ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ ರೆಫರಲ್ ಲೆಟರ್ ನಿಂದ ಸಂಕಷ್ಟ: ವಿಧಾನಸಭಾ ಅಧಿವೇಶನದಲ್ಲಿ ಧ್ವನಿ ಎತ್ತಿದ ಶಾಸಕ ಹರೀಶ್ ಪೂಂಜಾ
ಮಂಗಳೂರು: ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆಗೆ ಆಯಾ ಜಿಲ್ಲಾಸ್ಪತ್ರೆಯಿಂದ ಉಲ್ಲೇಖ ಪತ್ರ (ರೆಫರಲ್ ಲೆಟರ್) ತರುವುದಕ್ಕೆ ಕಷ್ಟವಾಗುವುದಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ತಿಳಿಸಿದರು.
ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ಪಡೆಯಲು ಆಯಾ ಜಿಲ್ಲಾಸ್ಪತ್ರೆಗಳಿಂದ ರೆಫರಲ್ ಲೆಟರ್ (ಉಲ್ಲೇಖ ಪತ್ರ ) ತರಬೇಕೆಂಬ ನಿಯಮದಿಂದ ಎಂ.ಐ.ಒ ಸ್ಪೆಷಾಲಿಟಿ ಕ್ಯಾನ್ಸರ್ ಆಸ್ಪತ್ರೆಯ ಕ್ಯಾನ್ಸರ್ ರೋಗಿಗಳಿಗೆ ವಿನಾಯಿತಿ ನೀಡಬೇಕು. ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆ ಹೊರತು ಪಡಿಸಿದರೆ ರಾಜ್ಯದಲ್ಲಿಯೇ ಅತಿ ಹೆಚ್ಚು ಕ್ಯಾನ್ಸರ್ ರೋಗಿಗಳನ್ನು ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಚಿಕಿತ್ಸೆ ನೀಡುತ್ತಿದೆ. ಕ್ಯಾನ್ಸರ್ ಚಿಕಿತ್ಸೆಗೆ ರೋಗಿಗಳು ಮತ್ತವರ ಕುಟುಂಬಸ್ಥರು ದೂರದ ಊರುಗಳಿಂದ ಅಥವಾ ಬೇರೆ ಜಿಲ್ಲೆಗಳಿಂದ ಎಂ.ಐ. ಒ ಕ್ಯಾನ್ಸರ್ ಆಸ್ಪತ್ರೆ ಮಂಗಳೂರಿಗೆ ಪ್ರತಿದಿನ ಬರುತ್ತಾರೆ. ಚಿಕಿತ್ಸೆಗಾಗಿ ಕೇವಲ ಒಂದೇ (ಉಲ್ಲೇಖ ಪತ್ರ)ರೆಫರಲ್ ಲೆಟರ್ ಗಾಗಿ ಎರಡೆರಡು ಬಾರಿ ದೂರದ ಜಿಲ್ಲೆಗಳಿಗೆ ಪ್ರಯಾಣಿಸಿ ಮತ್ತೆ ಮಂಗಳೂರು ತಲುಪಬೇಕಾಗುತ್ತದೆ. ಈ ರೀತಿಯ ವೃಥಾ ಅಲೆದಾಟ ಗಳಿಂದ ಕ್ಯಾನ್ಸರ್ ರೋಗಿಗಳಿಗೆ ಸಾಕಷ್ಟು ಪ್ರಯಾಣದ ತ್ರಾಸ ಉಂಟಾಗಿ ಬವಣೆ ಪಡುತ್ತಿದ್ದಾರೆ ಜೊತೆಗೆ ಖರ್ಚು ವೆಚ್ಚಗಳು ದ್ವಿಗುಣ ಗೊಂಡು ತೀವ್ರ ತೊಂದರೆ ಉಂಟಾಗುತ್ತಿದೆ ಎಂದವರು ಸದನದ ಗಮನಸೆಳೆದರು.
ನೆರೆಯ ರಾಜ್ಯವಾದ ಕೇರಳದಲ್ಲಿ ಕ್ಯಾನ್ಸರ್ ರೋಗಿಗಳು ಯಾವುದೇ ಉಲ್ಲೇಖ ಪತ್ರವಿಲ್ಲದೆ ನೇರವಾಗಿ ಕರ್ನಾಟಕದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೇರೀತಿ ನಮ್ಮಲ್ಲೂ ಅನುಕೂಲ ವ್ಯವಸ್ಥೆ ಕಲ್ಪಿಸಬೇಕು ಎಂದವರು ರಾಜ್ಯ ಆರೋಗ್ಯ ಸಚಿವರನ್ನು ಒತ್ತಾಯಿಸಿದರು.
ಅಲ್ಲದೆ ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು 15 ವರ್ಷಗಳ ಹಳೆಯ ದರದ ಬದಲಿಗೆ ಪರಿಷ್ಕೃತ ದರಪಟ್ಟಿಯನ್ನು ಇತರ ರಾಜ್ಯಗಳಂತೆ ಕರ್ನಾಟಕ ರಾಜ್ಯದಲ್ಲಿ ಯೂ ಜಾರಿಗೆ ತರಬೇಕು. ಪ್ರಸ್ತುತ ಅತ್ಯಂತ ಹಳೆಯ ದರಪಟ್ಟಿ ಚಾಲ್ತಿಯಲ್ಲಿರುವುದರಿಂದ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ಪಡೆಯಲು ಅನಾನುಕೂಲವಾಗುತ್ತಿದೆ. ಇತರ ರಾಜ್ಯಗಳು ಈಗಾಗಲೇ ಪರಿಷ್ಕೃತ ದರಪಟ್ಟಿ ಅನುಷ್ಠಾನ ಗೊಳಿಸಿರುತ್ತದೆ. ಈ ಎಲ್ಲ ಅಂಶಗಳನ್ನು ಮನಗಂಡು ಕ್ಯಾನ್ಸರ್ ರೋಗಿಗಳ ಹಿತದೃಷ್ಟಿಯಿಂದ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರವಾಗಿ ಜಾರಿಗೊಳಿಸುವಂತೆ ಮನವಿ ಮಾಡಿದರು.