75 ವರ್ಷಗಳಲ್ಲೇ ತ್ವರಿತ ಮುಂಗಾರು ಆಗಮನ: ಮಳೆ ಅನಾಹುತದಿಂದ ಆರು ಮಂದಿ ಮೃತ್ಯು
PC: x.com/News9Tweets
ಮುಂಬೈ: ಹವಾಮಾನ ದಾಖಲೆಗಳ ಪ್ರಕಾರ ಈ ಬಾರಿ 75 ವರ್ಷಗಳಲ್ಲೇ ಅತ್ಯಂತ ತ್ವರಿತವಾಗಿ ಮುಂಗಾರು ಮಳೆ ಆರಂಭವಾಗಿದ್ದು, ಮಹಾರಾಷ್ಟ್ರ ರಾಜಧಾನಿ ಅಕ್ಷರಶಃ ಜಲಾವೃತವಾಗಿದೆ. ನಾಲ್ಕು ರಾಜ್ಯಗಳಲ್ಲಿ ಸೋಮವಾರ ಮಳೆ ಸಂಬಂಧಿ ಅನಾಹುತಗಳಿಂದ ಕನಿಷ್ಠ ಆರು ಮಂದಿ ಜೀವ ಕಳೆದುಕೊಂಡಿದ್ದು, ಹಲವರು ನಾಪತ್ತೆಯಾಗಿದ್ದಾರೆ.
ವಾಡಿಕೆಗಿಂತ ಹದಿನೈದು ದಿನ ಮೊದಲೇ ನೈರುತ್ಯ ಮುಂಗಾರು ಮುಂಬೈಗೆ ಆಗಮಿಸಿದ್ದು, ದೇಶದ ವಾಣಿಜ್ಯ ರಾಜಧಾನಿಗೆ ಇಷ್ಟು ತ್ವರಿತವಾಗಿ ಮುಂಗಾರು ಆಗಮಿಸಿರುವುದು ಇದೇ ಮೊದಲು ಎಂದು ಹವಾಮಾನ ಇಲಾಖೆ ಹೇಳಿದೆ. ಸಿಡಿಲು ಬಡಿದು ಕನಿಷ್ಠ ನಾಲ್ಕು ಮಂದಿ ಮೃತಪಟ್ಟಿದ್ದಾರೆ ಹಾಗೂ ಮತ್ತೊಬ್ಬ ನೀರಿನಲ್ಲಿ ಮುಳುಗಿ ಜೀವ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಹವಾಮಾನ ಇಲಾಖೆ ಮುನ್ಸೂಚನೆಯನ್ನು ಆರೆಂಜ್ ಅಲರ್ಟ್ ನಿಂದ ರೆಡ್ ಅಲರ್ಟ್ ಗೆ ಪರಿಷ್ಕರಿಸಿದ್ದು, ಭಾರೀ ಮಳೆ ನಿರೀಕ್ಷಿಸಲಾಗಿದೆ. ಥಾಣೆ, ಪಾಲ್ಗರ್ ಮತ್ತು ಕೊಂಕಣ ಜಿಲ್ಲೆಗಳಲ್ಲಿ ರಸ್ತೆ, ರೈಲು ಹಳಿಗಳು, ಕೃಷಿಭೂಮಿ ಮತ್ತು ವಸತಿ ಪ್ರದೇಶಗಳು ಜಲಾವೃತವಾಗಿವೆ. ನೂರಾರು ಕುಟುಂಬಗಳನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗಿದೆ.
ಕೊಂಕಣ ಜಿಲ್ಲೆ ಸೇರಿದಂತೆ ಸಾಂಗ್ಲಿ, ಸತಾರಾ ಮತ್ತು ಕೊಲ್ಲಾಪುರದಲ್ಲಿ 10 ರಾಷ್ಟ್ರೀಯ ವಿಪತ್ತು ಸ್ಪಂದನೆ ಪಡೆ (ಎನ್‌ಡಿಆರ್‌ಎಫ್)ಗಳನ್ನು ನಿಯೋಜಿಸಲಾಗಿದೆ. ಮುಂಬೈನಲ್ಲಿ ಮೂರು ಎನ್‌ಡಿಆರ್‌ಎಫ್ ತಂಡಗಳು ಬೀಡುಬಿಟ್ಟಿವೆ. ಪರಿಹಾರ ಕಾರ್ಯಗಳಿಗೆ ಅಡಳಿತ ತಂತ್ರ ಸರ್ವಸನ್ನದ್ಧ ಸ್ಥಿತಿಯಲ್ಲಿ ಇರುವಂತೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಆದೇಶಿಸಿದ್ದಾರೆ.
ರಾಯಗಡ ಜಿಲ್ಲೆಯ ಕಾರ್ಜಾಟ್ ನಲ್ಲಿ ರೋಷನ್ ಕಾಳೇಕರ (30), ಲಾತೂರ್ ಜಿಲ್ಲೆಯ ಅಹ್ಮದ್ಪುರ ತಾಲೂಕಿನಲ್ಲಿ ವಿಕ್ರಮ್ ಕಾರಳೆ (50) ಮತ್ತು ರಂಜನಾಬಾಯಿ ಸಮುಧಿ (55) ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಕಲ್ಯಾಣ ತಾಲೂಕಿನಲ್ಲಿ ಯಶ್ ಲಾಟೆ (17) ಮೃತಪಟ್ಟಿದ್ದಾರೆ. ಪುಣೆಯ ಗುರುನಾಥ್ ಕಾಶಿನಾಥ್ ಬಂಗರ್ ಎಂಬಲ್ಲಿ ನಾಲ್ಕು ಕರುಗಳು ಕೂಡಾ ಸಿಡಿಲಿನ ಹೊಡೆತಕ್ಕೆ ಮೃತಪಟ್ಟಿವೆ. ರತ್ನಗಿರಿ ಜಿಲ್ಲೆಯಲ್ಲಿ ರಾಜೇಂದ್ರ ಕೊಳಂಬೆ (48) ಎಂಬುವವರು ಸೈಕಲ್ ನಲ್ಲಿ ತೆರಳುತ್ತಿದ್ದಾಗ ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.
ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ 21.5 ಮಿಲಿಮೀಟರ್ ಮಳೆಯಾಗಿದ್ದು, ಮೇ ತಿಂಗಳಲ್ಲಿ ಸೋಮವಾರದ ವರೆಗೆ ಒಟ್ಟು 179.5 ಮಿಲಿಮೀಟರ್ ಮಳೆ ಬಿದ್ದಿದೆ. ಮುಂದಿನ ಐದು ದಿನಗಳವರೆಗೆ ಭಾರೀ ಮಳೆ ನಿರೀಕ್ಷಿಸಲಾಗಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ಪಟ್ಟಣದಲ್ಲಿ ಮನೆ ಕುಸಿದು ಮೂರು ವರ್ಷದ ಹೆಣ್ಣುಮಗು ಮೃತಪಟ್ಟಿದೆ. ನಾಲ್ಕು ವರ್ಷದ ಸಹೋದರಿ ತೀವ್ರ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಳೆ.