Mali | 44 ಕೋಟಿ ರೂ. ಪಾವತಿಸಿದ ಬಳಿಕ ಭಾರತೀಯ ಮೂಲದ ವಜ್ರದ ವ್ಯಾಪಾರಿ ಬಿಡುಗಡೆ
ಧೀರು ರಮಣಿ |Photo Credit : NDTV
ಬಮಾಕೊ, ಜು. 27: ಪಶ್ಚಿಮ ಆಫ್ರಿಕಾದ ಮಾಲಿ ದೇಶದಲ್ಲಿ ಅಪಹರಣಕ್ಕೊಳಗಾಗಿದ್ದರೆನ್ನಲಾದ 75 ವರ್ಷದ ಭಾರತೀಯ ಮೂಲದ ವಜ್ರದ ವ್ಯಾಪಾರಿಯನ್ನು, ಅವರ ಕುಟುಂಬವು ಸುಮಾರು 44 ಕೋಟಿ ರೂ. 'ಕಪ್ಪ ಕಾಣಿಕೆ' ನೀಡಿದ ಬಳಿಕ ಬಿಡುಗಡೆ ಮಾಡಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
ಗುಜರಾತ್ ಮೂಲದ ಉದ್ಯಮಿ ಧೀರು ರಮಣಿ ಇತ್ತೀಚೆಗಷ್ಟೇ ಮಾಲಿಯಲ್ಲಿ ಚಿನ್ನದ ಗಣಿಯೊಂದನ್ನು ಖರೀದಿಸಿ ಅಲ್ಲಿಯೇ ವಾಸಿಸುತ್ತಿದ್ದರು. ಎಪ್ರಿಲ್ ತಿಂಗಳಲ್ಲಿ ಅವರನ್ನು ಅಪಹರಿಸಲಾಗಿತ್ತು. ಪ್ರಸ್ತುತ ಅವರ ಕುಟುಂಬವು ಅಮೆರಿಕದಲ್ಲಿ ಅಂತರರಾಷ್ಟ್ರೀಯ ವಜ್ರದ ಉದ್ಯಮದಲ್ಲಿ ತೊಡಗಿಕೊಂಡಿದೆ.
ಅಪಹರಣಕಾರರು ಧೀರು ರಮಣಿ ಅವರ ಬಿಡುಗಡೆಗಾಗಿ ಆರಂಭದಲ್ಲಿ ಸುಮಾರು 100 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು. ಆದರೆ, ಅಮೆರಿಕದಲ್ಲಿರುವ ಅವರ ಕುಟುಂಬದವರು ಚೌಕಾಶಿ ನಡೆಸಿ ಮೊತ್ತವನ್ನು ಕಡಿಮೆಗೊಳಿಸಿ, ಕಳೆದ ವಾರ 44 ಕೋಟಿ ರೂ. ಪಾವತಿಸಿ ಅವರ ಬಿಡುಗಡೆಯನ್ನು ಖಚಿತಪಡಿಸಿಕೊಂಡಿದ್ದಾರೆ. ಧೀರು ರಮಣಿ ಅವರ ಕುಟುಂಬದವರು ಯಾವುದೇ ಭಾರತೀಯ ಸರ್ಕಾರಿ ಸಂಸ್ಥೆಯ ಸಹಾಯವಿಲ್ಲದೆ ಸ್ವತಂತ್ರವಾಗಿ ಈ ಮಾತುಕತೆಗಳನ್ನು ನಡೆಸಿದ್ದಾರೆ ಎಂದು ವರದಿ ಹೇಳಿದೆ.