ಜಪಾನ್‍ನಲ್ಲಿ ಪ್ರಬಲ ಭೂಕಂಪ | 50 ಮಂದಿಗೆ ಗಾಯ : ಹೆದ್ದಾರಿ, ಕಟ್ಟಡಗಳಿಗೆ ಹಾನಿ ; ವಿದ್ಯುತ್, ರೈಲು ಸೇವೆ ವ್ಯತ್ಯಯ

Update: 2026-07-28 15:01 IST

ಸಾಂದರ್ಭಿಕ ಚಿತ್ರ (PTI)

ಟೋಕಿಯೋ, ಜು.28: ಜಪಾನ್‍ನ ದಕ್ಷಿಣ ಭಾಗದ ಕ್ಯೂಶು ದ್ವೀಪದ ಕುಮಮೊಟೊ ಪ್ರಾಂತದಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಸಮುದ್ರದ ಮೇಲ್ಮೈಯಿಂದ 10 ಕಿಲೋಮೀಟರ್ ಆಳದಲ್ಲಿ ಭೂಕಂಪನದ ಕೇಂದ್ರಬಿಂದು ದಾಖಲಾಗಿದೆ ಎಂದು ಜಪಾನ್ ಹವಾಮಾನ ಇಲಾಖೆ ತಿಳಿಸಿದೆ.

ಕುಮಾಮೊಟೊ ಪ್ರಾಂತದಲ್ಲಿ ಸ್ಥಳೀಯ ಸಮಯ ಮಧ್ಯಾಹ್ನ ಸುಮಾರು 4:27 ಕ್ಕೆ ಭೂಕಂಪ ಸಂಭವಿಸಿದೆ. ಕನಿಷ್ಠ 50 ಮಂದಿ ಗಾಯಗೊಂಡಿದ್ದು, ಸೇತುವೆ, ಹೆದ್ದಾರಿಗಳು ಮತ್ತು ಕಟ್ಟಡಗಳಿಗೆ ಹಾನಿಯಾಗಿದೆ. ಹಲವೆಡೆ ರೈಲು ಸೇವೆ ಮತ್ತು ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ ಎಂದು ಪ್ರಧಾನಿ ಸನೇ ಟಕೈಚಿ ತಿಳಿಸಿದ್ದಾರೆ. ಭೂಕಂಪನದ ತೀವ್ರತೆಗೆ ಪ್ರಾದೇಶಿಕ ರಾಜಧಾನಿಯಾದ ಕುಮಾಮೊಟೊ ಸಿಟಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪ್ರದೇಶದಾದ್ಯಂತ ಕಟ್ಟಡಗಳು ಕುಸಿದು ಜನರು ಒಳಗೆ ಸಿಲುಕಿಕೊಂಡಿದ್ದಾರೆ. ಗಾಯಾಳುಗಳನ್ನು ನಗರದ ದಕ್ಷಿಣದಲ್ಲಿರುವ ಹಿಕಾವಾ ಪಟ್ಟಣದ ಆಸ್ಪತ್ರೆಗೆ ದಾಖಲಿಸಲಾಗಿದೆ. 1 ಮೀಟರ್ ಎತ್ತರದವರೆಗೆ ಅಲೆಗಳು ಏಳುವ ಸಾಧ್ಯತೆಯಿರುವುದರಿಂದ ಕರಾವಳಿ ಪ್ರದೇಶದ ನಿವಾಸಿಗಳು ತಕ್ಷಣವೇ ಎತ್ತರದ ಪ್ರದೇಶಗಳಿಗೆ ತೆರಳಲು ಸೂಚಿಸಲಾಗಿದೆ.

ಭೂಕಂಪದ ನಂತರ ಪರಮಾಣು ಸ್ಥಾವರಗಳಲ್ಲಿ ಯಾವುದೇ ತೊಂದರೆ ಕಂಡುಬಂದಿಲ್ಲ ಎಂದು ಪರಮಾಣು ನಿಯಂತ್ರಣ ಪ್ರಾಧಿಕಾರ ಸ್ಪಷ್ಟಪಡಿಸಿದೆ. ಜಪಾನ್ ಸರಕಾರವು ಕ್ಯುಶು ದ್ವೀಪದ ಕುಮಮೊಟೊ, ನಾಗಸಾಕಿ, ಕಾಗೋಶಿಮಾ, ಫುಕುವೋಕಾ, ಸಾಗಾ, ಓಯಿತಾ ಮತ್ತು ಮಿಯಾಝಾಕಿ ಪ್ರಾಂತ್ಯಗಳಿಗೆ ತುರ್ತು ಭೂಕಂಪನದ ಮುನ್ನೆಚ್ಚರಿಕೆಯನ್ನು ನೀಡಿದೆ.

ಪರಿಹಾರ ಕಾರ್ಯಗಳಿಗೆ ನೆರವಾಗಲು ಕುಮಾಮೊಟೊಗೆ ಸುಮಾರು 3,600 ಸೇನಾ ಸಿಬ್ಬಂದಿಯನ್ನು ರವಾನಿಸಲಾಗಿದೆ ಎಂದು ಪ್ರಧಾನಿ ತಿಳಿಸಿದ್ದಾರೆ. ಪ್ರಮುಖ ಭೂಕಂಪನದ ನಂತರ 1 ರಿಂದ 4 ತೀವ್ರತೆಯ 60ಕ್ಕೂ ಹೆಚ್ಚು ಪಶ್ಚಾತ್ ಕಂಪನಗಳು ಸಂಭವಿಸಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಶಾಪಿಂಗ್ ಮಾಲ್ ಕುಸಿತ: ಹಲವರ ಮೃತಪಟ್ಟಿರುವ ಶಂಕೆ

ಭೂಕಂಪ ಸಂಭವಿಸಿದ ಕೆಲವೇ ಕ್ಷಣಗಳಲ್ಲಿ ಕುಮಮೊಟೊ ಪ್ರಾಂತದ ಕಾಶಿಮಾ ಪಟ್ಟಣದಲ್ಲಿರುವ `ಅಯಾನ್ ಮಾಲ್' ನಲ್ಲಿ ಸ್ಫೋಟ ಸಂಭವಿಸಿದೆ. ಮಾಲ್‍ನ ಎರಡನೇ ಮಹಡಿ ಕುಸಿದು ಬಿದ್ದು, ಅದರೊಳಗೆ ಬೃಹತ್ ಸಂಖ್ಯೆಯ ಜನರು ಸಿಲುಕಿಕೊಂಡಿದ್ದಾರೆ ಎಂದು ಸ್ಥಳೀಯ ಅಗ್ನಿಶಾಮಕ ಸಿಬ್ಬಂದಿಯನ್ನು ಉಲ್ಲೇಖಿಸಿ ಎನ್‍ಎಚ್‍ಕೆ ಸುದ್ದಿಸಂಸ್ಥೆ ವರದಿ ಮಾಡಿದೆ.

ಈ ಘಟನೆಯಲ್ಲಿ ಹಲವರು ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಸಿದ್ಧ ಕುಮಮೊಟೊ ಕೋಟೆಗೆ ಹಾನಿ

ಜಪಾನ್‍ನ ಅತ್ಯಂತ ಹಳೆಯ, ಅತ್ಯಂತ ಭವ್ಯವಾದ ಮತ್ತು ಪ್ರಸಿದ್ಧ ಕೋಟೆಗಳಲ್ಲಿ ಒಂದಾದ ಕುಮಮೊಟೊ ಕೋಟೆಯು ಭೂಕಂಪದಲ್ಲಿ ಹಾನಿಗೊಳಗಾಗಿದೆ.

ಕುಮಮೊಟೊ ಪ್ರಾಂತದಲ್ಲಿರುವ ಈ ಶತಮಾನಗಳಷ್ಟು ಹಳೆಯದಾದ ಕೋಟೆಯ ಕಲ್ಲಿನ ಗೋಡೆಯು ಭಾಗಶಃ ಕುಸಿದಿರುವುದು ಮತ್ತು ಕಲ್ಲುಗಳು ನೆಲಕ್ಕೆ ಉರುಳಿ ಬಿದ್ದಿರುವುದು ವೀಡಿಯೊಗಳಲ್ಲಿ ಕಂಡುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News