ತುರ್ಕಿಯೆ ದೇಶಕ್ಕೆ ಎಫ್- 35 ವಿಮಾನ ಮಾರಾಟ : ನೆತನ್ಯಾಹು ವಿರೋಧ ತಳ್ಳಿಹಾಕಿದ ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್ | Photo Credit : PTI
ವಾಶಿಂಗ್ಟನ್, ಜು.28: ತುರ್ಕಿಯೆ ದೇಶಕ್ಕೆ ಎಫ್-35 ಯುದ್ಧ ವಿಮಾನಗಳನ್ನು ಮಾರಾಟ ಮಾಡುವ ಸಾಧ್ಯತೆಯ ಕುರಿತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವ್ಯಕ್ತಪಡಿಸಿದ ವಿರೋಧವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ತಳ್ಳಿಹಾಕಿದ್ದಾರೆ. ಅಮೆರಿಕ ತನ್ನ ಮಿತ್ರರಾಷ್ಟ್ರಗಳಿಗೆ ಏನನ್ನು ಮಾರಾಟ ಮಾಡಬೇಕು ಎಂದು ಯಾರೂ ಸರ್ವಾಧಿಕಾರ ನಡೆಸಲು ಸಾಧ್ಯವಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.
`ನಾವು ಏನನ್ನು ಮಾರಾಟ ಮಾಡಬೇಕು ಎಂದು ಯಾರೂ ನನಗೆ ಹೇಳಲು ಸಾಧ್ಯವಿಲ್ಲ' ಎಂದು ಟ್ರಂಪ್ ಏರ್‍ಫೋರ್ಸ್ ಒನ್ ವಿಮಾನದಲ್ಲಿ ಸುದ್ದಿಗಾರರಿಗೆ ತಿಳಿಸಿದರು. ತುರ್ಕಿಯೆ ಇಸ್ರೇಲ್ ಅಥವಾ ನೆತನ್ಯಾಹು ಅವರ `ದೊಡ್ಡ ಅಭಿಮಾನಿಯಲ್ಲ' ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಅಮೆರಿಕ ಮತ್ತು ತುರ್ಕಿಯೆ ನಡುವಿನ ಸಂಬಂಧವು ಬಲವಾಗಿದೆ. ತುರ್ಕಿಯೆ ಒಂದು ಅದ್ಭುತ ಮಿತ್ರರಾಷ್ಟ್ರವಾಗಿದ್ದು ಅವರು ಅನೇಕ ಕ್ಷೇತ್ರಗಳಲ್ಲಿ ಅತ್ಯುತ್ತಮ ಕೆಲಸ ಮಾಡಿದ್ದಾರೆ' ಎಂದು ಟ್ರಂಪ್ ಹೇಳಿದರು.
ತುರ್ಕಿಯೆ ದೇಶಕ್ಕೆ ಸುಧಾರಿತ ಎಫ್-35 ಸ್ಟೆಲ್ತ್ ಯುದ್ಧ ವಿಮಾನಗಳನ್ನು ಪೂರೈಸುವುದು ಮಧ್ಯಪ್ರಾಚ್ಯದಲ್ಲಿ ಅಧಿಕಾರದ ಸಮತೋಲನವನ್ನು ಬದಲಾಯಿಸಬಹುದು ಎಂದು ನೆತನ್ಯಾಹು ಎಚ್ಚರಿಸಿದ ನಂತರ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.