, "ದೀರ್ಘಕಾಲದ ಅಭಿಮಾನಿಯಾಗಿ, ಎಲ್ಲರನ್ನೂ ಒಳಗೊಳ್ಳುವ ಭಾರತವನ್ನು ನಿರ್ಮಿಸುವ ನಿಮ್ಮ ದೂರದೃಷ್ಟಿ ಮತ್ತು ಸಮರ್ಪಣೆಯಿಂದ ನಾನು ಸದಾ ಸ್ಫೂರ್ತಿ ಪಡೆದಿದ್ದೇನೆ. ದೇಶದ ಯುವಕರಿಗೆ ನಿಮ್ಮ ಬದ್ಧತೆ ಮತ್ತು ಪಾರದರ್ಶಕ ಆಡಳಿತವು 'ಪಿಎಂ ಕುಂದುಕೊರತೆ ಪೋರ್ಟಲ್'ನಂತಹ ವೇದಿಕೆಗಳ ಮೂಲಕ ಸ್ಪಷ್ಟವಾಗಿದೆ," ಎಂದು ಉಲ್ಲೇಖಿಸಿದ್ದಾರೆ.

ಸಮಸ್ಯೆಯ ಪರಿಹಾರದ ನಂತರ, ವಿದ್ಯಾರ್ಥಿವೇತನದ ಬೆಂಬಲವು ತನ್ನ ಮತ್ತು ಕುಟುಂಬಕ್ಕೆ ಅಮೂಲ್ಯವಾಗಿದೆ ಎಂದು ರಾಕೇಶ್ ಪತ್ರದಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News