ನೀರವ್ ಮೋದಿಯನ್ನು ಹಸ್ತಾಂತರಿಸದ ಕಾರಣ ಅಕ್ರಮ ವಲಸಿಗರನ್ನು ವಾಪಸು ಕರೆಸಿಕೊಳ್ಳಲು ಭಾರತ ನಿರಾಕರಿಸಿದೆ; ಯುಕೆ ಮಾಜಿ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್

Update: 2026-07-28 10:27 IST

                                       Photo Credit: timesofindia

ಲಂಡನ್: ತಲೆಮರೆಸಿಕೊಂಡಿರುವ ಆಭರಣ ವ್ಯಾಪಾರಿ ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸದ ಹಿನ್ನೆಲೆಯಲ್ಲಿ ಬ್ರಿಟನ್ನಲ್ಲಿರುವ ಸಾವಿರಾರು ಅಕ್ರಮ ಭಾರತೀಯ ವಲಸಿಗರನ್ನು ವಾಪಸ್ ಕರೆಸಿಕೊಳ್ಳಲು ಭಾರತ ಸರ್ಕಾರ ನಿರಾಕರಿಸಿದೆ ಎಂದು ಯುಕೆಯ ಮಾಜಿ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಹೇಳಿದ್ದಾರೆ ಎಂದು timesofindia ವರದಿ ಮಾಡಿದೆ.

ಡೈಲಿ ಟೆಲಿಗ್ರಾಫ್ ವರದಿಗಾರರಾದ ರಾಬ್ ಮೆಂಡಿಕ್ ಮತ್ತು ಮಿಕ್ ಬ್ರೌನ್ ಆಯೋಜಿಸಿದ ಡೈಮಂಡ್ ಕಿಂಗ್ ಪಾಡ್ಕಾಸ್ಟ್ನ ನಾಲ್ಕನೇ ಭಾಗದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

ಕನ್ಸರ್ವೇಟಿವ್‌ ಪಕ್ಷದ ಸದಸ್ಯೆಯಾಗಿರುವ ಪ್ರೀತಿ ಪಟೇಲ್ 2019 ರಿಂದ 2022 ರವರೆಗೆ ಗೃಹ ಕಾರ್ಯದರ್ಶಿ ಹುದ್ದೆಯಲ್ಲಿದ್ದರು. 2019 ರಲ್ಲಿ ನೀರವ್ ಮೋದಿ ಲಂಡನ್ನಲ್ಲಿ ಬಹಿರಂಗವಾಗಿ ವಾಸಿಸುತ್ತಿರುವುದನ್ನು ಡೈಲಿ ಟೆಲಿಗ್ರಾಫ್ ವರದಿಗಾರರಾದ ರಾಬ್ ಮೆಂಡಿಕ್ ಮತ್ತು ಮಿಕ್ ಬ್ರೌನ್ ಅವರು ಪತ್ತೆಹಚ್ಚಿದ್ದರು.

2021 ರಲ್ಲಿ ನೀರವ್ ಹಸ್ತಾಂತರಕ್ಕೆ ಸಹಿ ಹಾಕಿದ್ದ ಪಟೇಲ್, ಏಳು ವರ್ಷಗಳ ನಂತರವೂ ನೀರವ್ ಲಂಡನ್ನಲ್ಲೇ ಇರುವುದಕ್ಕೆ ತಮಗೆ ಆಘಾತವಾಗಿದೆ ಎಂದು ಪಾಡ್ಕಾಸ್ಟ್ನಲ್ಲಿ ತಿಳಿಸಿದ್ದಾರೆ.

“ನೀರವ್‌ ರನ್ನು ಗಡಿಪಾರು ಮಾಡಲು ಬ್ರಿಟನ್ ವಿಫಲವಾಗಿರುವುದಕ್ಕೆ ಭಾರತ ತೀವ್ರ ಆಕ್ರೋಶಗೊಂಡಿದೆ ಮತ್ತು ವೀಸಾ ಅವಧಿ ಮುಗಿದಿದ್ದರೂ ಬ್ರಿಟನ್ನಲ್ಲಿ ಉಳಿದುಕೊಂಡಿರುವ ಭಾರತೀಯರನ್ನು ವಾಪಸ್ ಕರೆಸಿಕೊಳ್ಳುವ ವಿಷಯದಲ್ಲಿ ಭಾರತ ಸರ್ಕಾರ ಬಲವಾದ ವಿರೋಧ ವ್ಯಕ್ತಪಡಿಸಿದೆ “ಎಂದು ಅವರು ಹೇಳಿದರು.

“ಯುಕೆಯಲ್ಲಿ ಬಹಳ ಹೆಚ್ಚಿನ ಸಂಖ್ಯೆಯ ಅಕ್ರಮ ಭಾರತೀಯ ವಲಸಿಗರಿದ್ದಾರೆ . ತಿರಸ್ಕೃತಗೊಂಡ ಆಶ್ರಯಾಕಾಂಕ್ಷಿಗಳನ್ನು ವಾಪಸ್ ಸ್ವೀಕರಿಸಲು ಭಾರತವನ್ನು ಒಪ್ಪಿಸುವುದು ನನಗೆ ದೊಡ್ಡ ಸವಾಲಾಗಿತ್ತು. ನೀರವ್ ಮೋದಿಯಂತಹ ಪ್ರಮುಖ ಪ್ರಕರಣ ನಮ್ಮ ಬಳಿ ಇರುವುದೇ ಇದಕ್ಕೆ ಕಾರಣ ಎಂದು ನಾನು ಬಲವಾಗಿ ನಂಬುತ್ತೇನೆ” ಎಂದು ಎಂದು ಪಟೇಲ್ ಹೇಳಿದ್ದಾರೆ.

ಅಕ್ರಮ ವಲಸಿಗರನ್ನು ಹೊತ್ತು ತರುವ ವಿಶೇಷ ವಿಮಾನಗಳನ್ನು ಸ್ವೀಕರಿಸಲು ಭಾರತ ನಿರಾಕರಿಸಿತು ಮತ್ತು ಯುಕೆ ನೀಡಿದ ಹೆಸರುಗಳನ್ನು ಪರಿಶೀಲಿಸಲು ತೊಂದರೆ ಇದೆ ಎಂದು ಹೇಳಿತು ಎಂದು ಅವರು ಆರೋಪಿಸಿದ್ದಾರೆ.

ನೀರವ್ ಮೋದಿ ಭಾರತದ ಜೈಲಿನಲ್ಲಿ ತನ್ನ ಶಿಕ್ಷೆಯನ್ನು ಅನುಭವಿಸಬೇಕಿತ್ತು ಎಂದು ಈ ವೇಳೆ ಪಟೇಲ್ ಹೇಳಿದರು.

ಈ ಆರೋಪವನ್ನು ನಿರಾಕರಿಸಿರುವ ಓವರ್ಸೀಸ್ ಫ್ರೆಂಡ್ಸ್ ಆಫ್ ಬಿಜೆಪಿ ,ಯುಕೆ ಮತ್ತು ಯುರೋಪ್ ಮುಖ್ಯಸ್ಥ ಕುಲದೀಪ್ ಶೇಖಾವತ್ , ಭಾರತವು ಅಕ್ರಮ ವಲಸಿಗರನ್ನು ವಾಪಸ್ ಕರೆಸಿಕೊಳ್ಳುತ್ತಿದೆ. ಭಾರತ ಎಂದಿಗೂ ಅದನ್ನು ವಿರೋಧಿಸಿಲ್ಲ ಎಂದು ಹೇಳಿದ್ದಾರೆ.

ಪ್ರಪಂಚದ ಯಾವುದೇ ಭಾಗದಲ್ಲಿ ಅಕ್ರಮ ವಲಸೆಯನ್ನು ಭಾರತ ಬೆಂಬಲಿಸುವುದಿಲ್ಲ ಎಂದು ಶೇಖಾವತ್ ಸ್ಪಷ್ಟಪಡಿಸಿದ್ದಾರೆ.

ಹಸ್ತಾಂತರವನ್ನು ವಿರೋಧಿಸಿ ಕಾನೂನು ಹೋರಾಟಕ್ಕಾಗಿ 1 ದಶಲಕ್ಷ ಪೌಂಡ್ಗಿಂತಲೂ ಹೆಚ್ಚು ಹಣವನ್ನು ನೀರವ್ ಮೋದಿ ಖರ್ಚು ಮಾಡಿದ್ದಾರೆ. ಪ್ರಸ್ತುತ ಅವರು ಲಂಡನ್ನ ಪೆಂಟನ್ವಿಲ್ ಜೈಲಿನಲ್ಲಿದ್ದಾರೆ. ಹಸ್ತಾಂತರ ತಡೆಯಲು ಅವರು ಯುರೋಪಿಯನ್ ಮಾನವ ಹಕ್ಕುಗಳ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ಸೋತಿದ್ದಾರೆ ಎಂದು ಈ ತಿಂಗಳ ಆರಂಭದಲ್ಲಿ ವದಂತಿಗಳು ಹರಡಿದ್ದವು.

ಈ ಬಗ್ಗೆ ಪ್ರತಿಕ್ರಿಯಿಸಿದ ನೀರವ್ ಅವರ ಪರ ವಕೀಲ ಎಡ್ವರ್ಡ್ ಫಿಟ್ಜ್ಗೆರಾಲ್ಡ್ ಕೆಸಿ, "ಏನೇ ಸಂಭವಿಸಿದರೂ ನಾವು ಹೋರಾಟ ಮುಂದುವರಿಸುತ್ತೇವೆ" ಎಂದು ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾಗೆ ವರದಿ ಮಾಡಿದೆ.

ಯುಕೆಯಲ್ಲಿರುವ ಅಕ್ರಮ ಭಾರತೀಯ ವಲಸಿಗರ ನಿಖರ ಸಂಖ್ಯೆ ತಿಳಿದಿಲ್ಲ. 2018 ರಲ್ಲಿ 1,00,000 ಜನರಿದ್ದಾರೆ ಎಂಬ ಅಂಕಿಅಂಶ ಹರಿದಾಡುತ್ತಿತ್ತಾದರೂ, ಭಾರತೀಯ ಅಧಿಕಾರಿಗಳು ಅದನ್ನು ಆಗಲೇ ತಳ್ಳಿಹಾಕಿದ್ದರು. ಮೇ 2021 ರಲ್ಲಿ ಬ್ರಿಟನ್ ಮತ್ತು ಭಾರತ ವಲಸೆ ಮತ್ತು ಚಲನಶೀಲತೆ ಕುರಿತು ಒಪ್ಪಂದಕ್ಕೆ ಸಹಿ ಹಾಕಿದ್ದು, ಎರಡೂ ದೇಶಗಳಲ್ಲಿ ಅಕ್ರಮವಾಗಿ ವಾಸಿಸುವವರನ್ನು ಆಯಾ ದೇಶಗಳಿಗೆ ವಾಪಸ್ ಕಳುಹಿಸುವುದಾಗಿ ಭರವಸೆ ನೀಡಿದ್ದವು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News